ಪರಾರಿಯಾದವರನ್ನು ಕರೆತರುವ ಕಸರತ್ತು!

ಒಂಭತ್ತು ಸಾವಿರ ಕೋಟಿ ರೂಪಾಯಿಗೂ ಅಧಿಕ ಸಾಲ ಮರುಪಾವತಿಸದೆ ಲಂಡನ್​ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯರನ್ನು ಭಾರತಕ್ಕೆ ಒಪ್ಪಿಸುವ ಕುರಿತಂತೆ ಜುಲೈ 31ರಂದು ಬ್ರಿಟನಿನಲ್ಲಿ ಅಂತಿಮ ವಿಚಾರಣೆ ನಡೆಯಲಿದೆ. ಹಲವು ದೇಶಗಳ ಜತೆ ಒಪ್ಪಂದವಿದ್ದರೂ ಇಂಥ ಆರೋಪಿಗಳನ್ನು ಭಾರತಕ್ಕೆ ಕರೆತರಲು ಹರಸಾಹಸವನ್ನೇ ಮಾಡಬೇಕಾಗುತ್ತದೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಬ್ರಿಟನ್​ಗೇ ಏಕೆ ಪಲಾಯನ?

ವಿಜಯ್ ಮಲ್ಯ, ನೀರವ್ ಮೋದಿ ಸೇರಿದಂತೆ ಹಲವು ಆರೋಪಿಗಳು, ಅಪರಾಧಿಗಳು ಬ್ರಿಟನ್​ಗೇ ಪಲಾಯನಗೈಯುವುದೇಕೆ ಎಂಬ ಪ್ರಶ್ನೆ ಕಾಡುವುದುಂಟು. ಬ್ರಿಟನ್ಗೆ European convention of human rights ಸಹಿಹಾಕಿದೆ. ಇದರ ಅನುಸಾರ, ಯಾವುದೇ ವ್ಯಕ್ತಿ/ಆರೋಪಿಯನ್ನು ಹಸ್ತಾಂತರಗೊಳಿಸಿದಾಗ, ಆ ವ್ಯಕ್ತಿಯ ಪ್ರಾಣಕ್ಕೆ ಅಪಾಯವಿದ್ದಲ್ಲಿ ಇಲ್ಲವೆ ಅವನನ್ನು ಹಿಂಸಿಸುವ ಸಾಧ್ಯತೆಯಿದ್ದಲಿ, ಹಸ್ತಾಂತರದ ಹಿಂದೆ ರಾಜಕೀಯ ಕಾರಣಗಳಿದ್ದಲ್ಲಿ ನ್ಯಾಯಾಲಯ ಅಂಥ ಹಸ್ತಾಂತರವನ್ನು ನಿರಾಕರಿಸಬಲ್ಲದು. ಹೀಗಾಗಿ, ಬ್ರಿಟನ್​ಗೆ ಪರಾರಿಯಾಗುವ ಆರೋಪಿಗಳು ನ್ಯಾಯಾಲಯದ ಮೆಟ್ಟಿಲೇರಿ ಯಾವುದೋ ಸಬೂಬು, ಕಾರಣ ಹೇಳಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುವುದುಂಟು. ಅಲ್ಲದೆ, ಬ್ರಿಟನ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ತೀರ್ಪು ಹೊರಬೀಳುವ ಹೊತ್ತಿಗೆ ಸಾಕಷ್ಟು ಸಮಯಾವಕಾಶ ಸಿಗುವುದರಿಂದ ತಂತ್ರಗಳನ್ನು ಹೆಣೆಯಲು ಆರೋಪಿಗಳಿಗೆ ಅನುಕೂಲವಾಗುತ್ತದೆ ಎಂಬ ತರ್ಕವೂ ಇದೆ. ಪ್ರಸ್ತುತ, ಭಾರತ ಸರ್ಕಾರ ವಿಜಯ್ ಮಲ್ಯರನ್ನು ಬ್ರಿಟನ್​ನಿಂದ ಕರೆತರಲು ಎಲ್ಲ ಬಗೆಯ ಯತ್ನ ಮಾಡುತ್ತಿದೆ. ಈ ಕುರಿತಂತೆ ಬ್ರಿಟನ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಜುಲೈ 31ಕ್ಕೆ ಅಂತಿಮ ವಿಚಾರಣೆ ನಡೆಯಲಿದೆ. ಅಂದೇ ತೀರ್ಪು ಹೊರಬೀಳುವ ಸಾಧ್ಯತೆ ಇದ್ದು, ಮಲ್ಯ ಹಸ್ತಾಂತರ ಸಾಧ್ಯವಾದರೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಬ್ಯಾಂಕ್​ಗಳಿಗೆ ದೊಡ್ಡ ಗೆಲುವು ಸಿಗಲಿದೆ. ಮಾತ್ರವಲ್ಲ, ಅಪರಾಧ ಎಸಗಿ ಬ್ರಿಟನ್​ಗೆ ಪರಾರಿಯಾಗುವ ಅಪರಾಧಿಗಳಿಗೂ ಎಚ್ಚರಿಕೆಯ ಸಂದೇಶ ರವಾನಿಸಿದಂತಾಗುತ್ತದೆ. ಪರಾರಿಯಾಗಿದ್ದ ಆರೋಪಿಗಳ ಪೈಕಿ ಕಳೆದ 16 ವರ್ಷಗಳಲ್ಲಿ ವಿವಿಧ ರಾಷ್ಟ್ರಗಳಿಂದ 65 ಜನರನ್ನು ಭಾರತಕ್ಕೆ ಕರೆತರಲಾಗಿದೆ. 100ಕ್ಕೂ ಅಧಿಕ ಹಸ್ತಾಂತರ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಆದರೆ, ಬ್ರಿಟನ್​ನಿಂದ ಕಳೆದ 25 ವರ್ಷಗಳಲ್ಲಿ ಓರ್ವ ಆರೋಪಿಯನ್ನು ಮಾತ್ರ ಕರೆತರಲು ಸಾಧ್ಯವಾಗಿದೆ. ಆದ್ದರಿಂದ, ಮಲ್ಯ ಪ್ರಕರಣ ಕುತೂಹಲಕ್ಕೆ ಕಾರಣವಾಗಿದೆ.

ದೀರ್ಘ ಪಟ್ಟಿ!

ಬ್ರಿಟನ್ ಹೊರತುಪಡಿಸಿ 24 ರಾಷ್ಟ್ರಗಳಲ್ಲಿ ನೆಲೆಸಿರುವ/ಅಡಗಿರುವ 121 ಜನರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಮತ್ತು ಸುರಕ್ಷಾ ಏಜೆನ್ಸಿಗಳು ಯತ್ನಿಸುತ್ತಿವೆ. ಈ ಪೈಕಿ 31 ಆರೋಪಿಗಳು ಕನಿಷ್ಠ 40 ಸಾವಿರ ಕೋಟಿ ರೂ.ಗಳೊಂದಿಗೆ ಪರಾರಿಯಾಗಿದ್ದಾರೆ.

45 ಆರೋಪಿಗಳನ್ನು ಒಪ್ಪಿಸಿದ ಭಾರತ

ವಿದೇಶಗಳಲ್ಲಿ ಅಪರಾಧ ಎಸಗಿ ಭಾರತದಲ್ಲಿ ಅಡಗಿದ್ದ ಆರೋಪಿ, ಅಪರಾಧಿಗಳನ್ನು ಭಾರತ ಬೇರೆ ದೇಶಗಳಿಗೆ ಒಪ್ಪಿಸಿದ ನಿದರ್ಶನಗಳು ಹೇರಳವಾಗಿವೆ. ಒಟ್ಟು 45 ಆರೋಪಿಗಳನ್ನು ಭಾರತ ಬೇರೆ ದೇಶಗಳಿಗೆ ಒಪ್ಪಿಸಿದೆ. ಈ ಪೈಕಿ ಅತಿ ಹೆಚ್ಚು ಅಂದರೆ ಅಮೆರಿಕಕ್ಕೆ 24 ಆರೋಪಿಗಳನ್ನು ಹಸ್ತಾಂತರ ಮಾಡಿದೆ. ಮೂವರನ್ನು ಬ್ರಿಟನ್​ಗೆ ಒಪ್ಪಿಸಿದೆ.

16 ವರ್ಷಗಳಲ್ಲಿ 23 ದೇಶಗಳಿಂದ 65 ಜನರನ್ನು ಕರೆತಂದ ಸರ್ಕಾರ

ಬ್ರಿಟನ್​ನಿಂದ 17 ಜನರನ್ನು ಕರೆತರುವ ಯತ್ನ

ಬ್ರಿಟನ್​ನಲ್ಲಿ ನೆಲೆಯೂರಿರುವ 17 ಆರೋಪಿ/ಅಪರಾಧಿಗಳ ಹಸ್ತಾಂತರಕ್ಕೆ ಭಾರತ ತೀವ್ರ ಪ್ರಯತ್ನ ನಡೆಸುತ್ತಿದೆ. ಈ ಪೈಕಿ ಪ್ರಮುಖರ ಪಟ್ಟಿ ಇಲ್ಲಿದೆ.

# ವಿಜಯ್ ಮಲ್ಯ-ಉದ್ಯಮಿ, ಆರ್ಥಿಕ ಅಪರಾಧಗಳ ಆರೋಪಿ

# ಲಲಿತ್ ಮೋದಿ-ಉದ್ಯಮಿ, ಆರ್ಥಿಕ ಅಪರಾಧ, ಭ್ರಷ್ಟಾಚಾರದ ಆರೋಪಿ

# ನದೀಮ್ ಸೈಫಿ-ಸಂಗೀತಗಾರ, ಗುಲ್ಶನ್​ಕುಮಾರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ

# ಟೈಗರ್ ಹನೀಫ್-ಉಗ್ರ, 1993ರಲ್ಲಿ ಗುಜರಾತ್​ನಲ್ಲಿ ನಡೆದ ಬಾಂಬ್​ಸ್ಪೋಟ ಪ್ರಕರಣದ ಆರೋಪಿ

# ರವಿ ಶಂಕರನ್-ಸೇನಾ ರಹಸ್ಯ ಸೋರಿಕೆ ಆರೋಪಿ.

# ಸುಧೀರ್ ಚೌಧರಿ-ಉದ್ಯಮಿ, ಭ್ರಷ್ಟಾಚಾರ ಆರೋಪಿ.

31ಕ್ಕೆ ಮಲ್ಯ ಗಡಿಪಾರು ಕುರಿತು ಕೋರ್ಟ್ ತೀರ್ಪು

ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಗಡಿಪಾರು ಪ್ರಕರಣದ ಅಂತಿಮ ತೀರ್ಪು ಲಂಡನ್ ಕೋರ್ಟ್​ನಿಂದ 31ರಂದು ಹೊರಬೀಳುವ ಸಾಧ್ಯತೆ ಹೆಚ್ಚಿದೆ. ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ ಅಧಿಕಾರಿಗಳಿಗೆ 31ರಂದು ಹಾಜರಿರುವಂತೆ ಕೋರ್ಟ್ ಸೂಚಿಸಿದೆ. ಭಾರತೀಯ ಬ್ಯಾಂಕ್​ಗಳಿಗೆ 9 ಸಾವಿರ ಕೋಟಿ ರೂ. ಸಾಲ ಮರುಪಾವತಿಸದೆ ಬ್ರಿಟನ್​ನಲ್ಲಿ ನೆಲೆಸಿರುವ ಮಲ್ಯರನ್ನು ಗಡಿಪಾರು ಮಾಡಬೇಕು ಎಂದು ಕೋರಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಲಂಡನ್ ಕೋರ್ಟ್​ಗೆ ಅರ್ಜಿ ಸಲ್ಲಿಸಿವೆ.

ಪ್ರಮುಖ ಪ್ರಕರಣಗಳು

# 2015ರಲ್ಲಿ ಮೋಸ್ಟ್​ವಾಂಟೆಡ್ ಆರೋಪಿ ಛೋಟಾ ರಾಜನ್​ನನ್ನು ಇಂಡೋನೇಷ್ಯಾದಿಂದ ಭಾರತಕ್ಕೆ ತರಲಾಯಿತು.

# ರಾಜನ್ ಪ್ರಕರಣದ ಐದು ದಿನಗಳ ನಂತರ ಉಲ್ಪಾ ನಾಯಕ ಅನೂಪ್ ಚೇತಿಯಾನನ್ನು ಭಾರತಕ್ಕೆ ಹಸ್ತಾಂತರ ಮಾಡಲಾಯಿತು.

# ಪೋರ್ಚುಗಲ್​ನಿಂದ ಮೋನಿಕಾ ಬೇಡಿ ಮತ್ತು ಅಬು ಸಲೇಂ ಹಸ್ತಾಂತರ ಹಲವು ದೇಶಗಳ ಗಮನ ಸೆಳೆಯಿತು.

# ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ 10 ರಾಷ್ಟ್ರಗಳಿಂದ 14 ಆರೋಪಿಗಳನ್ನು ಭಾರತಕ್ಕೆ ತರಲಾಗಿದೆ.

# 121 ಆರೋಪಿಗಳು ಪರಾರಿಯಾಗಿ 24 ರಾಷ್ಟ್ರಗಳಲ್ಲಿ ನೆಲೆಸಿದ್ದು, ಇವರ ಗಡಿಪಾರಿಗೆ ಕೇಂದ್ರ ಸರ್ಕಾರ ಯತ್ನಿಸುತ್ತಿದೆ.

ಯಶಸ್ಸು ಸಿಕ್ಕ ಪ್ರಕರಣಗಳು

ಭಯೋತ್ಪಾದನಾ ಕೃತ್ಯಗಳಿಗೆ ಸಂಬಂಧಿಸಿದಂತೆ ಒಂಭತ್ತು ಆರೋಪಿಗಳನ್ನು ಹಸ್ತಾಂತರ ಮಾಡಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ. ಈ ಪೈಕಿ ಮೂವರು ಆರೋಪಿಗಳು 1993ರಲ್ಲಿ ಮುಂಬೈಯಲ್ಲಿ ನಡೆದ ಸರಣಿ ಬಾಂಬ್​ಸ್ಪೋಟ ಪ್ರಕರಣದ ಆರೋಪಿಗಳು. 2002ರಲ್ಲಿ ಹಲವು ಅಪರಾಧಗಳ ಆರೋಪದಲ್ಲಿ ಮುತ್ತಪ್ಪ ರೈಯನ್ನು ಯುಎಇಯಿಂದ ಭಾರತಕ್ಕೆ ಕರೆತರಲಾಯಿತು. ಅಲ್ಲದೆ, ಲೈಂಗಿಕ ದೌರ್ಜನ್ಯ ಪ್ರಕರಣಗಳ ಮೂವರು ವಿದೇಶಿ ಆರೋಪಿಗಳನ್ನು ಭಾರತಕ್ಕೆ ಕರೆತರಲಾಗಿದೆ. ಈ ಪೈಕಿ ಇಬ್ಬರು ಬ್ರಿಟಿಷ್ ಮತ್ತು ಓರ್ವ ಆಸ್ಟ್ರೇಲಿಯಾ ನಾಗರಿಕ. ಬ್ರಿಟಿಷ್ ಆರೋಪಿಗಳ ಪೈಕಿ ಓರ್ವನನ್ನು ಅಮೆರಿಕದಿಂದ, ಮತ್ತೊಬ್ಬನನ್ನು ತಾಂಜಾನಿಯಾದಿಂದ ಸೆರೆಹಿಡಿದು ತರಲಾಯಿತು.

47 ರಾಷ್ಟ್ರಗಳೊಂದಿಗೆ ಒಪ್ಪಂದ

2017ರ ಮಾರ್ಚ್ 22ರವರೆಗೆ ಜಗತ್ತಿನ 47 ರಾಷ್ಟ್ರಗಳೊಂದಿಗೆ ಭಾರತ ‘ಹಸ್ತಾಂತರ ಒಪ್ಪಂದ’ ಮಾಡಿಕೊಂಡಿದೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಸೌದಿ ಅರೇಬಿಯಾ, ಯುಎಇ ಮತ್ತು ರಷ್ಯಾ ಮಾತ್ರವಲ್ಲದೆ ನೆರೆರಾಷ್ಟ್ರಗಳಾದ ಬಾಂಗ್ಲಾದೇಶ, ನೇಪಾಳ, ಭೂತಾನ್​ನೊಂದಿಗೂ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಚೀನಾ, ಜಪಾನ್, ಪಾಕಿಸ್ತಾನದೊಂದಿಗೆ ಭಾರತ ‘ಹಸ್ತಾಂತರ ಒಪ್ಪಂದ’ ಹೊಂದಿಲ್ಲ. ಅಲ್ಲದೆ, ಭಾರತದ ಯಾವುದೇ ಆರೋಪಿ ಅಥವಾ ಅಪರಾಧಿಯನ್ನು ಅಲ್ಲೇ ಹೋಗಿ ಸೆರೆಹಿಡಿದು ಕರೆತರುವ ಒಪ್ಪಂದ 9 ರಾಷ್ಟ್ರಗಳೊಂದಿಗೆ ಜಾರಿಯಲ್ಲಿದೆ. ಕ್ರೊಯೇಶಿಯಾ, ಫಿಜಿ, ಇಟಲಿ, ಪೆರು, ಶ್ರೀಲಂಕಾ, ಸಿಂಗಾಪುರ, ಸ್ವಿಡನ್, ತಾಂಜಾನಿಯಾ, ಪಾಪುವಾ ನ್ಯೂಗಿನಿ ಈ ರಾಷ್ಟ್ರಗಳಿಗೆ ಭಾರತೀಯ ಸುರಕ್ಷಾ ಏಜೆನ್ಸಿಗಳೇ ತೆರಳಿ ಆರೋಪಿ ಅಥವಾ ಅಪರಾಧಿಯನ್ನು ಬಂಧಿಸಿ ಭಾರತಕ್ಕೆ ಕರೆತರಬಹುದಾಗಿದೆ.