ವಿಜಯವಾಣಿ ಸುದ್ದಿಜಾಲ ಬೆಂಗಳೂರು:
“ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಮನೆಮಾತಾದ ಮಲೈಕಾ ವಸುಪಾಲ್, ಕಳೆದ ವರ್ಷ “ಉಪಾಧ್ಯಕ್ಷ’ ಚಿಕ್ಕಣ್ಣನಿಗೆ ನಾಯಕಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದು ಗೊತ್ತಿದೆ. ಆ ಬಳಿಕ “ಇಕ್ಕಟ್’ ನಾಗಭೂಷಣ್ಗೆ ಜೋಡಿಯಾಗಿ “ವಿದ್ಯಾಪತಿ’ ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೆ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.
ನಾಯಕಿ ಮಲೈಕಾ ಚಿತ್ರದಲ್ಲೂ ಸೂಪರ್ಸ್ಟಾರ್ ವಿದ್ಯಾ ಎಂಬ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಔಟ್ ಆ್ಯಂಡ್ ಔಟ್ ಕಾಮಿಡಿ ಚಿತ್ರವಾಗಿದ್ದು ಜತೆಗೆ ರೊಮ್ಯಾನ್ಸ್, ಆ್ಯಕ್ಷನ್ ಅಂಶಗಳೂ ಇರಲಿವೆ. ಚಿತ್ರಕ್ಕೆ ಇಶಾಂ ಮತ್ತು ಹಸೀನ್ ಖಾನ್ ಆ್ಯಕ್ಷನ್&ಕಟ್ ಹೇಳುತ್ತಿದ್ದು, ಕರಾಟೆಪಟು ಪಾತ್ರದಲ್ಲಿ ನಾಗಭೂಷಣ್ ಮತ್ತು ಕರಾಟೆ ಮಾಸ್ಟರ್ ಆಗಿ ರಂಗಾಯಣ ರಘು ನಟಿಸುತ್ತಿದ್ದಾರೆ.
ವಿಲನ್ ಆಗಿ “ಕೆಜಿಎ್’ ಗರುಡಾ ರಾಮ್ ನಟಿಸುತ್ತಿದ್ದು, ಕಾರ್ತಿಕ್ ರಾವ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಉಳಿದಂತೆ ಲವಿತ್ ಛಾಯಾಗ್ರಹಣ, ಮುರಳಿ ನೃತ್ಯ ನಿರ್ದೇಶನ, ಅರ್ಜುನ್ ಮಾಸ್ಟರ್ ಸಾಹಸ ಚಿತ್ರಕ್ಕಿರಲಿದೆ. ಇದೇ ಏ.10ರಂದು “ವಿದ್ಯಾಪತಿ’ ತೆರೆಗೆ ಬರಲಿದೆ.