ನಾನು ಕಳ್ಳತನ ಮಾಡಿಲ್ಲ : 2ನೇ ದಿನದ ಟ್ವೀಟ್​ನಲ್ಲಿ ವಿಜಯ್​ ಮಲ್ಯ

ಲಂಡನ್​: ಹತ್ತು ಸಾವಿರ ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡದೇ ವಿದೇಶಕ್ಕೆ ಪರಾರಿಯಾಗಿ ಭಾರತೀಯ ಬ್ಯಾಂಕುಗಳನ್ನು ಸತಾಯಿಸುತ್ತಿರುವ ವಿಜಯ್ ಮಲ್ಯ ನಾನು ಹಣ ಕಳ್ಳತನ ಮಾಡಿದ್ದೇನೆ ಎಂದು ಪದೇ ಪದೇ ಹೇಳುವುದನ್ನು ನಿಲ್ಲಿಸಿ ಎಂದು ಕಿಡಿ ಕಾರಿದ್ದಾರೆ.

ಅಗಸ್ತಾ ವೆಸ್ಟ್​ಲ್ಯಾಂಡ್​ ಹೆಲಿಕಾಪ್ಟರ್​ ಹಗರಣದ ಆರೋಪಿ, ಮಧ್ಯವರ್ತಿ ಕ್ರಿಶ್ಚಿಯನ್​ ಮಿಶೆಲ್​ ಅವರನ್ನು ದುಬೈನಿಂದ ಭಾರತಕ್ಕೆ ಗಡಿಪಾರು ಮಾಡಿರುವ ವಿಷಯದೊಂದಿಗೆ ನನ್ನ ಗಡಿಪಾರು ಪ್ರಕರಣವನ್ನು ತಳುಕು ಹಾಕುವುದು ಸರಿಯಲ್ಲ. ನಾನು ಹಣವನ್ನು ಹಿಂದಿರುಗಿಸುತ್ತೇನೆ ಎಂದು ತಿಳಿಸುತ್ತಿದ್ದೇನೆ ಎಂದು ಮಲ್ಯ ತಮ್ಮ ಟ್ವೀಟ್​ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿದ್ದ ಮಲ್ಯ, ಸಾಲದ ಅಸಲು ಮೊತ್ತ ಪಾವತಿಸಲು ತಯಾರಿದ್ದೇನೆ. ದಯವಿಟ್ಟು ಪರಿಗಣಿಸಿ ಎಂದು ಮನವಿ ಮಾಡಿದ್ದರು. ಕರ್ನಾಟಕ ಹೈಕೋರ್ಟ್ ಮುಂದೆ ನಾನು ಮಂಡಿಸಿರುವ ಪರಿಹಾರ ಸೂತ್ರದ ಬಗ್ಗೆ ಏಕೆ ಯಾರೂ ಮಾತನಾಡುವುದಿಲ್ಲ? ಸುಮಾರು 3 ದಶಕ ದೇಶದ ಖಜಾನೆಗೆ ಸಾವಿರಾರು ಕೋಟಿ ರೂ. ತೆರಿಗೆ ಪಾವತಿಸಿದ್ದೇನೆ. ತೈಲ ಬೆಲೆ ಏರಿಕೆಯಾದ ಕಾರಣ ಕಿಂಗ್​ಫಿಶರ್ ಏರ್​ಲೈನ್ಸ್ ನಷ್ಟ ಅನುಭವಿಸಬೇಕಾಯಿತು ಎಂದು ತಿಳಿಸಿದ್ದರು. (ಏಜೆನ್ಸೀಸ್​)

ಮಲ್ಯಗೆ ನಡುಕ ಶುರು: ಸಾಲದ ಅಸಲು ಕಟ್ತೀನೆಂದು ಹೊಸ ಪ್ರಸ್ತಾಪ