ವಿಜಯ್​ಮಲ್ಯ ಮೊದಲ ದೇಶಭ್ರಷ್ಟ ಆರ್ಥಿಕ ಅಪರಾಧಿ

ನವದೆಹಲಿ: ಉದ್ಯಮಿ ವಿಜಯ್​ ಮಲ್ಯ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಮುಂಬೈ ನ್ಯಾಯಾಲಯ ಘೋಷಿಸಿದೆ.

ಈ ಮೂಲಕ ವಿಜಯ್​ ಮಲ್ಯ, ಮನಿ ಲ್ಯಾಂಡರಿಂಗ್​ ನಿಯಂತ್ರಣಾ ನ್ಯಾಯಾಲಯದ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ 2018ರ ಅನ್ವಯ ಮೊದಲ ದೇಶಭ್ರಷ್ಟ ಆರ್ಥಿಕ ಅಪರಾಧಿಯಾಗಿದ್ದಾರೆ. ಅಲ್ಲದೆ, ಮಲ್ಯಾ ಅವರ ಆಸ್ತಿ ಮುಟ್ಟುಗೋಲಿಗೆ ಸಂಬಂಧಪಟ್ಟಂತೆ ಫೆ.5ರಂದು ಮತ್ತೆ ನ್ಯಾಯಾಲಯ ವಿಚಾರಣೆ ನಡೆಸಲಿದೆ.
ಮಲ್ಯ ಪರ ವಕೀಲರು ಹಾಗೂ ಜಾರಿ ನಿರ್ದೇಶನಾಲಯ(ಇ.ಡಿ.)ದ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ವಿಶೇಷ ನ್ಯಾಯಾಧೀಶ ಎಂ.ಎಸ್.ಅಜ್ಮಿ ಮಲ್ಯ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಿದ್ದಾರೆ.

ಬ್ಯಾಂಕ್​ಗಳ ಸಾಲ ತೀರಿಸಲಾಗದೆ ವಿದೇಶಕ್ಕೆ ಪಲಾಯನ ಮಾಡಿರುವ ಮಲ್ಯ ಅವರನ್ನು ಆರ್ಥಿಕ ಅಪರಾಧಿಯೆಂದು ಘೋಷಿಸುವಂತೆ ಇ.ಡಿ. ನವೆಂಬರ್​ನಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ, ಮಲ್ಯಾ ಅವರು ಉದ್ಯಮಕ್ಕೆ ಸಂಬಂಧಪಟ್ಟ ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ತೆರಳಿದ್ದಾರೆಂದು ಅವರ ಪರ ವಕೀಲರು ವಾದಿಸಿದ್ದರು.