ಬಂಟ ಸಮಾಜದಿಂದ ಹೊಸ ಬ್ಯಾಂಕ್

ಪ್ರಕಾಶ್ ಮಂಜೇಶ್ವರ ಮಂಗಳೂರು

ಬ್ಯಾಂಕ್ ಆಫ್ ಬರೋಡ ಜತೆ ಕರಾವಳಿ ಮೂಲದ ವಿಜಯ ಬ್ಯಾಂಕ್ ವಿಲೀನ ತಡೆಯಲು ನಡೆಸಿದ ಎಲ್ಲ ಪ್ರಯತ್ನ ವಿಫಲಗೊಂಡ ಬಳಿಕ ಬಂಟ ಸಮಾಜ ಹೊಸ ಬ್ಯಾಂಕ್ ಸ್ಥಾಪನೆ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಆರಂಭದಲ್ಲಿ ಬೆಂಗಳೂರು ಬಂಟರ ಸಂಘದ ಆಶ್ರಯದಲ್ಲಿ ‘ಬಂಟರ ಕೋಆಪರೇಟಿವ್ ಸೊಸೈಟಿ’ ಹೆಸರಿನಲ್ಲಿ ಬೆಂಗಳೂರಿನಲ್ಲಿ ಹೊಸ ವಿತ್ತ ಸಂಸ್ಥೆ ಆರಂಭಿಸುವುದು. ಮುಂದಿನ ಹಂತದಲ್ಲಿ ದೇಶದ ವಿವಿಧೆಡೆಗಳಲ್ಲಿರುವ ಸಮಾಜದ ಕೋಆಪರೇಟಿವ್ ಸೊಸೈಟಿಗಳನ್ನು ಒಳಗೊಂಡು ಬ್ಯಾಂಕ್ ಆರಂಭಿಸುವುದು ಸಂಘದ ಗುರಿ. ಈ ಬಗ್ಗೆ ಮುಂಬೈಯ ಮಾತೃಭೂಮಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷರು ಸಹಿತ ಸಮಾಜದ ವಿವಿವಿಧ ಸಹಕಾರಿ ಸಂಘಗಳ ಮುಖ್ಯಸ್ಥರ ಜತೆ ಮಾತುಕತೆ ನಡೆಯುತ್ತಿದೆ. ಆರ್‌ಬಿಐ ಮಾರ್ಗಸೂಚಿ ಪ್ರಕಾರ ಮುಂದುವರಿಯುವ ಕುರಿತು ತಯಾರಿಗಳು ನಡೆದಿವೆ.

ಕರ್ನಾಟಕ ಸರ್ಕಾರದ ಸಹಕಾರಿ ಇಲಾಖೆಯ ಅನುಮೋದನೆಯೊಂದಿಗೆ ಪ್ರಾಥಮಿಕ ಹಂತದಲ್ಲಿ ಏಪ್ರಿಲ್ 14 ಸೌರಮಾನ ಯುಗಾದಿ (ವಿಷು) ಸಂದರ್ಭ ‘ಬಂಟರ ಕೋಆಪರೇಟಿವ್ ಸೊಸೈಟಿ’ ಹೆಸರು ಅನಾವರಣಗೊಳಿಸಲು ಸಿದ್ಧತೆ ನಡೆದಿದೆ. ಮೂರು ತಿಂಗಳೊಳಗೆ ಸುಮಾರು 20 ಕೋಟಿ ರೂ. ಆರಂಭಿಕ ಬಂಡವಾಳದೊಂದಿಗೆ ಸೊಸೈಟಿ ಆರಂಭಿಸಲು ಉದ್ದೇಶಿಸಲಾಗಿದೆ.

ಭಾವನಾತ್ಮಕ ಬಂಧ: 1931ರಲ್ಲಿ ಮಂಗಳೂರು ಬಂಟ್ಸ್ ಹಾಸ್ಟೆಲ್ ಹತ್ತಿರದ ಸಣ್ಣ ಕೊಠಡಿಯಲ್ಲಿ ಆರಂಭಗೊಂಡಿದ್ದ ವಿಜಯ ಬ್ಯಾಂಕ್‌ನಲ್ಲಿ ಕರಾವಳಿಯ ಜನರು, ಮುಖ್ಯವಾಗಿ ಬಂಟ ಸಮಾಜದ ಪೂರ್ಣ ಪ್ರಮಾಣದ ಒಳಗೊಳ್ಳುವಿಕೆ ಇತ್ತು. ಅತ್ತಾವರ ಬಾಲಕೃಷ್ಣ ಶೆಟ್ಟಿ ಇದರ ಸ್ಥಾಪಕರು. ಬ್ಯಾಂಕಿನ ಜನಪ್ರಿಯ ಲಾಂಛನ (ಜೇಬಲ್ಲಿ ಕೈ ಹಾಕಿ ವಿನಯದಿಂದ ನಿಂತುಕೊಂಡಿರುವ ವ್ಯಕ್ತಿ) ವನ್ನು ಕರಾವಳಿಯ ಪ್ರಭಾಕರ ರೈ ರಚಿಸಿದ್ದರು. ಈ ಲಾಂಛನ ಬದಲಾವಣೆ ಪ್ರಸ್ತಾವ ವರ್ಷದ ಹಿಂದೆ ಬಂದಿತ್ತಾದರೂ ಗ್ರಾಹಕರ ತೀವ್ರ ವಿರೋಧದ ಪರಿಣಾಮ ಇದು ಸಾಧ್ಯವಾಗಿರಲಿಲ್ಲ.
ಬ್ಯಾಂಕ್ ಆರಂಭ ಬಳಿಕ ರಾಷ್ಟ್ರೀಕರಣವಾಗುವ ತನಕವೂ ಇಲ್ಲಿನ ಶೇ.80 ಉದ್ಯೋಗಿಗಳು ಬಂಟ ಸಮಾಜದವರೇ ಆಗಿದ್ದರು. ಇಂದಿಗೂ ಬ್ಯಾಂಕಿನ ಹಿರಿಯ ಹುದ್ದೆಗಳಲ್ಲಿ ಸಮಾಜದ ಜನರ ಸಂಖ್ಯೆ ಅಧಿಕವಿದೆ.

ಠೇವಣಿ ವರ್ಗಾವಣೆ ನಿರೀಕ್ಷೆ: ವಿಜಯ ಬ್ಯಾಂಕ್ ಪ್ರವೇಶಿಸಿದ ಕೂಡಲೇ ಬ್ಯಾಂಕ್ ಸ್ಥಾಪಕ ಅತ್ತಾವರ ಬಾಲಕೃಷ್ಣ ಶೆಟ್ಟಿ ಇದರ, ಅದರ ಅಭಿವೃದ್ದಿಯ ರೂವಾರಿ ಮುಲ್ಕಿ ಸುಂದರ ರಾವ್ ಫೋಟೋಗಳು ಎದುರುಗೊಳ್ಳುತ್ತಿತ್ತು. ಪರಿಣಾಮ ‘ನಮ್ಮದೇ ಬ್ಯಾಂಕು’ ಎನ್ನುವ ಭಾವನೆಯಿಂದ ಹೆಚ್ಚಿನ ಬಂಟರು ವಿಜಯ ಬ್ಯಾಂಕಿನ ಜತೆ ನಂಟು ಮುಂದುವರಿಸಿದ್ದರು. ಇಲ್ಲಿ ಠೇವಣಿ ಇಡಲು ಆದ್ಯತೆ ನೀಡುತ್ತಿದ್ದರು. ವಿಜಯ ಬ್ಯಾಂಕಿನ ಅಸ್ತಿತ್ವವೇ ಇಲ್ಲದ ಪರಿಸ್ಥಿತಿಯಲ್ಲಿ ಈ ಹಿಂದೆ ಅಲ್ಲಿ ಠೇವಣಿ ಇರಿಸಿದ್ದ ಜನರ ನೆರವು ಕೂಡ ಬಂಟರ ಸಂಘ ಆರಂಭಿಸಲು ಉದ್ದೇಶಿಸಿರುವ ನೂತನ ಆರ್ಥಿಕ ಸಂಸ್ಥೆಗೆ ಹರಿದು ಬರುವ ನಿರೀಕ್ಷೆ ಇದೆ.

ವಿಜಯ ಬ್ಯಾಂಕು ವಿಲೀನ ತಡೆಯುವುದು ಸಾಧ್ಯವಾಗಲಿಲ್ಲ. ಅದು ಕೇಂದ್ರ ಸರ್ಕಾರದ ಪಾಲಿಸಿ ವಿಷಯ. ಹಾಗೆಂದು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಬಂಟರ ಕೋಆಪರೇಟಿವ್ ಸೊಸೈಟಿ ಆರಂಭಿಸಲು ವೇದಿಕೆ ಸಿದ್ಧವಾಗಿದೆ. ಭವಿಷ್ಯದಲ್ಲಿ ಇದನ್ನು ಬ್ಯಾಂಕಾಗಿ ಪರಿವರ್ತಿಸುವ ಉದ್ದೇಶವಿದೆ. ಆರ್‌ಬಿಐ ಮಾರ್ಗಸೂಚಿ ಪ್ರಕಾರ ಮುಂದುವರಿಯಬೇಕಾಗಿದೆ.
|ಉಪೇಂದ್ರ ಶೆಟ್ಟಿ, ಅಧ್ಯಕ್ಷ, ಬೆಂಗಳೂರು ಬಂಟರ ಸಂಘ