ಅನಿತಾ ಕುಮಾರಸ್ವಾಮಿಗೆ ರಾಮನಗರದಲ್ಲಿ ನಿರಾಯಾಸ ಗೆಲುವಿನ ಮಾಲೆ

ರಾಮನಗರ: ಜೆಡಿಎಸ್‌ ಭದ್ರಕೋಟೆ ಎಂದೇ ಬಿಂಬಿತವಾಗಿರುವ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

9 ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ 54,868 ಮತಗಳನ್ನು ಪಡೆದಿದ್ದರೆ, ಬಿಜೆಪಿ 7,627 ಮತ ಪಡೆದಿತ್ತು. ನೋಟಾ 1,467 ಚಲಾವಣೆಯಾಗಿ ಜೆಡಿಎಸ್‌ 47,241 ಮತಗಳ ಮುನ್ನಡೆ ಕಾಯ್ದುಕೊಂಡಿತ್ತು.

ನ.3 ರಂದು ನಡೆದ ಮತದಾನದಲ್ಲಿ ರಾಮನಗರದಲ್ಲಿ ಶೇ. 73.71 ರಷ್ಟು ಮತದಾನವಾಗಿತ್ತು. ಅದರಂತೆ ಇಂದು ನಡೆದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಅನಿತಾ ಕುಮಾರಸ್ವಾಮಿ ಅವರು ಜಯ ಸಾಧಿಸಿದ್ದಾರೆ.

ಕಾಂಗ್ರೆಸ್​ ತೊರೆದು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ವಿಧಾನ ಪರಿಷತ್‌ ಕಾಂಗ್ರೆಸ್​​ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪತ್ರ ಚಂದ್ರಶೇಖರ್​ ಅವರನ್ನು ಬಿಜೆಪಿ ರಾಮನಗರ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಆದರೆ, ಚುನಾವಣೆಗೆ ಇನ್ನೇನು ಎರಡು ದಿನಗಳು ಬಾಕಿ ಇರುವಾಗಲೇ ಕಣದಿಂದ ಹಿಂದೆ ಸರಿದಿದ್ದ ಚಂದ್ರಶೇಖರ್‌ ಅವರು ಮಾತೃಪಕ್ಷ ಕಾಂಗ್ರೆಸ್‌ಗೆ ಮರಳಿದ್ದರು.

ಬಿಜೆಪಿ ಅಭ್ಯರ್ಥಿಯೇ ಇಲ್ಲದೆ ರಾಮನಗರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಮತ್ತಷ್ಟು ವರದಾನವಾಗಿ ಮಾರ್ಪಟ್ಟಿತ್ತು. ಒಟ್ಟಿನಲ್ಲಿ ನಿರೀಕ್ಷೆಯಂತೆಯೇ ಅನಿತಾ ಕುಮಾರಸ್ವಾಮಿ ನಿರಾಯಾಸದಿಂದ ಗೆಲುವು ಸಾಧಿಸಿದ್ದಾರೆ.