ವಿಧಾನಸೌಧಕ್ಕೆ ಪಾರಂಪರಿಕ ಕಟ್ಟಡ ಪಟ್ಟ ನೀಡಿದರೆ ನವೀಕರಣ ಸಮಸ್ಯೆ ಇರೊಲ್ಲ

ವಿಧಾನಸೌಧ: ನವೀಕರಣದ ಹೆಸರಲ್ಲಿ ವಿಧಾನಸೌಧದ ಕೊಠಡಿಗಳನ್ನು ಒಡೆಯುವುದನ್ನು ನಿಲ್ಲಿಸಬೇಕಿದ್ದರೆ, ಅದನ್ನು ಪಾರಂಪರಿಕ ಕಟ್ಟಡ ಎಂದು ಘೋಷಿಸುವ ಅಗತ್ಯವಿದೆ ಎಂದು ಪರಿಷತ್​ನ ಕಾಂಗ್ರೆಸ್​ ಸದಸ್ಯ ಗೋವಿಂದರಾಜು ಸದನದಲ್ಲಿ ಪ್ರಸ್ತಾಪ ಮಂಡಿಸಿದ್ದಾರೆ. ಅವರ ಪ್ರಸ್ತಾಪಕ್ಕೆ ಸದನದಲ್ಲಿ ಬೆಂಬಲವೂ ವ್ಯಕ್ತವಾಗಿದೆ.

ಗೋವಿಂದರಾಜು ಅವರ ಪ್ರಸ್ತಾಪಕ್ಕೆ ಪರಿಷತ್​ ಸಭಾಪತಿ ಹೊರಟ್ಟಿ ಅವರೂ ಬೆಂಬಲ ಸೂಚಿಸಿದರು. ವಿಧಾನಸೌಧದ ಕಟ್ಟಡದ ಘನತೆಗೆ ಧಕ್ಕೆ ತರುವ ಘಟನೆಗಳು ನಡೆಯುತ್ತಿರುವುದು ಬೇಸರದ ಸಂಗತಿ. ವಿಧಾನಸೌಧವನ್ನು ಪಾರಂಪರಿಕ ಎಂದು ಘೋಷಣೆ ಮಾಡುವುದು ಅವಶ್ಯಕವಾಗಿದೆ. ಸದನದ ಸದಸ್ಯರು ಒಪ್ಪಿಕೊಂಡರೆ ಈ ಬಗ್ಗೆ ಒಮ್ಮತದ ನಿರ್ಧಾರ ತಗೆದುಕೊಳ್ಳಬಹುದು ಎಂದು ಹೊರಟ್ಟಿ ಹೇಳಿದರು. ಸಭಾಪತಿ ಹೊರಟ್ಟಿ ಮಾತಿಗೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.

ಕೆಂಗಲ್ ಹನುಮಂತಯ್ಯ​ ದೂರಾಲೋಚನೆ

ಕೆಂಗಲ್​ ಹನುಮಂತಯ್ಯನವರು ರಾಜ್ಯ ವಿಧಾನಸಭೆಗೆ ಕಟ್ಟಡವೊಂದನ್ನು ನಿರ್ಮಿಸುವಾಗ ವಾಸ್ತುಶಿಲ್ಪ ವಿಚಾರದಲ್ಲಿ ಅತ್ಯಂತ ಎಚ್ಚರ ವಹಿಸಿದ್ದರು. ಈ ಕಟ್ಟಡ ಮುಂದೊಂದು ದಿನ ಐತಿಹಾಸಿಕ, ಪಾರಂಪರಿಕ ಕಟ್ಟಡವಾಗಬಹುದು ಎಂಬ ಮನ್ನೋಟ ಅವರಿಗಿದ್ದಿರಬಹುದು. ಈ ಕಾರಣಕ್ಕೇ ನಿರ್ಮಾಣ ಹಂತದಲ್ಲಿ ಅವರು ಆ ಮಟ್ಟಿಗಿನ ಅಸ್ತೆ ವಹಿಸಿದ್ದಿರಬಹುದು. ಅದರಂತೆ, ದ್ರಾವಿಡ ಮತ್ತು ಇಂಡೋ ಸಾರ್ಸೆನಿಕ್​ ವಾಸ್ತು ಶಿಲ್ಪದಲ್ಲಿ ವಿಧಾನಸೌಧವನ್ನು ನಿರ್ಮಿಸಿದ್ದರು. ಹೀಗಾಗಿ ಇಂದು ವಿಧಾನಸೌಧವನ್ನು ಕಂಡೊಡನೆ ಸಾವಿರಾರು ವರ್ಷಗಳ ಹಿನ್ನೆಲೆ ಇರುವ ಪಾರಂಪರಿಕ ಕಟ್ಟಡವೇನೋ ಎಂದು ಭಾಸವಾಗುತ್ತದೆ.