ವಿಜಯ್​ ಮಲ್ಯರನ್ನು ವಂಚಕ ಎನ್ನಬೇಡಿ ಎಂದಿದ್ದ ನಿತಿನ್​ ಗಡ್ಕರಿ ಇಂದು ಕೊಟ್ಟ ಸಮರ್ಥನೆ ಹೀಗಿದೆ…

ನವದೆಹಲಿ: ಸಾಲ ತೀರಿಸಲಾಗದೆ ವಿದೇಶಕ್ಕೆ ಪಲಾಯನ ಮಾಡಿದ್ದ ವಿಜಯ್​ ಮಲ್ಯ ಅವರನ್ನು ವಂಚಕ ಎಂದು ಕರೆಯಬೇಡಿ ಎಂದು ಗುರುವಾರ ಹೇಳಿಕೆ ನೀಡಿದ್ದ ಸಾರಿಗೆ ಸಚಿವ ನಿತಿನ್​ ಗಡ್ಕರಿ, ತಮ್ಮ ಮಾತಿನ ಸಂದರ್ಭವನ್ನು ಅರ್ಥ ಮಾಡಿಕೊಳ್ಳಲಿಲ್ಲ ಎಂದು ಶುಕ್ರವಾರ ತಿಳಿಸಿದ್ದಾರೆ.

ನಿನ್ನೆ ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗಡ್ಕರಿ, ವಿಜಯ್​ ಮಲ್ಯ 40 ವರ್ಷಗಳ ಕಾಲ ಸಕಾಲದಲ್ಲಿ ಸಾಲದ ಬಡ್ಡಿ ಹಣವನ್ನು ಪಾವತಿಸುತ್ತಿದ್ದರು. ಈಗ ಸಾಲ ತೀರಿಸಿಲ್ಲ ಎಂಬ ಕಾರಣಕ್ಕೆ ಅವರನ್ನು ಈಗ ಕಳ್ಳ, ವಂಚಕ ಎಂದು ಕರೆಯುವುದು ಸರಿಯಲ್ಲ ಎಂದು ಹೇಳಿದ್ದರು. ಸಚಿವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ವಿಜಯ್​ ಮಲ್ಯರನ್ನು ಈಗಾಗಲೇ ಗಡಿಪಾರು ಮಾಡಿ ಯುಕೆ ನ್ಯಾಯಾಲಯ ಆದೇಶ ನೀಡಿದ್ದು ಕೇಂದ್ರ ಸರ್ಕಾರಕ್ಕೆ ಸಿಕ್ಕ ಜಯ ಎಂದು ಹೇಳುತ್ತಿರುವಾಗಲೇ ನಿತಿನ್​ ಗಡ್ಕರಿಯವರ ಈ ಮಾತು ಹಲವು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

ಈ ಬಗ್ಗೆ ಇಂದು ಸ್ಪಷ್ಟನೆ ನೀಡಿದ ಸಾರಿಗೆ ಸಚಿವರು, ವಿಜಯ್​ ಮಲ್ಯ ಮಾಡಿರುವ ತಪ್ಪುಗಳ ಬಗ್ಗೆ ಸೂಕ್ತವಾಗಿ ತನಿಖೆಯಾಗುತ್ತಿದೆ ಎಂದೂ ಕೂಡ ನಾನು ಹೇಳಿದ್ದೇನೆ. ಮಲ್ಯ ಅವರದ್ದು 40 ವರ್ಷಗಳಿಂದ ಪ್ರಧಾನ ಖಾತೆಯಾಗಿದೆ. ಈಗ 41ನೇ ವರ್ಷ ನಡೆಯುತ್ತಿದೆ. ವ್ಯವಹಾರದಲ್ಲಿ ಏಳು-ಬೀಳು ಸಹಜ ಎಂದೂ ಹೇಳಿದ್ದೇನೆ. ಆದರೆ, ನನ್ನ ಎರಡೂ ಹೇಳಿಕೆಗಳನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ ಎಂದು ತಿಳಿಸಿದ್ದಾರೆ.

ನಿನ್ನೆ ಏನು ಹೇಳಿದ್ದರು?

ವಿಜಯ್​ ಮಲ್ಯ ಅವರ ಜತೆ ನನಗೆ ಯಾವುದೇ ಸಂಬಂಧವಿಲ್ಲ. ಅವರ ಖಾತೆ 40 ವರ್ಷಗಳಿಂದ ಇದ್ದು ಸಾಲದ ಬಡ್ಡಿಯನ್ನು ತೀರಿಸಿದ್ದಾರೆ. ವಿಮಾನಯಾನ ಉದ್ಯಮದಲ್ಲಿ ನಷ್ಟವುಂಟಾದ ಕಾರಣಕ್ಕೆ ಅವರನ್ನು ಕಳ್ಳ ಎಂದು ಕರೆಯಲಾಗದು. ಮಹಾರಾಷ್ಟ್ರ ಸರ್ಕಾರದ ಸಿಕೋಮ್​ ಹಣಕಾಸು ಸಂಸ್ಥೆಯಿಂದ ಸಾಲ ಪಡೆದಿದ್ದರು. ಅದನ್ನು ಸರಿಯಾದ ಸಮಯಕ್ಕೆ ತೀರಿಸುತ್ತಿದ್ದರು. ಯಾವುದೇ ಉದ್ಯಮದಲ್ಲಿ ಲಾಭನಷ್ಟ ಸಹಜ. ಯಾರಿಗಾದರೂ ನಷ್ಟವುಂಟಾದರೆ ಅವರಿಗೆ ಬೆಂಬಲ ನೀಡಬೇಕು ಎಂದು ನಿನ್ನೆ ಹೇಳಿದ್ದರು.
ನೀರವ್​ ಮೋದಿ ಮೋಸ ಮಾಡಿದ್ದರೆ ಅವರನ್ನು ಜೈಲಿಗೆ ಕಳಿಸಬೇಕು. ಮಲ್ಯ ಅವರು ಸುಳ್ಳು ದಾಖಲೆ ನೀಡಿ ವಂಚಿಸಿದ್ದರೆ ಅವರಿಗೂ ಶಿಕ್ಷೆ ಆಗಲಿ. ಆದರೆ ನಷ್ಟದಲ್ಲಿರುವವರನ್ನೆಲ್ಲ ವಂಚಕರು, ಕಳ್ಳರು ಎಂದು ನಾವು ಹೇಳುತ್ತ ಕುಳಿತರೆ ದೇಶದ ಆರ್ಥಿಕತೆ ಅಭಿವೃದ್ಧಿಯಾಗುವುದಿಲ್ಲ ಎಂದಿದ್ದರು.