ಫೋರ್ಸ್ ಇಂಡಿಯಾದಿಂದ ಮಲ್ಯ ಔಟ್ ಫಾಮುಲಾ1 ತಂಡಕ್ಕೆ ಹೊಸ ಮಾಲೀಕರು

ಲಂಡನ್: ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, ಹಣಕಾಸಿನ ಬಿಕ್ಕಟ್ಟಿನಲ್ಲಿರುವ ಫೋರ್ಸ್ ಇಂಡಿಯಾ ಫಾಮುಲಾ ಒನ್ ತಂಡದ ಮೇಲಿನ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದ ತಂಡದ ಉಳಿವಿಗಾಗಿ ಚಾಲಕ ಮೆಕ್ಸಿಕೊದ ಸೆರ್ಗಿಯೊ ಪೆರೆಜ್ ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ಇದರಿಂದ ತಂಡ ನ್ಯಾಯಾಲಯದ ಸೂಚನೆಯಂತೆ ಆಡಳಿತಾಧಿಕಾರಿಗಳ ವಶಕ್ಕೆ ಒಳಪಟ್ಟಿತ್ತು. ಈಗ ಹೂಡಿಕೆದಾರರ ಒಕ್ಕೂಟವೊಂದು ತಂಡವನ್ನು ಖರೀದಿಸಲು ಮುಂದೆ ಬಂದಿದ್ದು, ಆಡಳಿತಾಧಿಕಾರಿಗಳು ಇದನ್ನು ಒಪ್ಪಿಕೊಂಡಿದ್ದಾರೆ. ಇದರಿಂದ ಫೋರ್ಸ್ ಇಂಡಿಯಾದ 405 ಉದ್ಯೋಗಿಗಳ ಆತಂಕ ದೂರವಾಗಿದೆ. ‘ಫಾಮುಲಾ ಒನ್​ನಲ್ಲಿ ನಮ್ಮ ತಂಡ ಉಳಿದುಕೊಳ್ಳಲಿದೆ. ಭವಿಷ್ಯದ ಎಲ್ಲ ರೇಸ್​ಗಳಲ್ಲೂ ನಮ್ಮ ಚಾಲಕರು ಸ್ಪರ್ಧಿಸಲಿದ್ದಾರೆ’ ಎಂದು ಫೋರ್ಸ್ ಇಂಡಿಯಾ ಮುಖ್ಯ ಕಾರ್ಯನಿರ್ವಾಹಕ ಓಟ್ಮಾರ್ ಸಜಾಫ್​ನವರ್ ತಿಳಿಸಿದ್ದಾರೆ. ಸಿಲ್ವರ್​ಸ್ಟೋನ್ ಮೂಲದ ತಂಡವನ್ನು ಮಲ್ಯ 2007ರಲ್ಲಿ ಖರೀದಿಸಿದ್ದರು. ತಂಡದಲ್ಲಿ ಮಲ್ಯ ಮತ್ತು ಸಹಾರಾ ಕಂಪನಿ ತಲಾ ಶೇ. 42.5 ಷೇರು ಹೊಂದಿತ್ತು. ಫೋರ್ಸ್ ಇಂಡಿಯಾ ತನಗೆ ಇಂಜಿನ್ ಪೂರೈಸುವ ಮರ್ಸಿಡೀಸ್ ಸಹಿತ ಹಲವರಿಗೆ ಕೋಟ್ಯಂತರ ರೂ. ನೀಡಲಾಗದೆ ಸಂಕಷ್ಟದಲ್ಲಿದೆ. -ಏಜೆನ್ಸೀಸ್