ವಿಜಯ್ ಬೆಳ್ಳಿತೆರೆ ರಾಜಕೀಯ!

‘ಪೆಳ್ಳಿ ಚೂಪುಲು’, ‘ಅರ್ಜುನ್ ರೆಡ್ಡಿ’, ‘ಗೀತ ಗೋವಿಂದಂ’ ಚಿತ್ರಗಳ ಮೂಲಕ ಯಶಸ್ಸು ಗಳಿಸಿರುವ ಸೆನ್ಸೇಷನಲ್ ನಟ ವಿಜಯ್ ದೇವರಕೊಂಡ ಟಾಲಿವುಡ್ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದಲ್ಲಿ ಫೇಮಸ್. ಅವರು ನಟಿಸಿರುವ ‘ನೋಟಾ’ ಸಿನಿಮಾ ಇಂದು (ಅ.5) ತೆರೆಕಾಣುತ್ತಿದೆ. ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿರುವ ಈ ಚಿತ್ರದ ಪ್ರಚಾರದ ಸಲುವಾಗಿ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ವಿಜಯ್ ದೇವರಕೊಂಡ ನಮಸ್ತೆ ಬೆಂಗಳೂರು ಜತೆ ಮಾತಿಗೆ ಸಿಕ್ಕರು.

| ಮದನ್ ಬೆಂಗಳೂರು

ಕರ್ನಾಟಕ ನಿಮ್ಮ ಮನಸ್ಸಿಗೆ ಎಷ್ಟು ಹತ್ತಿರವಾಗಿದೆ? ಕನ್ನಡದಲ್ಲಿ ನೀವು ನಟಿಸುವುದು ಯಾವಾಗ?

ಬೆಂಗಳೂರಿನಲ್ಲಿ ನನಗೆ ಸ್ನೇಹಿತರು ಹಲವರಿದ್ದಾರೆ. ನಾನು ಪುಟ್ಟಪರ್ತಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದು. ಅಲ್ಲಿಗೆ ಬೆಂಗಳೂರಿನಿಂದ ಕೆಲವೇ ಗಂಟೆಗಳ ಪಯಣ. ರಜಾದಿನಗಳಲ್ಲಿ ಇಲ್ಲಿಗೆ ಬಂದು ಜಾಲಹಳ್ಳಿ, ಹೆಬ್ಬಾಳ ಮುಂತಾದೆಡೆ ಸುತ್ತಾಡುತ್ತಿದ್ದೆ. ಕರ್ನಾಟಕದಲ್ಲಿ ನನಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈಗಾಗಲೇ ನಿರ್ವಪಕ ರಾಕ್​ಲೈನ್ ವೆಂಕಟೇಶ್ ಜತೆ ಒಂದು ಸಿನಿಮಾದ ಮಾತುಕತೆ ನಡೆದಿದೆ. ಕೆಲವು ಜಾಹೀರಾತುಗಳಲ್ಲಿ ನಾನು ಕನ್ನಡ ಮಾತನಾಡಿದ್ದೇನೆ. ಶೀಘ್ರದಲ್ಲೇ ಅವು ಜನರೆದುರು ಬರಲಿವೆ. ಅವುಗಳಿಗೆ ಸಿಗುವ ಪ್ರತಿಕ್ರಿಯೆ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ.

ಚುನಾವಣೆಯಲ್ಲಿ ನೋಟಾ ಬಟನ್ ಒತ್ತುವಂತೆ ಜನರನ್ನು ಈ ಚಿತ್ರ ಪ್ರೇರೇಪಿಸುತ್ತದೆ ಎಂಬ ವಾದ ಕೇಳಿಬರುತ್ತಿದೆಯಲ್ಲ…

ಸಿನಿಮಾಕ್ಕೆ ಯಾಕೆ ಈ ರೀತಿ ಶೀರ್ಷಿಕೆ ಇಟ್ಟಿದ್ದೇವೆ ಎಂಬುದು ನಿಮಗೆ ಚಿತ್ರ ನೋಡಿದ ಬಳಿಕ ಗೊತ್ತಾಗುತ್ತದೆ. ನೋಟಾ ಬಟನ್ ಒತ್ತುವಂತೆ ನಾವು ಯಾರನ್ನೂ ಪ್ರೇರೇಪಿಸುತ್ತಿಲ್ಲ. ನಾವೆಲ್ಲರೂ ಮತದಾನ ಮಾಡಲೇಬೇಕು. ಆ ಮೂಲಕ ನಾವು ವ್ಯವಸ್ಥೆಯನ್ನು ಬದಲಿಸಬಹುದು ಎಂಬುದನ್ನು ಪ್ರೇಕ್ಷಕರಿಗೆ ತಿಳಿಸುವ ಉದ್ದೇಶ ಅಷ್ಟೇ ನಮ್ಮದು.

ನಿಜಜೀವನದಲ್ಲಿ ರಾಜಕೀಯಕ್ಕೆ ಬರುತ್ತೀರಾ?

ನಾನು ನಟ ಆಗುತ್ತೇನೆ ಎಂದು ಹತ್ತು ವರ್ಷದ ಹಿಂದೆ ಅಂದುಕೊಂಡಿರಲಿಲ್ಲ. ಈಗ ಅದು ಸಾಧ್ಯವಾಗಿದೆ. ಮುಂದಿನ ಹತ್ತು ವರ್ಷದಲ್ಲಿ ಏನಾಗುತ್ತೋ ಗೊತ್ತಿಲ್ಲ. ಸದ್ಯಕ್ಕೆ ನನಗೆ ರಾಜಕೀಯದ ಬಗ್ಗೆ ಏನೂ ತಿಳಿದಿಲ್ಲ. ಹಾಗಂತ ಭವಿಷ್ಯದ ಸಾಧ್ಯತೆಗಳ ಬಗ್ಗೆ ಈಗಲೇ ಏನೂ ಊಹಿಸಲು ಸಾಧ್ಯವಿಲ್ಲ.

ಕನ್ನಡ ಚಿತ್ರರಂಗದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಶಿವರಾಜ್​ಕುಮಾರ್ ನಟನೆಯ ‘ಮಫ್ತಿ’ ಮತ್ತು ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್​ಗಳು ರಿಲೀಸ್ ಆದಾಗ ನೋಡಿ ಖುಷಿಪಟ್ಟಿದ್ದೇನೆ. ‘ಒಂದು ಮೊಟ್ಟೆಯ ಕಥೆ’, ‘ತಿಥಿ’ ಸಿನಿಮಾಗಳ ಬಗ್ಗೆ ಕೇಳಿ ತಿಳಿದುಕೊಂಡಿದ್ದೇನೆ. ‘ಯು ಟರ್ನ್’ ತೆರೆಕಂಡಾಗ ನಿರ್ದೇಶಕ ಪವನ್ ಕುಮಾರ್ ಜತೆ ಆ ಬಗ್ಗೆ ಚರ್ಚೆ ನಡೆಸಿದ್ದೆ. ಇಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ಬರುತ್ತವೆ ಎಂಬುದು ನಮ್ಮ ತೆಲುಗು ಚಿತ್ರರಂಗದವರಿಗೂ ಗೊತ್ತು.

‘ನೋಟಾ’ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?

ರಾಜಕೀಯದ ಬಗ್ಗೆ ಏನೂ ಗೊತ್ತಿಲ್ಲದ ಯುವಕನೊಬ್ಬ ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದರೆ ಏನಾಗುತ್ತದೆ ಎಂಬುದೇ ಈ ಚಿತ್ರದ ಕಥಾಹಂದರ. ನಾನು ಯುವ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದೇನೆ. ಪ್ರಸ್ತುತ ವ್ಯವಸ್ಥೆ ಕುರಿತು ಜನಸಾಮಾನ್ಯನೊಬ್ಬನಿಗೆ ಇರಬಹುದಾದ ಹತಾಶೆಯಿಂದ ಹುಟ್ಟಿದ ಕಥೆ ಇದು.

ಸ್ಟಾರ್ ನಟರೆಲ್ಲ ವೆಬ್​ಸಿರೀಸ್​ನತ್ತ ಗಮನ ಹರಿಸುತ್ತಿದ್ದಾರೆ. ನೀವೂ ಆ ಬಗ್ಗೆ ಏನಾದರೂ ಆಲೋಚಿಸಿದ್ದೀರಾ?

ಸದ್ಯಕ್ಕೆ ಕಿರುತೆರೆ ನನಗೆ ಸೂಕ್ತ ಅಲ್ಲ ಎಂದುಕೊಂಡಿದ್ದೇನೆ. ಅದರಲ್ಲಿ ನನ್ನನ್ನು ನಾನು ನೋಡಿಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ಸಿನಿಮಾವನ್ನು ಒಬ್ಬೊಬ್ಬರೇ ಖಾಸಗಿಯಾಗಿ ನೋಡುವುದು ಅಥವಾ ಮನೆಯಲ್ಲಿ ಮೂರ್ನಾಲ್ಕು ಜನ ಕುಳಿತು ನೋಡುವುದಕ್ಕಿಂತ ಐನೂರು, ಸಾವಿರ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಜತೆಯಾಗಿ ಕುಳಿತು ಎಂಜಾಯ್ ಮಾಡಲಿ ಎಂದು ಬಯಸುತ್ತೇನೆ. ಹಾಗಾಗಿ ವೆಬ್​ಸರಣಿ ಸದ್ಯಕ್ಕೆ ನನ್ನ ಆದ್ಯತೆ ಅಲ್ಲ.

ವರ್ಜಿನಿ ಎಂಬ ಹುಡುಗಿ ನಿಮ್ಮ ಕುಟುಂಬದ ಸದಸ್ಯರ ಜತೆ ಇದ್ದ ಫೋಟೋ ಇತ್ತೀಚೆಗೆ ವೈರಲ್ ಆಗಿದ್ದರಿಂದ ನಿಮ್ಮ ಮಹಿಳಾಭಿಮಾನಿಗಳಿಗೆ ಬೇಸರ ಆಗಿರಬಹುದೆ?

ಯಾರೂ ಬೇಸರಪಟ್ಟುಕೊಳ್ಳಬೇಕಿಲ್ಲ. ಎಲ್ಲ ಮಹಿಳಾಭಿಮಾನಿಗಳನ್ನೂ ನನ್ನ ಕುಟುಂಬದ ಭಾಗ ಎಂದೇ ಭಾವಿಸಿದ್ದೇವೆ. ನನಗೆ 80 ವರ್ಷ ವಯಸ್ಸಾದಾಗಲೂ ಮಹಿಳಾಭಿಮಾನಿಗಳು ನನ್ನನ್ನು ಇಷ್ಟಪಡಬೇಕೆಂದು ಬಯಸುತ್ತೇನೆ.