ಭಾರತ ಬಿಡುವ ಮುಂಚೆ ಜೇಟ್ಲಿ ಭೇಟಿ ಮಾಡಿದ್ದೆ: ವಿಜಯ್​ ಮಲ್ಯ

ಲಂಡನ್​: ನಾನು ಭಾರತವನ್ನು ತೊರೆಯುವ ಮುನ್ನ ಹಣಕಾಸು ಸಚಿವ ಅರುಣ್​ ಜೇಟ್ಲಿ ಅವರನ್ನು ಭೇಟಿ ಮಾಡಿದ್ದೆ ಎಂದು ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲ ಮರುಪಾವತಿ ಮಾಡದೆ ದೇಶಬಿಟ್ಟು ಹೋಗಿರುವ ಉದ್ಯಮಿ ವಿಜಯ್​ ಮಲ್ಯ ಗಂಭೀರ ಆರೋಪ ಮಾಡಿದ್ದಾರೆ.

ಲಂಡನ್​ನ ವೆಸ್ಟ್​ಮಿನಿಸ್ಟರ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ನ ಹೊರಗೆ ಪತ್ರಕರ್ತರೊಂದಿಗೆ ಮಾತನಾಡಿದ ಮಲ್ಯ ಜಿನೀವಾದಲ್ಲಿ ಸಭೆಯೊಂದರಲ್ಲಿ ಭಾಗವಹಿಸಬೇಕಿತ್ತು. ಹಾಗಾಗಿ ಭಾರತ ತೊರೆದು ಬಂದೆ. ನಾನು ಅಲ್ಲಿಂದ ಹೊರಡುವುದಕ್ಕೂ ಮುನ್ನ ಹಣಕಾಸು ಸಚಿವ ಅರುಣ್​ ಜೇಟ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೆ. ಬ್ಯಾಂಕ್​ಗಳಿಗೆ ಸಾಲ ಮರುಪಾವತಿ ಮಾಡುವ ಕುರಿತು ಸೆಟ್ಲ್​ಮೆಂಟ್​ಗೆ ಬರಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದೆ. ಇದು ಸತ್ಯ ಎಂದು ತಿಳಿಸಿದ್ದಾರೆ.

ನಾನು ಭಾರತೀಯ ರಾಜಕಾರಣದಲ್ಲಿ ಫುಟ್​ಬಾಲ್​ ಆಗಿದ್ದೇನೆ. ಈ ಕುರಿತು ನಾನು ಈ ಮೊದಲೂ ತಿಳಿಸಿದ್ದೆ. ಈ ವಿಷಯದ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ನಾನು ಸುಮಾರು 15,000 ಕೋಟಿ ರೂ. ಆಸ್ತಿಯನ್ನು ಕರ್ನಾಟಕ ಹೈಕೋರ್ಟ್​ ಮುಂದಿಟ್ಟಿದ್ದೆ. ಸಾಲ ಮರುಪಾವತಿ ಮಾಡಲು ಬ್ಯಾಂಕುಗಳು ಏಕೆ ನನಗೆ ಸಹಕಾರ ನೀಡುತ್ತಿಲ್ಲ ಎಂಬುದನ್ನು ಮಾಧ್ಯಮಗಳು ಪ್ರಶ್ನೆ ಮಾಡಬೇಕು ಎಂದು ಮಲ್ಯ ತಿಳಿಸಿದರು.

ಜೇಟ್ಲಿ ನಿರಾಕರಣೆ

ವಿಜಯ್​ ಮಲ್ಯ ಅವರ ಆರೋಪವನ್ನು ಹಣಕಾಸು ಸಚಿವ ನಿರಾಕರಿಸಿದ್ದು, ನಾನು ಅವರನ್ನು ಭೇಟಿ ಮಾಡಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. 2014ರಿಂದ ವಿಜಯ್​ ಮಲ್ಯ ಅವರ ಭೇಟಿಗೆ ನಾನು ಅವಕಾಶವನ್ನೇ ನೀಡಿಲ್ಲ. ಹಾಗಾಗಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರು ಮಾಡಿರುವ ಆರೋಪ ಸುಳ್ಳು ಎಂದು ಜೇಟ್ಲಿ ತಿಳಿಸಿದ್ದಾರೆ.