ಧರ್ಮಸ್ಯದಲ್ಲಿ ಚಿನ್ನಾರಿ ಮುತ್ತನ ಆಕ್ಷನ್

ಈವರೆಗೂ ‘ಚಿನ್ನಾರಿ ಮುತ್ತ’ ವಿಜಯ್ ರಾಘವೇಂದ್ರ ಪ್ರೀತಿ-ಪ್ರೇಮದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಅಲ್ಲೊಂದು ಇಲ್ಲೊಂದು ಆಕ್ಷನ್ ಸಾಹಸ ಮಾಡಿ ಮನಗೆದ್ದಿದ್ದು ಉಂಟು. ಇದೀಗ ಪೂರ್ಣ ಪ್ರಮಾಣದಲ್ಲಿ ಆಕ್ಷನ್ ಹೀರೋ ಅವತಾರ ಎತ್ತಿದ್ದಾರೆ. ‘ಯದಾ ಯದಾ ಹೀ ಧರ್ಮಸ್ಯ’ ಸಿನಿಮಾ ಮೂಲಕ ಆಕ್ಷನ್ ಅಖಾಡಕ್ಕೆ ಇಳಿದಿದ್ದಾರೆ. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡಿರುವ ‘..ಧರ್ಮಸ್ಯ’, ಇತ್ತೀಚೆಗೆ ಟ್ರೇಲರ್ ಬಿಡುಗಡೆ ಮಾಡಿಕೊಂಡು ಸಂಭ್ರಮಿಸಿತು.

ಚಿತ್ರದ ಕಥಾನಾಯಕ ಓರ್ವ ಗ್ಯಾಂಗ್​ಸ್ಟರ್. ಚಿಕ್ಕ ವಯಸ್ಸಿನಿಂದ ಕಷ್ಟಗಳ ಬೇಗುದಿಯಲ್ಲಿಯೇ ಬೆಳೆದ ಆತ ದುಡ್ಡಿಗಾಗಿ ಏನೆಲ್ಲ ಮಾಡುತ್ತಾನೆ? ಅಪರಾಧ ಲೋಕಕ್ಕೆ ಎಂಟ್ರಿಯಾಗಿ ಹೇಗೆ ಬೆಳೆಯುತ್ತಾನೆ ಎಂಬುದೇ ‘..ಧರ್ಮಸ್ಯ’ ಚಿತ್ರದ ಅಸಲಿ ಕಥೆಯಂತೆ. ‘ಇದು ಧರ್ಮ ಮತ್ತು ಅಧರ್ಮದ ನಡುವಿನ ಯುದ್ಧ’ ಧರ್ಮದ ರಕ್ಷಣೆಗೆ ಶ್ರೀ ಕೃಷ್ಣ ಜನ್ಮ ತಾಳುವ ರೀತಿ ಇಲ್ಲಿ ಅನ್ಯಾಯದ ವಿರುದ್ಧ ಕಥಾನಾಯಕ ತೊಡೆತಟ್ಟುತ್ತಾನೆ. ಆ ಕಾರಣಕ್ಕೆ ಶೀರ್ಷಿಕೆಯನ್ನು ‘ಯದಾ ಯದಾ ಹೀ ಧರ್ಮಸ್ಯ’ ಎಂದು ಇಡಲಾಗಿದೆ’ ಎನ್ನುತ್ತಾರೆ ವಿಜಯ್ ರಾಘವೇಂದ್ರ.

ಬಹುತಾರಾಗಣ ಇರುವ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅತಿಥಿ ಪಾತ್ರದಲ್ಲಿ ಬಂದು ಹೋಗಲಿದ್ದಾರಂತೆ. ವಿಲನ್ ಅವತಾರದಲ್ಲಿ ‘ಡೈಲಾಗ್ ಕಿಂಗ್’ ಸಾಯಿಕುಮಾರ್ ಅಬ್ಬರಿಸಿದ್ದಾರೆ. ವಿಜಯ್ಗೆ ಜೋಡಿಯಾಗಿ ಶ್ರಾವ್ಯಾ ನಟಿಸಿದ್ದಾರೆ. ಸಾಧು ಕೋಕಿಲ, ಕೆಂಪೇಗೌಡ ಕಾಮಿಡಿ ಕಚಗುಳಿ ಇಡಲಿದ್ದಾರೆ. ಪದ್ಮವಾಸಂತಿ, ಗಡ್ಡಪ್ಪ, ಪ್ರಥಮ್ ಸೇರಿ ಹಲವರು ತಾರಾಗಣದಲ್ಲಿದ್ದಾರೆ.

‘ಚಿತ್ರದಲ್ಲಿ ಎರಡು ಶೇಡ್​ಗಳಲ್ಲಿ ನನ್ನನ್ನು ತೋರಿಸಿದ್ದಾರೆ. ಒಂದರಲ್ಲಿ ನೆಗೆಟಿವ್ ಶೇಡ್ ಇದೆ. ಜತೆಗೆ ಬೋಲ್ಡ್ ಹುಡುಗಿಯಾಗಿಯೂ ಕಾಣಿಸಿಕೊಂಡಿದ್ದೇನೆ. ಪಾತ್ರದ ಸಲುವಾಗಿ ಬುಲೆಟ್ ಓಡಿಸಿದ್ದೇನೆ. ಮೊದಲ ಬಾರಿ ವಿಜಯ್ ರಾಘವೇಂದ್ರ ಜತೆ ನಟಿಸಿದ್ದು ಖುಷಿ ನೀಡಿದೆ’ ಎನ್ನುತ್ತಾರೆ ನಾಯಕಿ ಶ್ರಾವ್ಯಾ.

ಲಹರಿ ವೇಲು ಅತಿಥಿಯಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿದರು. ಜೂಡಾ ಸ್ಯಾಂಡಿ ಮತ್ತು ಪ್ರಯೋಗ್ ಸಂಗೀತ ನೀಡಿದ್ದು, ಐದು ಹಾಡುಗಳು ಸಿನಿಮಾದಲ್ಲಿವೆ. ಶಂಕರ್ ಛಾಯಾಗ್ರಹಣ ಮಾಡಿದ್ದಾರೆ. ಕೊಡಚಾದ್ರಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಆಗಿದ್ದು, ವಿಶಾಲ್ ಹಾಗೂ ಅಕ್ಷರ ತಿವಾರಿ ಬಂಡವಾಳ ಹೂಡಿದ್ದಾರೆ. ಸೆನ್ಸಾರ್​ನಿಂದ ಯು/ಎ ಪ್ರಮಾಣ ಪತ್ರ ಪಡೆದುಕೊಂಡಿರುವ ಸಿನಿಮಾ ಯುಗಾದಿ ವೇಳೆಗೆ ತೆರೆಗೆ ಬರಲಿದೆಯಂತೆ.