ವಿಜಯ ಬ್ಯಾಂಕ್ ಇನ್ನು ಬ್ಯಾಂಕ್ ಆಫ್ ಬರೋಡ

ಮಂಗಳೂರು: ಮಂಗಳೂರಿನಲ್ಲಿ ಜನ್ಮತಾಳಿದ ವಿಜಯ ಬ್ಯಾಂಕ್, ಮಹಾರಾಷ್ಟ್ರ ಮೂಲದ ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಜತೆಗೆ ಸೋಮವಾರದಿಂದ ಅಧಿಕೃತವಾಗಿ ವಿಲೀನಗೊಂಡು, ಕಾರ್ಯಾರಂಭಿಸಿದೆ.

ಮಂಗಳೂರಿನ ಪ್ರಾದೇಶಕ ಕಚೇರಿಯಲ್ಲೂ ವಿಜಯ ಬ್ಯಾಂಕ್ ಫಲಕದ ಕೆಳಗೆ ‘ಈಗ ಬ್ಯಾಂಕ್ ಆಫ್ ಬರೋಡಾ’ ಎಂಬ ಚಿಕ್ಕ ಪೋಸ್ಟರ್ ಸೇರಿಕೊಂಡಿದ್ದರೆ, ಆಗಮಿಸುವ ಗ್ರಾಹಕರಿಗೆ ತಿಳಿಯಲು ಅಲ್ಲಲ್ಲಿ ಬ್ಯಾಂಕ್ ಆಫ್ ಬರೋಡಾದ ಹೆಸರು ಹಾಗೂ ಮೂರು ಬ್ಯಾಂಕ್‌ಗಳು ಒಂದಾಗಿರುವ ಮಾಹಿತಿಯನ್ನೂ ಪ್ರದರ್ಶಿಸಲಾಗಿದೆ.

ಈ ಬಗ್ಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ವಿವರ ನೀಡಿದ ಹಿಂದಿನ ವಿಜಯ ಬ್ಯಾಂಕ್‌ನ ಮಹಾಪ್ರಬಂಧಕ ಶ್ರೀಧರಮೂರ್ತಿ ಹಾಗೂ ಬ್ಯಾಂಕ್ ಆಫ್ ಬರೋಡಾದ ಡಿಜಿಎಂ ಲಲಿತ್ ತ್ಯಾಗಿ, ವಿಲೀನದಿಂದಾಗಿ ಬ್ಯಾಂಕ್ ಭಾರತದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿ ಪರಿವರ್ತನೆಗೊಂಡಿದೆ. ಇಂದಿನಿಂದಲೇ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾ.30ರ ಅಧಿಸೂಚನೆಯ ಅನ್ವಯ ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್‌ನ ಎಲ್ಲ ಶಾಖೆಗಳೂ ಬ್ಯಾಂಕ್ ಆಫ್ ಬರೋಡಾದ ಶಾಖೆಗಳಾಗಿ ಕಾರ್ಯ ನಿರ್ವಹಿಸಲಿವೆ. ಈ ಬ್ಯಾಂಕ್‌ಗಳ ಗ್ರಾಹಕರೆಲ್ಲರನ್ನೂ ಬ್ಯಾಂಕ್ ಆಫ್ ಬರೋಡಾದ ಗ್ರಾಹಕರಾಗಿಯೇ ಸ್ವೀಕರಿಸಲಾಗಿದೆ ಎಂದರು.

ಈ ವಿಲೀನದ ಮೂಲಕ ಬರೋಡಾ ಬ್ಯಾಂಕ್ 9500ಕ್ಕೂ ಹೆಚ್ಚು ಶಾಖೆ, 13400ಕ್ಕೂ ಹೆಚ್ಚು ಎಟಿಎಂ, 85000ಕ್ಕೂ ಹೆಚ್ಚು ಉದ್ಯೋಗಿಗಳು, 12 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. 15 ಲಕ್ಷ ಕೋಟಿ ವಹಿವಾಟು, 8.75 ಲಕ್ಷ ಕೋಟಿ ರೂ. ಠೇವಣಿ ಹಾಗೂ 6.25 ಕೋಟಿ ರೂ. ಮುಂಗಡ ನೀಡಿಕೆಯನ್ನು ಹೊಂದಿದಂತಾಗಿದೆ. ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ರದ್ದು ಮಾಡಿ ಹಿಂದಿನ ವ್ಯವಸ್ಥೆಗೆ ಮರಳುವುದು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ತ್ಯಾಗಿ, ಇದು ಸರ್ಕಾರದ ನಿರ್ಧಾರ, ಇದಕ್ಕೆ ನಾವು ಉತ್ತರಿಸುವುದು ಕಷ್ಟ ಎಂದಷ್ಟೇ ತಿಳಿಸಿದರು.

ದೇನಾ ಬ್ಯಾಂಕ್ ಮುಖ್ಯಪ್ರಬಂಧಕ ನಾಗರಾಜು, ಎಂ.ಎಸ್.ಕುಮಾರ್, ವಿಜಯ ಬ್ಯಾಂಕ್‌ನ ರಂಗರಾಜನ್ ಹಾಜರಿದ್ದರು.

ಗ್ರಾಹಕರಿಗೇನು ಲಾಭ?: ಮೂರು ಬ್ಯಾಂಕ್‌ಗಳ ಗ್ರಾಹಕರಿಗೆ ಉತ್ಕೃಷ್ಟ ಬ್ಯಾಂಕಿಂಗ್ ಸೇವೆ ಲಭ್ಯವಾಗಲಿದೆ. ನಗದು ನಿರ್ವಹಣಾ ಸೇವೆ, ಹಣಕಾಸು ಯೋಜನೆ, ವಿದೇಶಿ ಕರೆನ್ಸಿ ಹೂಡಿಕೆ ಲಭ್ಯವಾಗಲಿದೆ. ಎನ್‌ಆರ್‌ಐ ಗ್ರಾಹಕರಿಗೆ ಭಾರತದಲ್ಲಿ ವಿಸ್ತೃತ ಸೇವಾಜಾಲ ಸಿಗಲಿದೆ. ವಿಜಯ ಬ್ಯಾಂಕ್‌ನ ವಿನೂತನ ಕಾರ್ಯಕ್ರಮಗಳಾದ ತೋಟಗಾರಿಕಾ ಹಣಕಾಸು ನೆರವು, ಸಣ್ಣ ರಸ್ತೆ ಸಾರಿಗೆ ಆಪರೇಟರುಗಳ ಸಾಲ ಯೋಜನೆ ಮುಂದುವರಿಯಲಿದೆ.

ಬ್ಯಾಂಕ್ ವಿಲೀನ ವಿರುದ್ಧ ಕಪ್ಪು ದಿನ: ವಿಜಯ ಬ್ಯಾಂಕ್-ಬ್ಯಾಂಕ್ ಆ್ ಬರೋಡ ವಿಲೀನ ವಿರುದ್ಧ ಸೋಮವಾರ ನಗರದ ಜ್ಯೋತಿ ಚಿತ್ರಮಂದಿರ ಬಳಿಯ ಸಂಸ್ಥಾಪಕ ಶಾಖೆ ಎದುರು ಸಮಾನ ಮನಸ್ಕ ಸಂಘಟನೆಗಳು ಕಪ್ಪು ದಿನ ಆಚರಣೆ ಮೂಲಕ ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ವಿಜಯ ಬ್ಯಾಂಕ್ ಉಳಿಸಿ ಹೋರಾಟ ಸಮಿತಿ ಸಂಚಾಲಕ ದಿನೇಶ್ ಹೆಗ್ಡೆ ಉಳೇಪಾಡಿ, ವಿಜಯ ಬ್ಯಾಂಕ್ ವಿಲೀನಗೊಳ್ಳಲು ರಾಜಕೀಯ ನಾಯಕರ ನಿರ್ಲಕ್ಷೃ ಕಾರಣ ಎಂದರು. ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗ್ಡೆ, ವಿವಿಧ ಸಂಘಟನೆ ಪ್ರಮುಖರಾದ ಮುನೀರ್ ಕಾಟಿಪಳ್ಳ, ಅಶ್ರ್, ಸುನೀಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್, ರಾಘವ, ಮಾಧವ್, ಶ್ಯಾಮಸುಂದರ ರಾವ್, ಕೊಲ್ಲಾಡಿ ಬಾಲಕೃಷ್ಣ ಶೆಟ್ಟಿ ಭಾಗವಹಿಸಿದ್ದರು. ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ವಿರೋಧಿಸಿ ದ.ಕ ಜಿಲ್ಲಾ ಕಾಂಗ್ರೆಸ್ ಮಲ್ಲಿಕಟ್ಟೆಯ ವಿಜಯ ಬ್ಯಾಂಕ್ ಶಾಖೆ ಮುಂಭಾಗ ಪ್ರತಿಭಟನೆ ನಡೆಸಿತು.

Leave a Reply

Your email address will not be published. Required fields are marked *