ಟಿ.ಎಂ.ವಿಜಯಭಾಸ್ಕರ್ ನೂತನ ಮುಖ್ಯ ಕಾರ್ಯದರ್ಶಿ

ಬೆಂಗಳೂರು: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಟಿ.ಎಂ.ವಿಜಯಭಾಸ್ಕರ್ ಶನಿವಾರ ಅಧಿಕಾರ ಸ್ವೀಕರಿಸಿದರು.

ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ರತ್ನಪ್ರಭಾ ಶನಿವಾರ ಕರ್ತವ್ಯದಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ವಿಜಯಭಾಸ್ಕರ್​ರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ರತ್ನಪ್ರಭಾ ಅವರನ್ನು ಮತ್ತೆ ಮೂರು ತಿಂಗಳ ಅವಧಿಗೆ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ, ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಕೊನೇಗಳಿಗೆಯಲ್ಲಿ ಹಿಂದಕ್ಕೆ ಪಡೆಯಲಾಗಿತ್ತು. ನೂತನ ಸಿಎಸ್​ಗೆ ರತ್ನಪ್ರಭಾ ಅಧಿಕಾರ ಹಸ್ತಾಂತರಿಸಿದರು. ಸಿಎಂ ಕುಮಾರಸ್ವಾಮಿ ಅವರು ರತ್ನಪ್ರಭಾ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.

ಪರಿಚಯ: ಟಿ.ಎಂ.ವಿಜಯಭಾಸ್ಕರ್ 1983ನೇ ಬ್ಯಾಚ್​ನ ಐಎಎಸ್ ಅಧಿಕಾರಿ. ಬೆಂಗಳೂರಿನವರಾದ ಅವರು 28 ಡಿಸೆಂಬರ್ 1960ರಂದು ಜನಿಸಿದ್ದಾರೆ. ಬರ್ವಿುಂಗ್ ಹ್ಯಾಮ್ಲ್ಲಿ ಎಂಬಿಎ, ರಾಜಸ್ಥಾನದ ಪಿಳನಿಯ ಬಿರ್ಲಾ ಇನ್​ಸ್ಟಿಟ್ಯೂಟ್​ನಲ್ಲಿ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ. ಕೊಪ್ಪಳದಲ್ಲಿ ಸಹಾಯಕ ಆಯುಕ್ತರಾಗಿ ಕರ್ತವ್ಯ ಆರಂಭಿಸಿದ ಅವರು, ಮಂಡ್ಯದಲ್ಲಿ ಜಿಪಂ ಮುಖ್ಯ ಕಾರ್ಯದರ್ಶಿ, ಮೈಸೂರು ಜಿಲ್ಲಾಧಿಕಾರಿ, ಬೆಂಗಳೂರು ಜಲಮಂಡಳಿ ಚೇರ್ಮನ್, ಅರಣ್ಯ, ಪರಿಸರ, ನಗರಾಭಿವೃದ್ಧಿ, ಕೃಷಿ, ತೋಟಗಾರಿಕೆ, ಆರ್​ಡಿಪಿಆರ್, ಡಿಪಿಎಆರ್​ನಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ, ಅಭಿವೃದ್ಧಿ ಆಯುಕ್ತರಾಗಿ ಕೆಲಸ ಮಾಡಿದ್ದಾರೆ. ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ಅವಧಿಯಲ್ಲಿ ಆಡಳಿತ ಸುಧಾರಣೆಗೆ ಹಲವು ಕ್ರಮ ಕೈಗೊಂಡಿದ್ದರು. ಮೈಸೂರಿನಲ್ಲಿ ನಡೆದಿದೆ ಎನ್ನಲಾದ ಭೂ ಅಕ್ರಮಗಳ ಕುರಿತ ವರದಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಧೂಳು ಹಿಡಿಸುತ್ತಿದೆ. ಇವರ ಸೇವಾವಧಿ ಡಿಸೆಂಬರ್ 2020ರವರೆಗೆ ಇರುತ್ತದೆ.

ಸರ್ಕಾರ ಗುರುತರ ಜವಾಬ್ದಾರಿ ನೀಡಿದ್ದು, ಯಶಸ್ವಿಯಾಗಿ ನಿಭಾಯಿಸುತ್ತೇನೆ. ಜನಪರ ಕೆಲಸಗಳಿಗೆ ಆದ್ಯತೆ, ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪುವಂತೆ ಮಾಡಲು ಯತ್ನಿಸುತ್ತೇನೆ. ರಾಜ್ಯವನ್ನು ದೇಶದಲ್ಲಿಯೇ ಮುಂಚೂಣಿಗೆ ಕೊಂಡೊಯ್ಯುತ್ತೇನೆ. ಈ ಜವಾಬ್ದಾರಿ ನೀಡಿದ್ದಕ್ಕೆ ಸಿಎಂ, ಡಿಸಿಎಂ ಅವರಿಗೆ ಅಭಾರಿಯಾಗಿದ್ದೇನೆ.

| ಟಿ.ಎಂ.ವಿಜಯಭಾಸ್ಕರ್ ನೂತನ ಸಿಎಸ್

ಐಎಎಸ್ ಅಧಿಕಾರಿಗಳ ವರ್ಗಾವಣೆ

ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಡಿ.ವಿ.ಪ್ರಸಾದ್-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ವಂದಿತಾ ಶರ್ಮ- ಅಭಿವೃದ್ಧಿ ಆಯುಕ್ತರು, ಸಂದೀಪ್ ದವೆ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ (ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಹೊಣೆ), ಎಂ.ಮಹೇಶ್ವರ ರಾವ್, ಕಾರ್ಯದರ್ಶಿ, ಸಹಕಾರ ಇಲಾಖೆ. ಬಿ.ಬಿ.ಕಾವೇರಿ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತೆ.

ಸರ್ಕಾರದ ಪರ ಕೆಲಸ

ಅವಧಿ ವಿಸ್ತರಣೆ ತಡೆ ಹಿಡಿದ ವಿಚಾರವಾಗಿ ನಿರ್ಗಮಿತ ಸಿಎಸ್ ರತ್ನಪ್ರಭಾ ಪ್ರತಿಕ್ರಿಯಿಸಿದ್ದು, ನಾವು ಯಾವಾಗಲೂ ಸರ್ಕಾರದ ಪರವಾಗಿಯೇ ಕೆಲಸ ಮಾಡಬೇಕು. ಅವರ ಪರ ಇವರ ಪರ ಅಂತ ಕೆಲಸ ಮಾಡಲ್ಲ ಎಂದು ಸ್ಪಷ್ಟ ಪಡಿಸಿದರು. ಕೇಂದ್ರ ಸರ್ಕಾರ ನಿಮ್ಮನ್ನು ರಾಜ್ಯಪಾಲರನ್ನಾಗಿ ಮಾಡಲಿದೆ ಎಂಬ ಸುದ್ದಿ ಹಬ್ಬಿದೆಯಲ್ಲ ಎಂಬ ಪ್ರಶ್ನೆಗೆ, ಅಂತಹದ್ದೇನೂ ಇಲ್ಲ ಎಂದು ನಕ್ಕರು.

ಭಾವುಕರಾದ ಸಿಬ್ಬಂದಿ: ಸಿಎಸ್ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ನಿರ್ಗಮಿತ ರತ್ನಪ್ರಭಾಗೆ ಹೂ ಗುಚ್ಛ ನೀಡಿ ಬೀಳ್ಕೊಟ್ಟರು. ಕೆಲ ಸಿಬ್ಬಂದಿ ಭಾವುಕರಾದ ಪ್ರಸಂಗ ನಡೆಯಿತು.