ಸಾಗರ: ಎಲೆಮರೆ ಕಾಯಿಯಂತೆ ತಮ್ಮ ಇಡೀ ಬದುಕನ್ನು ಸಂಸ್ಕೃತ ಭಾಷೆಗಾಗಿ ಮೀಸಲಿಟ್ಟ ವಿದ್ವಾನ್ ಕೆ.ಎಸ್.ಭಾಸ್ಕರ ಭಟ್ ಅವರು ತಮ್ಮ ಸಾಹಿತ್ಯ ಕೊಡುಗೆಯ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ನಾಡಿನಾದ್ಯಂತ ಸಂಸ್ಕೃತ ಪಾಠಶಾಲೆ ತೆರೆದ ಹೆಗ್ಗಳಿಕೆ ಅವರದ್ದು ಎಂದು ಶ್ರೀಕ್ಷೇತ್ರ ಹೊರನಾಡಿನ ಧರ್ಮದರ್ಶಿಗಳಾದ ಭೀಮೇಶ್ವರ ಜೋಷಿ ಹೇಳಿದರು.
ತಾಲೂಕಿನ ಭೀಮನಕೋಣೆ ಲಕ್ಷ್ಮೀನಾರಾಯಣಸ್ವಾಮಿ ಕಲ್ಯಾಣ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ವಿದ್ವಾನ್ ಕೆ.ಎಸ್.ಭಾಸ್ಕರ ಭಟ್ ಜನ್ಮಶತಮಾನೋತ್ಸವ ಹಾಗೂ ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೂರಕ್ಕೆ ನೂರು ಒಪ್ಪುವ ಪರಿಪೂರ್ಣ ವ್ಯಕ್ತಿತ್ವ ಭಾಸ್ಕರ ಭಟ್ ಅವರದ್ದು. ಮನುಷ್ಯನ ಜೀವನ ಉಜ್ಜೀವನವಾಗಬೇಕು. ಬದುಕು ಸಾರ್ಥಕತೆ ಕಡೆ ಸಾಗಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಸ್ವಾತಂತ್ರ್ಯಪೂರ್ವದಲ್ಲಿ ದೇಶದ ಋಣ ತೀರಿಸಬೇಕು ಎನ್ನುವ ಸಂಕಲ್ಪದೊಂದಿಗೆ ಚಳವಳಿಯಲ್ಲಿ ಪಾಲ್ಗೊಂಡು ಸೆರೆವಾಸ ಅನುಭವಿಸಿದ್ದರು. ಅವರ ಸಾಹಿತ್ಯ ಜೀವನ, ಧಾರ್ಮಿಕ ಜೀವನ, ಸಂಸ್ಕೃತ ಜೀವನ, ಬದುಕಿನ ಸಾರ, ಶ್ರೇಷ್ಠತೆ ಅತ್ಯಂತ ಅನುಕರಣೀಯವಾದದ್ದು. ಅತ್ಯಂತ ಸರಳ ಮತ್ತು ಸಜ್ಜನಿಕೆಯಿಂದ ಬದುಕಿದ್ದ ಅವರು ಯುವಜನರಿಗೆ ಆದರ್ಶಪ್ರಾಯರು ಎಂದರು.
ಭಾಸ್ಕರ ಭಟ್ ಪ್ರಖ್ಯಾತಿ ವಿಶ್ವದಾದ್ಯಂತ ಹರಡಿದೆ. ವಿಶ್ವಾದ್ಯಂತ ಹೆಸರು ಗಳಿಸಿದ್ದರೂ ಸಾರ್ಥಕತೆ ಸಿಗುವುದು ಹುಟ್ಟೂರಿನಲ್ಲಿ ಗೌರವ ಸಿಕ್ಕಾಗ. ಅಂತಹ ಗೌರವ ಭಾಸ್ಕರ ಭಟ್‌ಗೆ ಅವರ ಜನ್ಮಸ್ಥಳದಲ್ಲಿ ಸಿಕ್ಕಿದೆ. ಅವರ ಸಾಹಿತ್ಯ ಕೃತಿಗಳ ಕುರಿತು ಇನ್ನಷ್ಟು ಅಧ್ಯಯನದ ಅಗತ್ಯವಿದೆ. ಅವರ ಶಿಷ್ಯರು ಶೈಕ್ಷಣಿಕ ಸೇವೆಯನ್ನು ಮುಂದುವರಿಸಿದ್ದಾರೆ. ಇದು ಭಾಸ್ಕರ ಭಟ್‌ಗೆ ಸಲ್ಲುತ್ತಿರುವ ನಿಜವಾದ ಗೌರವ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಪ್ರೊ. ಟಿ.ಎನ್.ಪ್ರಭಾಕರ ಶಾಸ್ತ್ರಿ ಮಾತನಾಡಿ, ಭಾಸ್ಕರ ಭಟ್ ಸೇರಿದಂತೆ ವರ್ತಮಾನದ ಕವಿಗಳ ಬಗ್ಗೆ ಸಮಾಜ ಇನ್ನಷ್ಟು ಅರಿತುಕೊಳ್ಳಬೇಕು. ಭಾಸ್ಕರ ಭಟ್ ಅವರಂತಹ ಸಾಹಿತ್ಯ ಶಿರೋಮಣಿಯನ್ನು ನೆನಪಿಸಿಕೊಳ್ಳುವ ಶ್ರೇಷ್ಠ ಕೆಲಸವನ್ನು ಗ್ರಾಮೋತ್ಸವ ರೀತಿಯಲ್ಲಿ ಎಲ್ಲರೂ ಸೇರಿ ಆಚರಿಸುತ್ತಿರುವುದು ಸಂತೋಷದ ಸಂಗತಿ. ಅವರಲ್ಲಿರುವ ಶ್ರೇಷ್ಠ ಗುಣಗಳನ್ನು ನಾವು ನಮ್ಮದಾಗಿಸಿಕೊಳ್ಳುವತ್ತ ಗಮನ ಹರಿಸಬೇಕು. ಸಂಸ್ಕೃತ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಭಾಷಾ ಕಲಿಕೆ ಮತ್ತು ಗ್ರಹಿಕೆಯನ್ನು ಅತ್ಯಂತ ವ್ಯವಸ್ಥಿತವಾಗಿ ಕಟ್ಟಿಕೊಟ್ಟಿದ್ದಾರೆ ಎಂದರು.
ಭಾಸ್ಕರ ಭಟ್ ರಚಿಸಿರುವ ದೇವೀವಿಲಾಸಕಾವ್ಯಮ್ ಸಂಸ್ಕೃತ ಗ್ರಂಥ, ಕಾವ್ಯ ಭಾಸ್ಕರ, ಚಿಂತನಾ ಭಾಸ್ಕರ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ಭಾಸ್ಕರ ಭಟ್ ಕುರಿತ ಪ್ರದರ್ಶಿನಿಯನ್ನು ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಲೇಖಕರನ್ನು ಸನ್ಮಾನಿಸಲಾಯಿತು.
ಮನೋವೈದ್ಯ ಡಾ. ಕೆ.ಆರ್.ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಪ.ನಾ.ಶಾಸ್ತ್ರಿ, ವಿದ್ಯಾವಾಚಸ್ಪತಿ ಉಮಾಕಾಂತ ಭಟ್ ಕೆರೆಕೈ, ಕೆ.ವಿ.ಶ್ರೀಧರ್, ರಘುನಂದನ ಭಟ್, ಕೃಷ್ಣಮೂರ್ತಿ ಕಾಶಿ, ಡಾ. ಶ್ರೀದೇವಿ ಹೆಗಡೆ, ಡಾ. ಪತಂಜಲಿ ವೀಣಾಕರ್, ವಿದ್ವಾನ್ ಗಜಾನನ ಭಟ್, ತ್ರಿವೇಣಿ, ಶತಮಾನೋತ್ಸವ ಸಮಿತಿ ಪ್ರಧಾನ ಸಂಚಾಲಕ ಬಿ.ಎಚ್.ರಾಘವೇಂದ್ರ, ವಿಷ್ಣು ಶರ್ಮ, ವಿಷ್ಣಮೂರ್ತಿ ಇತರರಿದ್ದರು.