ಕೊಪ್ಪಳ: ಪ್ರಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಸನ್ಮಾನ ಮಾಡುವ ವಿಷಯದಲ್ಲಿ ಶಾಸಕ ಮತ್ತು ಜಿಲ್ಲಾಧಿಕಾರಿ ನಡುವೆ ರಂಪಾಟ ನಡೆದ ಪ್ರಸಂಗ ಆನೆಗೊಂದಿ ಉತ್ಸವದಲ್ಲಿ ಗುರುವಾರ ರಾತ್ರಿ ನಡೆದಿದೆ.
ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿರನ್ನು ಬಿಟ್ಟು ಜಿಲ್ಲಾಧಿಕಾರಿ ಸುನೀಲಕುಮಾರ್ ಅವರು ಗಾಯಕ ವಿಜಯ್ ಪ್ರಕಾಶ್ ಅವರಿಗೆ ಸನ್ಮಾನ ಮಾಡಿದ್ದು ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ.
ಆಗಿದ್ದೇನೆಂದರೆ… ಡಿಸಿ ಸುನೀಲ್ ಕುಮಾರ್ ಸನ್ಮಾನ ಮಾಡಿ ವೇದಿಕೆಯಿಂದ ಹೊರಟು ಹೋದರು. ಡಿಸಿ ವರ್ತನೆಗೆ ಬೇಸರಗೊಂಡು ಶಾಸಕ ಮುನವಳ್ಳಿ ಅಧಿಕಾರಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಎಸ್ಪಿ ಸಂಗೀತಾ ಅವರು ಸಮಾಧಾನ ಮಾಡಲು ಮುಂದಾದರು. ಬಳಿಕ ವೇದಿಕೆ ಮೇಲೆ ಬಂದು ಇನ್ನೊಮ್ಮೆ ಸನ್ಮಾನ ಮಾಡುವಂತೆ ಅಧಿಕಾರಿಗಳು ಶಾಸಕರಲ್ಲಿ ಮನವಿ ಮಾಡಿದರು.
ಆದರೆ, ಅಧಿಕಾರಿಗಳ ಮಾತಿಗೆ ಸೊಪ್ಪು ಹಾಕದೆ ಶಾಸಕ ಪರಣ್ಣ ಮುನವಳ್ಳಿ ವೇದಿಕೆ ಕೆಳಗಡೆ ಕುಳಿತಿದ್ದರು. ಈ ಬೆಳವಣಿಗೆಯಿಂದ ಬೇಸರಗೊಂಡ ಗಾಯಕ ವಿಜಯ್ ಪ್ರಕಾಶ್, ಕಾರ್ಯಕ್ರಮವನ್ನು ನಿಲ್ಲಿಸಿ, ವೇದಿಕೆಯಿಂದ ಕೆಳಗಡೆ ಇಳಿದು ಬಂದು ವೇದಿಕೆ ಮೇಲೆ ಬರುವಂತೆ ಶಾಸಕ ಪರಣ್ಣಗೆ ಮನವಿ ಮಾಡಿದರು. ಕೊನೆಗೆ ವೇದಿಕೆ ಮೇಲೆ ಬಂದ ಶಾಸಕರು ಬೆಂಬಲಿಗರೊಂದಿಗೆ ವಿಜಯ್ ಪ್ರಕಾಶ್ ಅವರಿಗೆ ಸನ್ಮಾನ ಮಾಡಿದರು. (ದಿಗ್ವಿಜಯ ನ್ಯೂಸ್)