ವಿಜಯ ಗುಂಟ್ರಾಳ ಬಂಧನಕ್ಕೆ ಆಗ್ರಹ

ಹುಬ್ಬಳ್ಳ: ಎಸ್​ಸಿ, ಎಸ್​ಟಿ ಪೌರ ಕಾರ್ವಿುಕರ ಜಿಲ್ಲಾ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಪಾಲಿಕೆಯ ಪೌರ ಕಾರ್ವಿುಕರ ಸಂಘ, ರಾಜ್ಯ ಪೌರ ಕಾರ್ವಿುಕರ ಮಕ್ಕಳ ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ರೈಲ್ವೆ ನಿಲ್ದಾಣ ಬಳಿಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಕಾರ್ಪೆರೇಷನ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು. ವಿಜಯ ಗುಂಟ್ರಾಳರನ್ನು ಕೂಡಲೇ ಬಂಧಿಸಿ, ಅಮಾಯಕರಿಗೆ ನ್ಯಾಯ ಒದಗಿಸಬೇಕು. ಕಾರ್ವಿುಕರು ಮಲ ಸುರಿದುಕೊಳ್ಳಲು ಪ್ರಚೋದನೆ ನೀಡಿದ ಹಾಗೂ ಕಾರ್ವಿುಕರಿಂದ ಹಣ ವಸೂಲಿ ಮಾಡುವ ಗುಂಟ್ರಾಳಗೆ ಧಿಕ್ಕಾರ, ಪೌರ ಕಾರ್ವಿುಕರ ಮೇಲಿನ ಗುಂಟ್ರಾಳ ದೌರ್ಜನ್ಯ ನಿಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೌರ ಕಾರ್ವಿುಕರ ಸಂಘದ ಗೌರವ ಅಧ್ಯಕ್ಷ ಗಂಗಾಧರ ಟಗರಗುಂಟಿ ಮಾತನಾಡಿ, ಜುಲೈ 26ರಂದು ಪಾಲಿಕೆ ಎದುರು ಪೌರ ಕಾರ್ವಿುಕರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ವಿಜಯ ಗುಂಟ್ರಾಳ ಕೆಲವರನ್ನು ಪ್ರಚೋದಿಸಿ ಮೈ ಮೇಲೆ ಮಲ ಸುರಿದುಕೊಳ್ಳುವಂತೆ ಮಾಡಿದ್ದಾರೆ. ಇದರಿಂದ ದಲಿತ ಸಮುದಾಯಕ್ಕೆ ಅವಮಾನ ಮಾಡಿದಂತಾಗಿದೆ. ಪಾಲಿಕೆ ಆಯುಕ್ತ, ಮಹಾಪೌರ ಹಾಗೂ ಸದಸ್ಯರ ವಿರುದ್ಧ ಗುಂಟ್ರಾಳ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದರು.

ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಅಮಾಯಕ ಕಾರ್ವಿುಕರನ್ನು ಬಲಿಪಶು ಮಾಡುತ್ತಿದ್ದಾರೆ. ಸರ್ಕಾರಿ ಸೌಲಭ್ಯ ಒದಗಿಸಿಕೊಡುವ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ಆದರೆ ಕಾರ್ವಿುಕರಿಗೆ ಇಂದಿಗೂ ಯಾವುದೇ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ. ಏಳೆಂಟು ಕಾರ್ವಿುಕರನ್ನು ಮುಂದಿಟ್ಟುಕೊಂಡು ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿ, ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆತನ ವಿರುದ್ಧ ಸ್ವತಃ ಪಾಲಿಕೆ ಆಯುಕ್ತರೇ ದೂರು ನೀಡಿದ್ದರೂ ಪೊಲೀಸರು ಇನ್ನೂ ಬಂಧಿಸಿಲ್ಲ. ಕೂಡಲೇ ಆತನನ್ನು ಬಂಧಿಸಿ, ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿ ಉಪ ತಹಸೀಲ್ದಾರ್ ಪ್ರಕಾಶ ನಾಶಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದರು.
ಸಂಘದ ಅಧ್ಯಕ್ಷ ನಿಂಗಪ್ಪ ಮೊರಬದ, ಪ್ರಧಾನ ಕಾರ್ಯದರ್ಶಿ ಹೊನ್ನೂರಪ್ಪ ದೇವಗಿರಿ, ಮುಖಂಡರಾದ ಬಿ.ಬಿ. ಕೆಂಪಣ್ಣನವರ, ದುರಗಪ್ಪ ವಿರಾಪುರ, ವೆಂಕಟೇಶ ಟಗರಗುಂಟಿ, ಹೊನ್ನುರಪ್ಪ ದೇವಗಿರಿ, ಹಾಲಪ್ಪ ಯರಮಸಾಳ, ರಮೇಶ ರಾಮಯ್ಯನವರ, ಅಶೋಕ ವೆಂಕರಾಜ, ನಾರಾಯಣ ತಿಮ್ಮಸಂದ್ರಮ್ ಶಂಕರಪ್ಪ ರಾಸಲೇರ ಹಾಗೂ ನೂರಾರು ಪೌರ ಕಾರ್ವಿುಕರು, ಮಹಿಳಾ ಕಾರ್ವಿುಕರು ಪಾಲ್ಗೊಂಡಿದ್ದರು.

ಗುಂಟ್ರಾಳ ಬಂಧನ ಕಷ್ಟವೇ…?: ವಿಜಯ ಗುಂಟ್ರಾಳ ಕಿರಿಕಿರಿ ನೀಡುತ್ತಿರುವುದಾಗಿ 10 ದಿನದ ಹಿಂದೆಯೇ ಪಾಲಿಕೆ ಆಯುಕ್ತರು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಆದರೆ ಈವರೆಗೂ ಪೊಲೀಸರು ಆರೋಪಿಯನ್ನು ಬಂಧಿಸದಿರುವುದು ಪಾಲಿಕೆ ಆಯುಕ್ತ, ಮಹಾಪೌರ, ಸದಸ್ಯರ ಹಾಗೂ ಪೌರ ಕಾರ್ವಿುಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಕೊಲೆ, ದರೋಡೆ, ಕಿಡ್ನಾಪ್ ಪ್ರಕರಣಗಳಲ್ಲಿ ಒಂದೇ ದಿನ ಹತ್ತತ್ತು ಆರೋಪಿಗಳನ್ನು ಬಂಧಿಸುವ ಪೊಲೀಸರಿಗೆ ಒಬ್ಬ ವಿಜಯ ಗುಂಟ್ರಾಳ ಬಂಧನ ಕಷ್ಟದ ಕೆಲಸವೇನಲ್ಲ. ಆದರೂ ಪೊಲೀಸರು ಮೌನವಹಿಸಿರುವುದನ್ನು ನೋಡಿದರೆ, ರಾಜಕೀಯ ಒತ್ತಡವಿದೆ ಎನ್ನುವ ಅನುಮಾನ ಕಾಡತೊಡಗಿದೆ. ಪೊಲೀಸ್ ಇಲಾಖೆ ಯಾವುದಕ್ಕೂ ಜಗ್ಗದೇ ಕೂಡಲೇ ಆರೋಪಿಯನ್ನು ಬಂಧಿಸಿ ಪೌರ ಕಾರ್ವಿುಕರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗುಂಟ್ರಾಳ ಹಿಂದೆ ಏಳೆಂಟು ಜನ…!: ಯಾವ ಪೌರ ಕಾರ್ವಿುಕರನ್ನು ಕರೆದುಕೊಂಡು ವಿಜಯ ಗುಂಟ್ರಾಳ, ಕಾರ್ವಿುಕರ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ಆರಂಭಿಸಿದ್ದರೋ ಅದೇ ಪೌರ ಕಾರ್ವಿುಕರಲ್ಲಿ ಅನೇಕರು ಇಂದು ಗುಂಟ್ರಾಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು.