Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಆಕಾಂಕ್ಷಿ ಅಲ್ಲ, ಅತೃಪ್ತಿಯೂ ಇಲ್ಲ: ಡಾ. ವಿಜಯ ಸಂಕೇಶ್ವರ

Wednesday, 14.03.2018, 3:05 AM       No Comments

ಹುಬ್ಬಳ್ಳಿ: ರಾಜ್ಯಸಭೆ ಚುನಾವಣೆಯ ಟಿಕೆಟ್​ಗೆ ನಾನು ಆಕಾಂಕ್ಷಿಯೇ ಆಗಿರಲಿಲ್ಲ, ಹಾಗಾಗಿ ಟಿಕೆಟ್ ಕೈತಪ್ಪಿದ್ದಕ್ಕೆ ಸ್ವಲ್ಪವೂ ಅಸಮಾಧಾನವಿಲ್ಲ. ರಾಜೀವ್ ಚಂದ್ರಶೇಖರ್ ಆಯ್ಕೆ ಬಹಳ ಸಂತಸ ತಂದಿದೆ. ಹಲವು ದೃಷ್ಟಿಕೋನದಿಂದ ಅವರು ನನಗಿಂತಲೂ ಉತ್ತಮ ಪ್ರತಿನಿಧಿ ಎಂದು ಮಾಜಿ ಸಂಸದ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದ್ದಾರೆ.

ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗಬೇಕಿರುವ ಸ್ಥಾನಕ್ಕೆ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರನ್ನು ಬಿಜೆಪಿ ಆಯ್ಕೆ ಮಾಡಿರುವುದಕ್ಕೆ ಸಂಕೇಶ್ವರ ಅವರು ಅಸಮಾಧಾನಗೊಂಡಿದ್ದಾರೆ ಎಂಬ ವದಂತಿಗಳಿಗೆ ಮಂಗಳವಾರ ವಿಆರ್​ಎಲ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ಬಿಜೆಪಿಯ ಹಿರಿಯ ನಾಯಕ ಡಾ. ವಿಜಯ ಸಂಕೇಶ್ವರ ತೆರೆ ಎಳೆದಿದ್ದಾರೆ.

12ನೇ ವಯಸ್ಸಿನಿಂದಲೇ ತಾವು ಆರೆಸ್ಸೆಸ್ ಸ್ವಯಂಸೇವಕ ಎಂದು ಮಾತು ಆರಂಭಿಸಿದ ಅವರು, ರಾಜೀವ್ ಚಂದ್ರಶೇಖರ್ ಅವರೊಬ್ಬ ಅಚ್ಚ ಕನ್ನಡಿಗ. ಅವರು ಕನ್ನಡೇತರರು ಎಂಬುದು ಕಾಂಗ್ರೆಸ್ ಸೃಷ್ಟಿಸುತ್ತಿರುವ ಹುನ್ನಾರ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಈ ನಿರ್ಧಾರವನ್ನು ಸಂಪೂರ್ಣವಾಗಿ ಒಪ್ಪಿದ್ದೇನೆ. ಪಕ್ಷ ಹೇಳಿದರೆ ವಿಷ ಕುಡಿಯಲೂ ಸಿದ್ಧ. ಬಿಜೆಪಿಯ ಸ್ಥಳೀಯರಿಂದ ರಾಜ್ಯ ನಾಯಕರವರೆಗೆ ಯಾರ ಬಗ್ಗೆಯೂ ಕಿಂಚಿತ್ತೂ ಅಸಮಾಧಾನವಿಲ್ಲ. ನನ್ನನ್ನು ರಾಜ್ಯಸಭೆಗೆ ಅಭ್ಯರ್ಥಿಯನ್ನಾಗಿಸಲು ಶಿಫಾರಸು ಮಾಡಿದ 38 ಬಿಜೆಪಿ ಶಾಸಕರು, ರಾಜ್ಯ, ಕೇಂದ್ರ ನಾಯಕರಿಗೂ ನಾನು ಕೃತಜ್ಞನಾಗಿದ್ದೇನೆ ಎಂದರು. ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಸುದ್ದಿಗೋಷ್ಠಿಯಲ್ಲಿದ್ದರು.

ಸಿಎಂ ಸಿದ್ದರಾಮಯ್ಯ ನಾಟಕ ಕಂಪನಿ ಸೇರಲಿ ಲಿಂಗಾಯತ ಪ್ರತ್ಯೇಕ ಧರ್ಮ, ಮಹದಾಯಿ ಸಮಸ್ಯೆ ಜಟಿಲವಾಗುವಿಕೆ ಹಾಗೂ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಡುವಲ್ಲಿ ಕಾಂಗ್ರೆಸ್ ಪಾತ್ರವಿದೆ. ಸಿಎಂ ಸಿದ್ದರಾಮಯ್ಯ ಇದನ್ನೆಲ್ಲ ರೂಪಿಸುತ್ತಿರುವ ನಾಟಕಕಾರರಾಗಿದ್ದು, ಅವರು ಯಾವುದಾದರೂ ನಾಟಕ ಕಂಪನಿ ಸೇರಿಕೊಳ್ಳುವುದು ಸರಿ ಎಂದು ಡಾ. ವಿಜಯ ಸಂಕೇಶ್ವರ ವಾಗ್ದಾಳಿ ನಡೆಸಿದರು.

ಕರ್ನಾಟಕವನ್ನು ಕಾಂಗ್ರೆಸ್ ಮುಕ್ತವಾಗಿಸಿ ಯಡಿಯೂರಪ್ಪ ಅವರನ್ನು ಸಿಎಂ ಮಾಡುವುದು, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಪೂರ್ಣ ಸಮಯ ವಿನಿಯೋಗಿಸಿ ಶ್ರಮಿಸುತ್ತೇನೆ.

| ಡಾ. ವಿಜಯ ಸಂಕೇಶ್ವರ ಬಿಜೆಪಿ ಹಿರಿಯ ಮುಖಂಡ

ಡಾ. ಸಂಕೇಶ್ವರ ಹೇಳಿದ್ದೇನು?

  • ಕನ್ನಡಿಗ ಅಭ್ಯರ್ಥಿ ವಿಚಾರ
  • ಕಾಂಗ್ರೆಸ್ ಹುನ್ನಾರ
  • ರಾಜೀವ್ ಚಂದ್ರಶೇಖರ್ ಉತ್ತಮ ಆಯ್ಕೆ
  • ಪಕ್ಷದ ವರಿಷ್ಠರು ಸೂಚಿಸಿದಲ್ಲಿ ವಿಷ ಕುಡಿಯಲೂ ನಾನು ಸಿದ್ಧ.
  • ರಾಜ್ಯದಲ್ಲಿ ಕಾಂಗ್ರೆಸ್ ಹಟಾವೋ ಅಭಿಯಾನಕ್ಕಾಗಿ ಕೆಲಸ
  • ಮಹದಾಯಿ ಇತ್ಯರ್ಥಕ್ಕೆವೈಯಕ್ತಿಕ ಪ್ರಯತ್ನ
  • ಲಿಂಗಾಯತ-ವೀರಶೈವ ಪ್ರತ್ಯೇಕ ಮಾಡುವ ಸರ್ಕಾರದ ಪ್ರಯತ್ನಕ್ಕೆ ಸಹಮತ ಇಲ್ಲ, ಎರಡೂ ಒಂದಾಗಿ ಪ್ರತ್ಯೇಕ ಧರ್ಮ ಮಾಡುವುದಾದರೆ ಅಭ್ಯಂತರವಿಲ್ಲ.

ಕನ್ನಡಿಗ ಅಭ್ಯರ್ಥಿ ವಿಚಾರ ಕಾಂಗ್ರೆಸ್ ಹುನ್ನಾರ

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಸದಸ್ಯರಾಗಲು ಬಿಜೆಪಿ ಟಿಕೆಟ್ ದೊರೆಯಲಿಲ್ಲ ಎನ್ನುವ ಕಾರಣಕ್ಕೆ ಮಾಜಿ ಸಂಸದ ಡಾ.ವಿಜಯ ಸಂಕೇಶ್ವರ ಅಸಮಾಧಾನಗೊಂಡಿದ್ದಾರೆ ಎಂಬ ಊಹಾಪೋಹಗಳಿಗೆ ಖುದ್ದು ಸಂಕೇಶ್ವರ ಅವರೇ ತೆರೆ ಎಳೆದಿದ್ದಾರೆ. ಪಕ್ಷದಿಂದ ನಾನು ಎಂದೂ ಏನನ್ನೂ ಬಯಸಿಲ್ಲ, ಮುಂದೆಯೂ ಬಯಸುವುದಿಲ್ಲ. ಪಕ್ಷ ನೀಡುವ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ವಿಷ ಕೊಟ್ಟರೂ ಕುಡಿಯಲು ತಯಾರಿದ್ದೇನೆ ಎಂದು ಕಡ್ಡಿ ಮುರಿದಂತೆ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿ: ರಾಜೀವ್ ಚಂದ್ರಶೇಖರ್ ಕನ್ನಡಿಗರಲ್ಲ, ಬಿಜೆಪಿ ಕನ್ನಡಿಗರಿಗೆ ಅವಮಾನ ಮಾಡಿದೆ ಎಂಬ ಚರ್ಚೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಹಾಗೂ ಬಿಜೆಪಿ ಮುಖಂಡ ಡಾ.ವಿಜಯ ಸಂಕೇಶ್ವರ, ಇದೆಲ್ಲ ಕಾಂಗ್ರೆಸ್ ಹುನ್ನಾರ ಎಂದು ಹೇಳಿದ್ದಾರೆ.

ರಾಜ್ಯಸಭೆ ಅಭ್ಯರ್ಥಿ ಕುರಿತ ಉಹಾಪೋಹಗಳಿಗೆ ತೆರೆ ಎಳೆಯಲು ತುರ್ತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಇಂದಿರಾ ಗಾಂಧಿಯವರನ್ನು ಚಿಕ್ಕಮಗಳೂರಿನಲ್ಲಿ ಗೆಲ್ಲಿಸಿದ್ದು ಕಾಂಗ್ರೆಸಿಗರು. ಸೋನಿಯಾ ಗಾಂಧಿ ಇಟಲಿಯಿಂದ ಬಂದರೂ ನಮ್ಮ ದೇಶದ ಸೊಸೆ ಎಂದು ಒಪ್ಪಿಕೊಂಡಿದ್ದೇವೆ. ಆದರೆ ಬಳ್ಳಾರಿಯಲ್ಲಿ ಜಯಗಳಿಸಿದ ನಂತರ ಅದನ್ನು ತಿರಸ್ಕರಿಸಿ, ಏರಿದ ಏಣಿಯನ್ನು ಒದ್ದರು. ಕನ್ನಡಿಗ ನೀರಜ್ ಪಾಟೀಲ ಲಂಡನ್​ನ ಲ್ಯಾಂಬೆತ್ ನಗರದ ಮೇಯರ್ ಆಗಿದ್ದರು. ಹಿಂದುಳಿದ ಸಮುದಾಯದ ಹಿಂದು ಮಹಿಳೆಯೊಬ್ಬರು ಪಾಕಿಸ್ತಾನದಲ್ಲಿ ಸಂಸದರಾಗಿದ್ದಾರೆ. ಮೂಲತಃ ಪಂಜಾಬ್​ನವರಾದ ಅರುಣ್ ಜೇಟ್ಲಿಯವರು ಉತ್ತರ ಪ್ರದೇಶದಿಂದ ಸ್ಪರ್ಧಿಸುತ್ತಿದ್ದಾರೆ. ಹಾಗಾಗಿ ಭಾಷೆ, ರಾಜ್ಯಮಿತಿ, ಗಡಿ ಇರಬೇಕಿಲ್ಲ ಎಂದರು.

ವೆಂಕಯ್ಯ ನಾಯ್ಡು ಅವರ ವಿರುದ್ಧವೂ ಇದೇ ರೀತಿ ಕೆಲವರು ಅಭಿಯಾನ ನಡೆಸಿದ್ದರು. 15 ವರ್ಷ ಕರ್ನಾಟಕದ ಅಭಿವೃದ್ಧಿಗೆ ದುಡಿದಿದ್ದ ವೆಂಕಯ್ಯ ನಾಯ್ಡು ಅವರು ಇದರಿಂದ ಬೇಸರಗೊಂಡು ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾದರು. ಕೇಂದ್ರ ನಗರಾಭಿವೃದ್ಧಿ ಸಚಿವರಾಗಿ ನಗರಾಭಿವೃದ್ಧಿ ಇಲಾಖೆಯಿಂದ ಕರ್ನಾಟಕಕ್ಕೆ ಲಭಿಸುತ್ತಿದ್ದ ನೂರಾರು ಕೊಟಿ ರೂ. ಯೋಜನೆಗಳು ರಾಜಸ್ಥಾನದ ಪಾಲಾಗುವಂತಾಯಿತು ಎಂದು ಬೇಸರವ್ಯಕ್ತಪಡಿಸಿದರು. ರಾಜ್ಯಸಭೆ ಆಯ್ಕೆಯಲ್ಲಿ ಕನ್ನಡ, ಕನ್ನಡೇತರರು, ರಾಜ್ಯ, ಜಾತಿ ಎಂಬ ಪ್ರಶ್ನೆ ಬೇಡ. ಇದೆಲ್ಲ ಕಾಂಗ್ರೆಸಿಗರು ಮಾಡುತ್ತಿರುವ ಹುನ್ನಾರ. ಇಷ್ಟೆಲ್ಲ ಕನ್ನಡ ಹಾಗೂ ವೀರಶೈವರ ಬಗ್ಗೆ ಮಾತನಾಡುವ ಕಾಂಗ್ರೆಸಿಗರು, ಕನ್ನಡಿಗ ವೀರಶೈವ ಧುರೀಣ ಹಾಗೂ ಹಿರಿಯ ಮುತ್ಸದ್ಧಿ ವೀರೇಂದ್ರ ಪಾಟೀಲರನ್ನು ಸೋಲಿಸಿದ್ದೇಕೆ ಎಂಬುದಕ್ಕೆ ಉತ್ತರ ನೀಡುತ್ತಾರೆಯೇ ಎಂದು ಸವಾಲು ಹಾಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಕ ಕಂಪನಿ ಸೇರಿದ್ರೆ ಒಳ್ಳೇದು

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಭಾವಿತ ಎಂದುಕೊಂಡಿದ್ದೆ. ಆದರೆ ಅವರು ಅದ್ಭುತ ನಾಟಕ ಮಾಡ್ತಿದ್ದಾರೆ, ನಾಟಕ ಕಂಪನಿಗೆ ಸೇರಿಕೊಂಡರೆ ಒಳ್ಳೆಯದು ಎಂದು ಸಂಕೇಶ್ವರ ವ್ಯಂಗ್ಯ ಮಾಡಿದ್ದಾರೆ. ಸಿದ್ದರಾಮಯ್ಯನವರು ಲಿಂಗಾಯತ ವಿಷಯದಲ್ಲೂ ಹಾಗೇ ಮಾಡುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕತೆ ಕುರಿತ ವರದಿ ಅದು ಸಿದ್ದರಾಮಯ್ಯನವರ ವರದಿ. ಅವರೇ ಮಾಡಿಸಿದ ವರದಿ. ಮಹದಾಯಿ ವಿಷಯದಲ್ಲೂ ನಾಟಕ ಮಾಡುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಂದೂ ಜಾತಿ ರಾಜಕಾರಣ ಮಾಡಿರಲಿಲ್ಲ. ಅವರು ಎಲ್ಲ ಮಠಾಧೀಶರಿಗೆ ಸಹಾಯ ಮಾಡಿದ್ದರು ಎಂದು ಸಂಕೇಶ್ವರ ಅವರು ಸಮರ್ಥಿಸಿದರು.

ನನ್ನಿಚ್ಛೆಯಂತೆ ನಡೆಯುತ್ತೇನೆ

‘ಅಸಮಾಧಾನಗೊಂಡಿದ್ದಾರೆ’ ಎಂಬ ಸುದ್ದಿ ತಣ್ಣಗಾಗಿಸಲು ಸುದ್ದಿಗೋಷ್ಠಿ ನಡೆಸುವಂತೆ ಬಿಜೆಪಿ ನಾಯಕರು ಒತ್ತಡ ಹೇರಿದ್ದಾರೆ ಎಂಬುದೂ ಸುಳ್ಳು. ಯಾರು ಏನೇ ಹೇಳಿದರೂ ನನ್ನಿಚ್ಛೆಗೆ ತಕ್ಕಂತೆ ನಡೆಯುವ ಸ್ವಭಾವ ನನ್ನದು. ಸುದ್ದಿಗೋಷ್ಠಿ ಕುರಿತು ಯಾವುದೇ ಬಿಜೆಪಿ ನಾಯಕರು ನನ್ನನ್ನು ಸಂರ್ಪಸಿಲ್ಲ. ರಾಜ್ಯಸಭೆ ಚುನಾವಣೆ ದೇಶದ ಸಮಗ್ರತೆಗೆ ಸಂಬಂಧಿಸಿದ್ದು ಎಂಬ ದೃಷ್ಟಿಕೋನದಲ್ಲಿ ನೋಡಬೇಕು. ಈ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರ ನಿರ್ಧಾರ ಸೂಕ್ತವಾಗಿದೆ. ಸ್ಥಳೀಯ ಹಾಗೂ ರಾಜ್ಯ ಬಿಜೆಪಿ ನಾಯಕರು ಟಿಕೆಟ್ ನೀಡಿಕೆ ಒತ್ತಡ ಹೇರುವಲ್ಲಿ ಪ್ರಾಮಾಣಿಕತೆ ತೋರಿಲ್ಲ ಅಥವಾ ಅಡ್ಡಗಾಲು ಹಾಕಿದ್ದಾರೆ ಎಂಬ ಮಾತಿನಲ್ಲಿ ಹುರುಳಿಲ್ಲ ಎಂದೂ ಸಂಕೇಶ್ವರ ಸ್ಪಷ್ಟವಾಗಿ ನುಡಿದರು.

ಧನ್ಯತೆ ಅರ್ಪಣೆ

‘ನಿಮ್ಮ ಹೃದಯ ವೈಶಾಲ್ಯ ಮತ್ತು ನನ್ನ ಬಗೆಗಿನ ಮೆಚ್ಚುಗೆಯ ನುಡಿಗಳಿಗೆ ಹೃತ್ಪೂರ್ವಕ ಹೃದಯಾಂತರಾಳದ ಕೃತಜ್ಞತೆಗಳು. ತಾವು ದೊಡ್ಡವರು. ನನ್ನನ್ನು ಹರಸಿ’ ಡಾ. ವಿಜಯ ಸಂಕೇಶ್ವರ ಅವರಿಗೆ ಹೀಗೆ ಧನ್ಯತೆ ಅರ್ಪಿಸಿದವರು ಉದ್ಯಮಿ ಹಾಗೂ ಬಿಜೆಪಿ ರಾಜ್ಯಸಭೆ ಅಭ್ಯರ್ಥಿ ರಾಜೀವ್ ಚಂದ್ರಶೇಖರ್. ಸಂಕೇಶ್ವರ ಅವರಿಗೆ ದೂರವಾಣಿ ಕರೆ ಮಾಡಿದ ಅವರು, ನಿಮ್ಮ ಬದ್ಧತೆ ಹಾಗೂ ಔದಾರ್ಯ ನನ್ನನ್ನು ಮೂಕವಿಸ್ಮಿತವಾಗಿಸಿದೆ. ಎಲ್ಲ ಸಂದೇಹಗಳಿಗೆ ತಾವು ತೆರೆ ಎಳೆದಿರುವುದು ಅಲ್ಲದೇ ನನ್ನನ್ನು ಪ್ರಶಂಸಿಸಿರುವುದು ನನಗೆ ಸ್ಪೂರ್ತಿ ತುಂಬಿದೆ. ನಿಮ್ಮ ಸಲಹೆ, ಮಾರ್ಗದರ್ಶನ ಇರಲಿ ಎಂದು ಕೋರಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಮೆಚ್ಚುಗೆ

ರಾಜೀವ್ ಚಂದ್ರಶೇಖರ್ ಆಯ್ಕೆ ವಿಚಾರದಲ್ಲಿ ನಿಲುವು ಸ್ಪಷ್ಟಪಡಿಸಿದ ವಿಜಯ ಸಂಕೇಶ್ವರ ಅವರಿಗೆ ನಾವು ಧನ್ಯವಾದ ತಿಳಿಸಬೇಕು ಎಂದು ರಾಘು ಸಿ.ಆರ್. ಎಂಬವರು ಮಾಡಿರುವ ಟ್ವೀಟ್ ಅನ್ನು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ರಿಟ್ವೀಟ್ ಮಾಡಿದ್ದಾರೆ. ಈ ಮೂಲಕ ಸಂಕೇಶ್ವರ ಅವರ ಅಭಿಪ್ರಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಕೇಶ್ವರ ಅವರ ಈ ನಡೆ ರಾಜ್ಯ ಬಿಜೆಪಿ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಅವರೊಬ್ಬ ಮಹಾನ್ ವ್ಯಕ್ತಿ. ಧನ್ಯವಾದ ಸಾರ್ ನಿಮಗೆ ಎಂದು ರಾಘು ಟ್ವೀಟ್​ನಲ್ಲಿ ಬರೆದಿದ್ದಾರೆ.

ತಮ್ಮ ವ್ಯಕ್ತಿತ್ವ, ಘನತೆ, ನೇರ-ದಿಟ್ಟ ನುಡಿಗಳಿಂದ ಎಲ್ಲ ಸಂಶಯಗಳನ್ನು ಸಂಕೇಶ್ವರ ನಿವಾರಿಸಿದ್ದಾರೆ. ಅವರ ಅಭಿಲಾಷೆ ಹಾಗೂ ನಮ್ಮ ಮೇಲಿನ ಪ್ರೀತಿ, ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ. ರಾಜ್ಯದ ಹಾಗೂ ಜನರ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

ಮಾಜಿ ಸಂಸದ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ವಿಜಯ ಸಂಕೇಶ್ವರ ಅವರು ಬಿಜೆಪಿ ಬಿಟ್ಟು ಹೋಗುತ್ತಾರೆಂಬ ವದಂತಿಗಳು ಹಬ್ಬಿದ್ದವು. ಇಂದು ಸುದ್ದಿಗೋಷ್ಠಿ ಕರೆದು ಅವನ್ನೆಲ್ಲ ತಳ್ಳಿ ಹಾಕಿರುವ ಅವರು ಪಕ್ಷ ನಿಷ್ಠೆ ತೋರಿಸಿದ್ದಾರೆ. ಬಿಜೆಪಿ ಪಕ್ಷದ ಮೇಲೆ ಇರುವ ಅವರ ಬದ್ಧತೆ ಸ್ವಾಗತಾರ್ಹ.

| ಜಗದೀಶ ಶೆಟ್ಟರ್ ವಿಧಾನಸಭೆ ವಿಪಕ್ಷ ನಾಯಕ

ಪಕ್ಷನಿಷ್ಠೆ ಹೇಗೆ ಇರಬೇಕೆಂಬುವುದಕ್ಕೆ ಡಾ.ವಿಜಯ ಸಂಕೇಶ್ವರ ಉತ್ತಮ ಉದಾಹರಣೆ. ಸಂಯಮ, ಶಿಸ್ತಿಗೆ ಅವರು ಇನ್ನೊಂದು ಹೆಸರು. ‘ಬಿಜೆಪಿ ಹೇಳಿದರೆ ವಿಷ ಕುಡಿಯಲೂ ಸೈ’ ಎಂದಿರುವ ಅವರ ಮಾತುಗಳು ಪಕ್ಷದ ಕುರಿತು ಅವರಿಗಿರುವ ಬದ್ಧತೆ, ನಿಷ್ಠೆಯನ್ನು ತೋರಿಸುತ್ತದೆ.

| ಗೋ.ಮಧುಸೂದನ್ ಬಿಜೆಪಿ ಮುಖಂಡ

ನಮ್ಮದು ಕೊಡುಗೈ

ಲಿಂಗಾಯತ-ವೀರಶೈವ ಸಮಾಜದ್ದು ಕೊಡುವ ಕೈ. ಭಿಕ್ಷೆಗೆ ಚಾಚುವ ಕೈ ಅಲ್ಲ. ಎಂಥ ಬಡವನೂ ಇನ್ನೊಬ್ಬನಿಗೆ ಸಹಾಯ ಮಾಡುತ್ತಾನೆ. ಲಿಂಗಾಯತರು ಎಷ್ಟೇ ಕಷ್ಟ ಪಟ್ಟಾದರೂ ಸ್ವಂತ ಕಾಲ ಮೇಲೆ ನಿಲ್ಲಬೇಕು. ಈ ವಿಷಯವನ್ನು ನಾನು ಬೇರೆ ಬೇರೆ ವೇದಿಕೆಗಳಲ್ಲಿ ಸ್ಪಷ್ಟಪಡಿಸಿದ್ದೇನೆ ಎಂದು ಸಂಕೇಶ್ವರ ಹೇಳಿದರು.

ರಾಜಕೀಯ ಪ್ರೇರಿತ

ಪ್ರತ್ಯೇಕ ಧರ್ಮದ ವಿಚಾರದಲ್ಲಿ ಮುಖ್ಯ ಮಂತ್ರಿ ನಾಟಕ ಮಾಡುತ್ತಿದ್ದಾರೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಆರೋಪಿಸಿರುವ ಕುರಿತು ರಾಣೆಬೆನ್ನೂರಿನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಡಾ.ಸಂಕೇಶ್ವರ ಅವರ ಹೇಳಿಕೆ ರಾಜಕೀಯ ಪ್ರೇರಿತ ಎಂದಿದ್ದಾರೆ.

ಕಾನೂನು ಸುವ್ಯವಸ್ಥೆ ಕುಸಿತ

ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಅವರಿಗೆ ಚೂರಿ ಇರಿತದ ಪ್ರಕರಣ ರಾಜ್ಯದಲ್ಲಿ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಕುಸಿದಿರುವುದರ ಸಂಕೇತವಾಗಿದೆ. ಲೋಕಾಯುಕ್ತರಿಗೆ ಚೂರಿ ಇರಿದಿದ್ದು ನನಗೆ ಬೇಸರ ತಂದಿದೆ. ಕ್ರಿಮಿನಲ್ ತೇಜಪಾಲ್ ಶರ್ಮಾ ಕ್ರಮ ಖಂಡಿತ ತಪ್ಪು. ಆತನ ನಡೆಯನ್ನು ನಾನು ಎಂದಿಗೂ ಸಮರ್ಥಿಸುವುದಿಲ್ಲ. ಆದರೆ, ಇವತ್ತಿನ ವ್ಯವಸ್ಥೆಯಲ್ಲಿ ಅಂಥ ಪ್ರತೀಕಾರದ ಭಾವನೆ, ಯೋಚನೆ ಲಕ್ಷಾಂತರ ಜನರ ತಲೆಯಲ್ಲಿದೆ. ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ ಮೇಲೆ ಜನರಲ್ಲಿ ಹತಾಶೆ, ನಿರಾಸೆ ಮೂಡಿದೆ. ಪೊಲೀಸ್ ಅಧಿಕಾರಿಗಳು ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಐಪಿಎಸ್ ಅಧಿಕಾರಿಗಳು ಕಿರುಕುಳ ಅನುಭವಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳನ್ನು ಫುಟ್​ಬಾಲ್ ತರಹ ಮನಸ್ಸಿಗೆ ಬಂದಾಗ ವರ್ಗಾವಣೆ ಮಾಡಲಾಗುತ್ತಿದೆ. ಆಡಳಿತದ ಮೇಲೆ ಹಿಡಿತವೇ ಇಲ್ಲ ಎಂದು ಸಂಕೇಶ್ವರ ದೂರಿದರು. ನನಗೆ ಬೆದರಿಕೆ ಕರೆ ಬಂದಿತ್ತು. ಈಗಲೂ ಬೆದರಿಕೆ ಇದೆ. ಲೋಕಾಯುಕ್ತರಿಗೆ ಚೂರಿ ಇರಿತ ಪ್ರಕರಣದ ನಂತರ ಅಲ್ಲಿ ಸಿಸಿ ಟಿವಿ ಕ್ಯಾಮರಾ, ಮೆಟಲ್ ಡಿಟೆಕ್ಟರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಇವತ್ತು ಹೇಳುತ್ತಿದ್ದಾರೆ. ಅದು ಬೇರೆ ವಿಷಯ. ಆದರೆ, ಜನರಿಗೆ ಸರ್ಕಾರದ ಮೇಲೆ ವಿಪರೀತ ರೋಷ ಇದೆ. ಇದಕ್ಕೆ ಸರ್ಕಾರದ ವೈಫಲ್ಯವೇ ಕಾರಣ ಎಂದು ವಿಶ್ಲೇಷಿಸಿದರು.

ಎಸ್​ಎಂಕೆ ಹಿರಿಯ ನಾಯಕರು

ಹೊರಗಿನಿಂದ ಕರೆತಂದು ಪಕ್ಷದ ಟಿಕೆಟ್ ನೀಡುವಿಕೆ, ಎಸ್.ಎಂ.ಕೃಷ್ಣ ಸೇರಿ ಅನೇಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಡಾ.ಸಂಕೇಶ್ವರ ಪ್ರತಿಕ್ರಿಯಿಸಿ, ಎಸ್.ಎಂ. ಕೃಷ್ಣ ಹಿರಿಯ ನಾಯಕರು. ಅವರ ಬಗ್ಗೆ ಮಾತನಾಡುವುದಿಲ್ಲ. ಪ್ರಕರಣಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತದೆ. ರಾಜಕೀಯದಲ್ಲಿ ನೈತಿಕತೆ ಉಳಿದುಕೊಂಡಿರುವುದೇ ಬಿಜೆಪಿಯಲ್ಲಿ. ಬೇರೆ ಪಕ್ಷದವರು ಈ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದರು.

ಕಾಂಗ್ರೆಸ್​ನಿಂದ ಹಿಂದುಗಳಿಗೆ ಅನ್ಯಾಯ

ಕಾಂಗ್ರೆಸ್ ಸರ್ಕಾರದಿಂದ ಬಹುಸಂಖ್ಯಾತ ಹಿಂದುಗಳಿಗೆ ಬಹಳ ಅನ್ಯಾಯವಾಗಿದೆ. ಹಾಗಾಗಿ ಕಾಂಗ್ರೆಸ್ ಹಟಾವೋ ಘೊಷಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಿ ಎಂದು ಮತದಾರರಲ್ಲಿ ವಿನಂತಿಸಿಕೊಳ್ಳುತ್ತೇನೆ. ನನ್ನ ನಿರೀಕ್ಷೆಯಂತೆ ಕರ್ನಾಟಕದಲ್ಲಿ ಈ ಸಲ ಬಿಜೆಪಿ 150 ಸ್ಥಾನಗಳನ್ನು ನಿಶ್ಚಿತವಾಗಿ ಗಳಿಸುತ್ತದೆ. ಏಕೆಂದರೆ, ಕಾಂಗ್ರೆಸ್ ಸರ್ಕಾರದ ಮೇಲೆ ಜನತೆಗೆ ವಿಪರೀತ ಆಕ್ರೋಶ ಇದೆ ಎಂದು ಡಾ.ಸಂಕೇಶ್ವರ ಹೇಳಿದರು.

ರಾಜೀವ್ ಚಂದ್ರಶೇಖರ್ ಉತ್ತಮ ಆಯ್ಕೆ

ಉದ್ಯಮಿ ರಾಜೀವ್ ಚಂದ್ರಶೇಖರ್ ಅವರನ್ನು ಅಭ್ಯರ್ಥಿಯಾಗಿಸಿರುವ ಬಿಜೆಪಿ ವರಿಷ್ಠರು ಉತ್ತಮ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಜಯ ಸಂಕೇಶ್ವರ ಸಂತಸ ವ್ಯಕ್ತಪಡಿಸಿದರು. ರಾಜೀವ್ ಚಂದ್ರಶೇಖರ್ ನನ್ನ ಆತ್ಮೀಯರು. 2 ಬಾರಿ ಕರ್ನಾಟಕದಿಂದಲೇ ಪಕ್ಷೇತರರಾಗಿ ಆಯ್ಕೆಯಾಗುವುದು ಸುಲಭದ ಕೆಲಸವಲ್ಲ. 12 ವರ್ಷ ರಾಜ್ಯಸಭೆಯಲ್ಲಿ ಅನುಭವ ಹೊಂದಿದ್ದಾರೆ. ಮಂಗಳೂರಿನಲ್ಲಿ ಶಿಕ್ಷಣ ಪೂರೈಸಿ, ಬೆಂಗಳೂರಿನಿಂದಲೇ 30 ಉದ್ಯಮ ನಡೆಸುತ್ತಿದ್ದಾರೆ. ಎರಡು ಕನ್ನಡ ಮಾಧ್ಯಮ ಸಂಸ್ಥೆಗಳಾದ ಸುವರ್ಣ ಸುದ್ದಿ ವಾಹಿನಿ ಹಾಗೂ ಕನ್ನಡ ಪ್ರಭ ಪತ್ರಿಕೆ ನಡೆಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ಮೂಲನೆಯಷ್ಟೇ ಪ್ರಮುಖವಾಗಿ ಕೇರಳದಲ್ಲೂ ಎನ್​ಡಿಎ ಅಧಿಕಾರಕ್ಕೆ ಬರುವುದು ಬಹುಮುಖ್ಯ. ಈ ಕಾರಣಕ್ಕೆ ರಾಜೀವ್ ಚಂದ್ರಶೇಖರ್ ಆವರ ಅವರ ಆಯ್ಕೆ ಸೂಕ್ತ ಮತ್ತು ಅಭಿನಂದನಾರ್ಹ ಎಂದು ಪ್ರಶಂಸಿಸಿದರು. ರಾಜೀವ್ ಚಂದ್ರಶೇಖರ್ ಅವರ ತಂದೆ ಕೇರಳದಲ್ಲಿ ಆರ್​ಎಸ್​ಎಸ್ ಆರಂಭಿಸಿದವರು, ಜನಸಂಘ ಸ್ಥಾಪಿಸಿದವರು. ರಾಜೀವ್ ಚಂದ್ರಶೇಖರ್ ಅವರು ಕೇರಳದಲ್ಲಿ ಎನ್​ಡಿಎ ಸಂಚಾಲಕರಾಗಿದ್ದಾರೆ. ಇದೀಗ ಬಿಜೆಪಿ ಸೇರ್ಪಡೆಯಾಗಿರುವ ರಾಜೀವ್ ಚಂದ್ರಶೇಖರ್ ಅವರೂ ನನ್ನಂತೆಯೇ ಕೊನೆಯುಸಿರಿನವರೆಗೂ ಪಕ್ಷದ ಜತೆಗೇ ಇರುತ್ತಾರೆ ಎಂಬ ಸಂಪೂರ್ಣ ನಂಬಿಕೆಯಿದೆ ಎಂದರು.

ನಾನು ನಿಷ್ಠಾವಂತ ಕಾರ್ಯಕರ್ತ

ರಾಜ್ಯಸಭೆ ಟಿಕೆಟ್ ಕೈತಪ್ಪಿದ ಕುರಿತು ಸ್ಪಷ್ಟೀಕರಣ ನೀಡಿದ ವಿಜಯ ಸಂಕೇಶ್ವರ, ದೇವಸ್ಥಾನಕ್ಕೆ ತೆರಳಿ ನಮಸ್ಕರಿಸುವಾಗ ದೇವರ ಬಳಿ ಇಂಥದ್ದೇ ಬೇಕು ಎಂದು ನಾನು ಕೇಳಿದವನಲ್ಲ. ಸ್ವತಃ ತಂದೆಯವರಿಂದಲೂ ಏನನ್ನೂ ಅಪೇಕ್ಷಿಸಿದವನಲ್ಲ. ಅದೇ ರೀತಿ ಬಿಜೆಪಿಯಲ್ಲಿಯೂ ಇಂದಿನವರೆಗೆ ಯಾವುದೇ ಸ್ಥಾನ ಕೇಳಿಲ್ಲ. ಆರ್​ಎಸ್​ಎಸ್ ಹಾಗೂ ಬಿಜೆಪಿ ನಾಯಕರು ತಿಳಿಸಿದಂತೆ ಲೋಕಸಭೆ ಅಭ್ಯರ್ಥಿಯಾದೆ. ಎಲ್ಲ ಕಾರ್ಯಕರ್ತರೂ ದುಡಿದು ಗೆಲ್ಲಿಸಿದರು. ಅವರ ಪ್ರಯತ್ನದಿಂದಲೇ ಸಾರ್ವಜನಿಕ ಜೀವನಕ್ಕೆ ಬಂದೆ ಎಂದರು. ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಸಚಿವನಾಗಲು ವಾಜಪೇಯಿ, ಆಡ್ವಾಣಿಯವರು ಆಹ್ವಾನಿಸಿದ್ದರು. ಆದರೆ, ನಾನು ‘ ಹೊಸ ಪತ್ರಿಕೆ ವಿಜಯ ಕರ್ನಾಟಕ ಆರಂಭಿಸಿದ್ದೇನೆ. ಅದನ್ನು ನಂ.1 ಆಗಿಸಲು ಪೂರ್ಣ ಶ್ರಮ ಹಾಗೂ ಹಣಕಾಸು ಹೊಂದಿಸಬೇಕಿದೆ’ ಎಂದು ಮನವರಿಕೆ ಮಾಡಿ ನಯವಾಗಿ ತಿರಸ್ಕರಿಸಿದ್ದೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ, ವಿಧಾನ ಪರಿಷತ್​ಗೆ ಆಯ್ಕೆ ಮಾಡಿದರು, ಅದಕ್ಕೆ ಒಪ್ಪಿದೆ. ರಾಜ್ಯಸಭೆ ಚುನಾವಣೆ ಘೊಷಣೆಯಾದಾಗ ಅಭ್ಯರ್ಥಿಯನ್ನಾಗಿಸಿ ಎಂದು ಯಾವ ನಾಯಕರಿಗೂ ನಾನು ಕೇಳಿಲ್ಲ. ಯಾವ ನಾಯಕರೊಂದಿಗೂ ನಾನು ಚರ್ಚಿಸಿರಲಿಲ್ಲ. ಸ್ವತಃ ರಾಜ್ಯ ಬಿಜೆಪಿ ನಾಯಕರೇ ಕರೆ ಮಾಡಿ ನಿಮ್ಮ ಹೆಸರು ಶಿಫಾರಸು ಮಾಡಿದ್ದೇವೆ ಎಂದರು. ಹಲವು ಶಾಸಕರು, ಜಗದೀಶ ಶೆಟ್ಟರ್, ಯಡಿಯೂರಪ್ಪ ಅವರು, ‘ನಿಮ್ಮನ್ನು ಮತ್ತು ರಾಜೀವ್ ಚಂದ್ರಶೇಖರ್ ಅವರ ಹೆಸರನ್ನು ಶಿಫಾರಸು ಮಾಡಿದ್ದೇವೆ’ ಎಂದು ಹೇಳಿದ್ದರು. ನಾಮಪತ್ರದ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವಂತೆ ಸೂಚಿಸಿದ್ದರು. ಭಾನುವಾರ ಸಂಜೆ ರಾಜೀವ್ ಚಂದ್ರಶೇಖರ್ ಹೆಸರು ಅಂತಿಮಗೊಳ್ಳುತ್ತಿದ್ದಂತೆ ಕರೆ ಮಾಡಿ, ‘ಬೇಸರ ಮಾಡಿಕೊಳ್ಳಬೇಡಿ’ ಎಂದರು. ‘ಆಯಿತು’ ಎಂದೆ ಅಷ್ಟೆ. ಯಾವುದೇ ಸಂದರ್ಭದಲ್ಲಿ ಯಾವ ಹುದ್ದೆಯನ್ನೂ ಅಪೇಕ್ಷಿಸಿಲ್ಲ. ಹಾಗಿದ್ದ ಮೇಲೆ ಅಸಮಾಧಾನದ ಮಾತೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.

ಮುಖ್ಯಮಂತ್ರಿ ಉತ್ತರಿಸಲಿ

ಮೀಸಲಾತಿಯನ್ನು ಇಂತಿಷ್ಟು ಪ್ರತಿಶತವರೆಗೆ ಮಾತ್ರ ಕೊಡಬಹುದು ಎಂದು ಸವೋಚ್ಚ ನ್ಯಾಯಾಲಯ ಹೇಳಿದೆ. ದೊಡ್ಡ ಸಮುದಾಯಕ್ಕೆ ಮೀಸಲಾತಿ ಕೊಡುವುದಾದರೆ ಈಗಾಗಲೇ ಧರ್ವಧಾರಿತ ಮೀಸಲಾತಿ ಪಡೆಯುತ್ತಿರುವ ಯಾರಿಗೆ ಕಡಿಮೆ ಮಾಡಲಾಗುತ್ತದೆ ಎನ್ನುವ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಉತ್ತರ ನೀಡಲಿ ಎಂದು ಡಾ. ಸಂಕೇಶ್ವರ ಒತ್ತಾಯಿಸಿದರು.

ಮಹದಾಯಿ ಇತ್ಯರ್ಥಕ್ಕೆ ಪ್ರಯತ್ನ

ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಕಳಸಾ-ಬಂಡೂರಿ, ಮಹದಾಯಿ ವಿವಾದ ಬಗೆಹರಿಸಲು ವೈಯಕ್ತಿಕವಾಗಿ ಪ್ರಯತ್ನಿಸುತ್ತೇನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಚುನಾವಣೆ ಬಳಿಕ ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ನಾಯಕರು ಹೇಳಿದ ಮೇಲೆ ನೂರು ಪ್ರತಿಶತ ಈ ವಿವಾದ ಬಗೆಹರಿಯುತ್ತದೆ ಎಂಬ ವಿಶ್ವಾಸ ನನಗಿದೆ. ಚುನಾವಣೆ ಬಳಿಕ ವೈಯಕ್ತಿಕವಾಗಿ ನಾನು ಅಮಿತ ಷಾ ಅವರ ಬೆನ್ನು ಹತ್ತಿ ಮಹದಾಯಿ ವಿವಾದ ಬಗೆಹರಿಸುವ ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಸಂಕೇಶ್ವರ ಹೇಳಿದರು. ಕಾಂಗ್ರೆಸ್ಸಿನ ಸೋನಿಯಾ ಗಾಂಧಿ ಮಾಡಿದ ತಪ್ಪು ನಿರ್ಧಾರವೇ ಮಹದಾಯಿ ವಿವಾದಕ್ಕೆ ಕಾರಣ. ಅವರಿಗೆ ದೇಶದ ಭೂಗೋಳದ ಪರಿಜ್ಞಾನವೇ ಇಲ್ಲ. ಕರ್ನಾಟಕಕ್ಕೆ ಮಹದಾಯಿ ನದಿಯಿಂದ ಒಂದು ಹನಿ ನೀರೂ ಕೊಡುವುದಿಲ್ಲ ಎಂದು ಗೋವಾ ಚುನಾವಣೆ ವೇಳೆ ಅವರು ಹೇಳಿ ಬೆಂಕಿ ಹಚ್ಚಿದ್ದರು. ಇದು ಅವರ ದೊಡ್ಡ ನಾಟಕ. ಈ ವಿವಾದ ಇತ್ಯರ್ಥ ಆಗದಿರುಲು ನೋಡಿಕೊಳ್ಳಲು ಸೋನಿಯಾ ಗಾಂಧಿ ಘೊಷಣೆಯೇ ಕಾರಣ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೀರು ಬಿಡಿ ಎಂದು ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಹೊರಗೊಂದು ಒಳಗೊಂದು ಮಾತನಾಡುತ್ತಾರೆ. ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಬಾರದು ಎಂಬ ಉದ್ದೇಶವೂ ಅವರದ್ದಾಗಿದೆ. ಅಟಲ ಬಿಹಾರಿ ವಾಜಪೇಯಿ ಅವರು ಮಹದಾಯಿ ನದಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರಬಾರದು ಎಂದು ಹೇಳುತ್ತಿದ್ದರು. ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ನ್ಯಾಯಾಧಿಕರಣದಿಂದ ತೃಪ್ತಿದಾಯಕ ತೀರ್ಪು ಸಿಕ್ಕಿದೆ. ಅದೇ ರೀತಿ, ಮಹದಾಯಿ ವಿಷಯದಲ್ಲೂ ಕರ್ನಾಟಕಕ್ಕೆ ನ್ಯಾಯ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಕೇಶ್ವರರಿಗೆ 38 ಶಾಸಕರ ಬೆಂಬಲ

ಡಾ. ವಿಜಯ ಸಂಕೇಶ್ವರರನ್ನು ರಾಜ್ಯಸಭೆ ಅಭ್ಯರ್ಥಿಯಾಗಿಸಲು ಬಿಜೆಪಿಯ 43ರಲ್ಲಿ 38 ಶಾಸಕರು ಬೆಂಬಲ ನೀಡಿದ್ದರು. ಸುದ್ದಿಗೋಷ್ಠಿಯಲ್ಲಿ ಸಾಂದರ್ಭಿಕವಾಗಿ ಈ ವಿಷಯ ತಿಳಿಸಿದ ಸಂಕೇಶ್ವರ ಅವರು, ತಮ್ಮ ಹೆಸರು ಶಿಫಾರಸು ಮಾಡಿದ 38 ಶಾಸಕರಿಗೂ, ರಾಜ್ಯ-ಕೇಂದ್ರ ನಾಯಕರಿಗೂ ಕೃತಜ್ಞನಾಗಿದ್ದೇನೆ ಎಂದರು. ನೀವು ರಾಜ್ಯಸಭಾ ಸದಸ್ಯರಾಗಿದ್ದರೆ ಈ ಭಾಗದ ಅಭಿವೃದ್ಧಿಗೆ ಅನುಕೂಲವಾಗುತ್ತಿತ್ತಲ್ಲವೆ? ಪಕ್ಷ ಸಂಘಟನೆಗೂ ಪ್ರಯೋಜನವಾಗುತ್ತಿತ್ತಲ್ಲವೆ? ಈಗ ನಿಮ್ಮ ಅಭಿಮಾನಿಗಳಿಗೆ ನಿರಾಸೆಯಾಗಿಲ್ಲವೆ? ಎಂದು ಕೇಳಿದಾಗ, ‘ರಾಜ್ಯಸಭೆಗೆ ಯಾರನ್ನು ಕಳುಹಿಸಬೇಕು ಎನ್ನುವುದನ್ನು ಕೇಂದ್ರ ನಾಯಕರು ಅವರದ್ದೇ ಆದ ಅಳತೆಗೋಲಿನನ್ವಯ ನಿರ್ಧರಿಸುತ್ತಾರೆ. ಇದು ಬಿಜೆಪಿಯಲ್ಲಿ ಮಾತ್ರ ಅಲ್ಲ. ರಾಜ್ಯಸಭೆ ಮಟ್ಟದಲ್ಲಿ ಭಾಷೆ, ಜಾತಿ ಎಂದು ನೋಡುವುದು ಸರಿ ಆಗಲಾರದು. ಈ ಭಾಗದವರು ಆಯ್ಕೆಯಾದರೆ ಈ ಭಾಗದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವನ್ನು ಸ್ವಾಗತಿಸುತ್ತೇನೆ. ಆದರೆ, ನಾನು ಟಿಕೆಟ್ ಅಪೇಕ್ಷಿಸಿದವನೇ ಆಗಿರಲಿಲ್ಲ. ನನ್ನ ಅಭಿಮಾನಿಗಳು, ಅನುಯಾಯಿಗಳು ಸಹ ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ. ಕಾಂಗ್ರೆಸ್ ಕಿತ್ತೊಗೆಯುವುದು ನಮ್ಮೆಲ್ಲರ ಉದ್ದೇಶವಾಗಿದೆ ಎಂದರು.

ಡಾ.ವಿಜಯ ಸಂಕೇಶ್ವರ ಅವರ ನಿಲುವು ಮೌಲ್ಯದ ರಾಜಕಾರಣಕ್ಕೆ ಅಪರೂಪದ ಉದಾಹರಣೆ. ನಿರೀಕ್ಷೆಗಳನ್ನು ಬದಿಗಿಟ್ಟು ಪಕ್ಷಕ್ಕೆ, ಆತ್ಮೀಯರಿಗೆ ಬೆಂಬಲ ನೀಡುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಇದು ಇತರ ರಾಜಕಾರಣಿಗಳಿಗೆ ಆದರ್ಶ.

| ಡಾ. ವೀರಣ್ಣ ಚರಂತಿಮಠ ಮಾಜಿ ಶಾಸಕ

ಕಾಂಗ್ರೆಸ್ ಹಟಾವೋ ಅಭಿಯಾನ

ಕರ್ನಾಟಕದಲ್ಲಿ ಹಿಂದುಗಳಿಗೆ ಅನ್ಯಾಯ ಮಾಡುತ್ತಿರುವ ಕಾಂಗ್ರೆಸನ್ನು ಕರ್ನಾಟಕದಿಂದ ಮುಕ್ತವಾಗಿಸಲು ಹೆಚ್ಚಿನ ಸಮಯ ನೀಡಿ ಹೋರಾಟ ಮಾಡುವುದಾಗಿ ಘೊಷಿಸಿದ ವಿಜಯ ಸಂಕೇಶ್ವರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಮಾಡುವುದು, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೇ ಮುಂದಿನ ಗುರಿ ಎಂದರು. ನರೇಂದ್ರ ಮೋದಿ ಅವರ ವಿಚಾರಧಾರೆ ಅದ್ಭುತವಾಗಿದೆ. ಮೊದಲಿಗೆ ಆಯ್ಕೆಯಾಗಿ ಲೋಕಸಭೆ ಪ್ರವೇಶಿಸಿದಾಗ ಮೆಟ್ಟಿಲಿಗೆ ಹಣೆ ಹಚ್ಚಿ ನಮಸ್ಕರಿಸಿದರು. ನೋಟು ಅಮಾನ್ಯೀಕರಣ, ಸ್ವಚ್ಛ ಭಾರತ ಅಭಿಯಾನ, ಬೇಟಿ ಬಚಾವೊ ಬೇಟಿ ಪಢಾವೊ ಅಭಿಯಾನಗಳು ಜನಮನ ಮುಟ್ಟಿವೆ. ಸ್ವತಃ ರಾಷ್ಟ್ರಪತಿಯವರು ಪೊರಕೆ ಹಿಡಿದು ಸ್ವಚ್ಛಗೊಳಿಸುವಷ್ಟು ಸ್ವಚ್ಛ ಭಾರತ ಅಭಿಯಾನ ಪ್ರಭಾವಿ. ಕೇವಲ ಭಾರತದ ಪ್ರಧಾನಿಯಾಗಿರದೆ, ವಿಶ್ವನಾಯಕರ ಮನ್ನಣೆ ಗಳಿಸಿ ವಿಶ್ವ ಪ್ರಧಾನಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಈಗಾಗಲೇ ಕಾಂಗ್ರೆಸ್ ಹಟಾವೊ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ವಿಧಾನಸಭೆ ಚುನಾವಣೆ ವೇಳೆಗೆ ಮತ್ತಷ್ಟು ಸಮಯ ನೀಡಿ ಹೋರಾಡುತ್ತೇನೆ. ದೇಶ ಉಳಿಯಬೇಕು ಎಂದರೆ ಕಾಂಗ್ರೆಸನ್ನು ಕೆಳಗಿಳಿಸಲು ಎಲ್ಲ ಕನ್ನಡಿಗರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಇಂದಿರಾ ಕಂಬಿ ಎಣಿಸಿರಲಿಲ್ವಾ?

ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೊಂದು ಮಾತಿಗೂ ಯಡಿಯೂರಪ್ಪನವರು ಜೈಲಿಗೆ ಹೋಗಿ ಬಂದವರು ಎಂದು ಹೇಳುತ್ತಾರೆ. ಕಾಂಗ್ರೆಸ್ ಅಧಿನಾಯಕಿಯಾಗಿದ್ದ ಇಂದಿರಾ ಗಾಂಧಿ ಕಂಬಿ ಎಣಿಸಿರಲಿಲ್ಲವೆ? ತಮಿಳುನಾಡಿನ ಶಶಿಕಲಾ ಇಂದು ಕಂಬಿ ಎಣಿಸುತ್ತಿದ್ದಾರಲ್ಲ? ಅದೇ ಪರಿಸ್ಥಿತಿ ಇಂದಿರಾ ಗಾಂಧಿಯವರು ಆಡಳಿತದಲ್ಲಿದ್ದಾಗಲೇ ಬಂದಿತ್ತು. ಅಪ್ಪಟ ಕನ್ನಡಿಗ, ಪ್ರಮುಖ ವೀರಶೈವ ನಾಯಕ ಬಿ.ಡಿ. ಜತ್ತಿಯವರು ಕೆಲ ಕಾಲ ಹಂಗಾಮಿ ರಾಷ್ಟ್ರಪತಿಯಾಗಿದ್ದರು. ಅವರ ಕಾಲಿನ ಬಳಿ ಹೋಗಿ ಅಳುತ್ತ ಕುಳಿತುಕೊಂಡಿದ್ದ ಇಂದಿರಾಗಾಂಧಿಯವರು, ನಾನು ನಿಮ್ಮ ಮಗಳಿದ್ದಂತೆ, ನನ್ನನ್ನು ಉಳಿಸಿ ಎಂದು ಕೇಳಿಕೊಂಡಿದ್ದರು. ಜತ್ತಿಯವರು ತಮಗಿರುವ ವಿಟೊ ಅಧಿಕಾರ ಬಳಸಿ ಇಂದಿರಾ ಅವರನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಸಿದ್ದರಾಮಯ್ಯನವರು, ಕಾಂಗ್ರೆಸ್​ನವರು ಇದನ್ನು ನೆನಪು ಮಾಡಿಕೊಳ್ಳಲಿ ಎಂದು ಖಾರವಾಗಿ ಸಂಕೇಶ್ವರ ಹೇಳಿದರು..

ಕೆಜೆಪಿ-ಬಿಜೆಪಿ ಇಲ್ಲ

ರಾಜ್ಯ ಬಿಜೆಪಿಯಲ್ಲಿ ಕೆಜೆಪಿ ವಿವಾದ ಇನ್ನೂ ಇದೆ ಎಂಬುದನ್ನು ವಿಜಯ ಸಂಕೇಶ್ವರ ಅಲ್ಲಗಳೆದರು. ಅದೆಲ್ಲ ಮುಗಿದ ಅಧ್ಯಾಯ. ಈಗ ಅಂತಹ ಯಾವುದೇ ವಿವಾದಗಳಿಲ್ಲ ಎಂದು ಒಂದೇ ವಾಕ್ಯದಲ್ಲಿ ಹೇಳಿದರು.

ಕೈ ನಾಯಕರಿಂದ ಸಂಪರ್ಕ

ರಾಜ್ಯಸಭೆ ಟಿಕೆಟ್ ಕೈತಪ್ಪಿದ್ದರಿಂದ ಕಾಂಗ್ರೆಸ್ ನಾಯಕರು ಸಂರ್ಪಸಿದ್ದಾರೆಯೇ ಎಂಬ ಪ್ರಶ್ನೆಗೆ ವಿಜಯ ಸಂಕೇಶ್ವರ ಪ್ರತಿಕ್ರಿಯಿಸಿ, ‘ಅನೇಕ ಕಾಂಗ್ರೆಸ್ ನಾಯಕರು ಸಂಪರ್ಕಿಸುತ್ತಿದ್ದಾರೆ. ಇಂದೇ ನಾಲ್ಕೈದು ಪ್ರಮುಖರು ಸಂಪರ್ಕಿಸಿದ್ದರು. ಆದರೆ, ಯಾವುದೇ ಕಾರಣಕ್ಕೆ ಬೇರೆ ತೀರ್ಮಾನ ಕೈಗೊಳ್ಳುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಪಷ್ಟ ಮಾತು, ಶಾಂತ ಚಿತ್ತ ಉತ್ತರ

ರಾಜ್ಯಸಭಾ ಚುನಾವಣೆಯಲ್ಲಿ ಟಿಕೆಟ್ ಲಭಿಸದ್ದರಿಂದ ವಿಜಯ ಸಂಕೇಶ್ವರ ಅಸಮಾಧಾನಗೊಂಡಿದ್ದಾರೆ, ಪಕ್ಷ ತ್ಯಜಿಸಲಿದ್ದಾರೆ ಎಂಬ ಊಹಾಪೋಹದ ಸುದ್ದಿಗಳೆಲ್ಲವಕ್ಕೂ ಸ್ಪಷ್ಟವಾಗಿ, ಶಾಂತಚಿತ್ತರಾಗಿ ಉತ್ತರಿಸಿದರು. ತಾವೊಬ್ಬ ನಿಷ್ಠಾವಂತ ಕಾರ್ಯಕರ್ತ ಎನ್ನುತ್ತಲೇ ಸುದ್ದಿಗೋಷ್ಠಿ ಆರಂಭಿಸಿದ ಸಂಕೇಶ್ವರ ಅವರು, ಇಡೀ ಸುದ್ದಿಗೋಷ್ಠಿಯಲ್ಲಿ ಇದೇ ಮಾತನ್ನು ಕಾಯ್ದುಕೊಂಡರು. ಸ್ಥಳೀಯ ನಾಯಕರು, ರಾಜ್ಯ ನಾಯಕರ ವಿರುದ್ಧ, ಪಕ್ಷದ ಕುರಿತು… ಯಾರ ಕುರಿತೂ ನಕಾರಾತ್ಮಕ ಭಾವನೆಯಿಲ್ಲದೆ ಸ್ಪಷ್ಟವಾಗಿ ವಿಚಾರ ಮಂಡಿಸಿದರು. ಅದರಲ್ಲೂ, ರಾಜೀವ್ ಚಂದ್ರಶೇಖರ್ ಬಗ್ಗೆ ಉತ್ತಮ ಮಾತುಗಳನ್ನಾಡಿದರು. ಅವರೊಬ್ಬ ಉತ್ತಮ ಕನ್ನಡಿಗ ಹಾಗೂ ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಅವರ ಆಯ್ಕೆ ಉತ್ತಮವಾದದ್ದು ಎನ್ನುವ ಮೂಲಕ ತಮ್ಮ ಘನತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು.


ವೀರಶೈವ-ಲಿಂಗಾಯತ ಒಂದೇ

ವೀರಶೈವ- ಲಿಂಗಾಯತ ಒಂದೇ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಒಡೆದು ಆಳುವುದಕ್ಕೆ ಸಹಮತ ಇಲ್ಲ. ಒಂದುಗೂಡಿಸುವುದಕ್ಕೇ ನನ್ನ ಪ್ರಯತ್ನ ಎಂದು ಸಂಕೇಶ್ವರ ಸ್ಪಷ್ಟಪಡಿಸಿದ್ದಾರೆ.

ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನೆರವು ಸಿಗದಿದ್ದ ಕೆಲ ಮಠಾಧೀಶರೂ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಸೇರಿದ್ದಾರೆ. ಮಠಾಧೀಶರಲ್ಲೂ ದುಡ್ಡಿನ ದಾಹ ಇರುವ ಕೆಲವರಿದ್ದಾರೆ. ಕೆಲ ರಾಜಕಾರಣಿಗಳು ಕಪ್ಪು ಹಣ ಕೊಟ್ಟು ಅಂಥವರನ್ನು ಖರೀದಿಸಿದ್ದಾರೆ. ನನ್ನ ಅಭಿಪ್ರಾಯದಲ್ಲಿ ವೀರಶೈವ-ಲಿಂಗಾಯತ ಎರಡೂ ಒಂದಾಗಿ ಹೋಗುವುದು ಭವಿಷ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ರಾಜಕೀಯವಾಗಿ ಇದು ಹೇಗೆ ತಿರುವು ಪಡೆಯುತ್ತದೆ ಎಂಬ ಬಗ್ಗೆ ಏನೂ ಹೇಳುವುದಿಲ್ಲ. ರಾಜಕೀಯ ಅಥವಾ ಜಾತಿಯ ಕಾರಣಕ್ಕಾಗಿ ಲಿಂಗಾಯತ ಪ್ರತ್ಯೇಕವಾಗಿ ಹೋಗುವುದರ ಕುರಿತು ರ್ಚಚಿಸಲು ಸಿದ್ಧನಿಲ್ಲ. ಅನೇಕ ಸ್ವಾಮೀಜಿಗಳ ಜತೆ ಸಂಪರ್ಕದಲ್ಲಿದ್ದರೂ ಧರ್ಮ-ಜಾತಿ ವಿಷಯವಾಗಿ ರ್ಚಚಿಸುವುದಿಲ್ಲ. ಹಿಂದು ಧರ್ಮ ಒಂದಾಗಬೇಕು. ಈ ನಿಟ್ಟಿನಲ್ಲಿ ಅಂತರ್ಜಾತೀಯ ಮದುವೆಗೆ ನನ್ನ ವೈಯಕ್ತಿಕ ಬೆಂಬಲ ಇದೆ. ಕಾಲ ಬದಲಾಗಿರುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದೂ ಅವರು ಹೇಳಿದರು.

Leave a Reply

Your email address will not be published. Required fields are marked *

Back To Top