ನಿತ್ಯಾನಂದ ಶಿವಗಂಗೆ ಚಿಕ್ಕಮಗಳೂರು
ಮಾಜಿ ಸಚಿವ ಸಿ.ಟಿ.ರವಿ ಅವರಿಗೆ ವಿಧಾನ ಪರಿಷತ್ತಿನ ಬಾಗಿಲು ತೆರೆದಿದೆ. ಈ ಮೂಲಕ ಮೇಲ್ಮನೆಯ ಸದಸ್ಯರಾಗುವುದು ಖಚಿತವಾದಂತಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಸಿ.ಟಿ.ರವಿ ಅವರಿಗೆ ಯಾವುದೇ ಅಧಿಕಾರವೂ ಇರಲಿಲ್ಲ. ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದು ಬಿಟ್ಟರೆ ರಾಜ್ಯದ ಮಟ್ಟಿಗೆ ಪಕ್ಷದಲ್ಲೂ ಸೂಕ್ತ ಸ್ಥಾನಮಾನ ಸಿಕ್ಕಿರಲಿಲ್ಲ. ಇದು ಸಿ.ಟಿ.ರವಿ ಅವರ ಬೆಂಬಲಿಗರ ಬೇಸರಕ್ಕೆ ಕಾರಣವಾಗಿತ್ತು.
ಕಳೆದ ವಿಧಾನಸಭಾ ಚುನಾವಣೆ ವೇಳೆ ಸಿ.ಟಿ.ರವಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲೇ ಇದ್ದರು. ಅದಕ್ಕೆ ಪೂರಕ ವಾತಾವರಣವೂ ಇತ್ತು. ಹೀಗಾಗಿ ಸಿ.ಟಿ.ರವಿ ಅವರ ಕ್ಷೇತ್ರಕ್ಕಿಂತಲೂ ಅಕ್ಕಪಕ್ಕದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸಲು ಹೆಚ್ಚು ಪ್ರವಾಸ ಮಾಡಲಾರಂಭಿಸಿದ್ದರು. ಆದರೆ ಇದೇ ವೇಳೆಗೆ ಅವರ ಗರಡಿಯಲ್ಲೇ ಪಳಗಿದ್ದ ಆಪ್ತ ಪಕ್ಷಾಂತರಗೊಂಡು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು ಸಿ.ಟಿ.ರವಿ ಅವರಿಗೆ ತೀವ್ರ ಹಿನ್ನಡೆ ನೀಡಿತು. ಜತೆಗೆ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರೂ ಕಾಂಗ್ರೆಸ್ ಅಭ್ಯರ್ಥಿಯ ಬೆನ್ನಿಗೆ ನಿಂತಿದ್ದರು. ಇಷ್ಟಾದರೂ ಪರವಾಗಿರಲಿಲ್ಲ. ಯಡಿಯೂರಪ್ಪ ಅವರು ಸಖರಾಯಪಟ್ಟಣ ಭಾಗದಲ್ಲಿ ಒಂದು ಸಮಾವೇಶ ನಡೆಸಿದ್ದರೂ ಸಿ.ಟಿ.ರವಿ ಗೆಲ್ಲುತ್ತಿದ್ದರು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿಯೇ ಕೇಳಿಬರಲಾರಂಭಿಸಿದ್ದವು. ಒಟ್ಟಾರೆ ಈ ಎಲ್ಲ ಕಾರಣಗಳಿಂದಾಗಿ ಸಿ.ಟಿ.ರವಿ ಸೋಲನುಭವಿಸುವಂತಾಯಿತು.
ಹೀಗಾಗಿಯೇ ಸಿ.ಟಿ.ರವಿ ಸ್ವಪಕ್ಷದ ಕೆಲವರ ಮೇಲೆ ಹಾಗೂ ಸೋಲಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣರಾದವರ ವಿರುದ್ಧ ಹೆಸರು ಹೇಳಲಿಚ್ಛಿಸದೆ ವಾಗ್ದಾಳಿ ನಡೆಸಿದ್ದರು. ಜತೆಗೆ ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ಎಲ್ಲವನ್ನೂ ಬಹಿರಂಗವಾಗಿ ಹೇಳುತ್ತೇನೆ ಎಂದು ಹೇಳಿದ್ದರು.
ಈ ಹೊತ್ತಿಗಾಗಲೇ ಲೋಕಸಭಾ ಚುನಾವಣೆ ಘೋಷಣೆಯಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಮಿಸ್ ಆಗಿತ್ತು. ಆಗ ಈ ಅವಕಾಶ ಸಿ.ಟಿ.ರವಿ ಅವರಿಗೆ ಸಿಗಲಿದೆ ಎನ್ನಲಾಗಿತ್ತಾದರೂ ಅದು ಹುಸಿಯಾಗಿತ್ತು. ಈ ವೇಳೆಯೂ ಪಕ್ಷ ನಿಷ್ಠೆ ಮೆರೆದಿದ್ದ ಸಿ.ಟಿ.ರವಿ ಅವರು ಯಾರೇ ಪಕ್ಷದ ಅಭ್ಯರ್ಥಿಯಾದರೂ ನಾನು ಅವರನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರೇ ನಮ್ಮ ಅಭ್ಯರ್ಥಿ ಎಂದು ಹೇಳುವ ಮೂಲಕ ಪಕ್ಷ ಸಂಘಟನೆಗೆ ಇನ್ನಷ್ಟು ಚುರುಕು ಮುಟ್ಟಿಸಿದ್ದರು.
ಈ ಸಂದರ್ಭದಲ್ಲಿಯೇ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಪರವಾಗಿ ಸಖರಾಯಪಟ್ಟಣಕ್ಕೆ ಪ್ರಚಾರಕ್ಕೆ ಆಗಮಿಸಿದ ಮಾಜಿ ಸಿಎಂ ಯಡಿಯೂರಪ್ಪ ಅವರು ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡುವ ಮೊದಲೇ ಸಿ.ಟಿ.ರವಿ ಅವರ ಕುರಿತಾಗಿ ವಿಷಯ ಪ್ರಸ್ತಾಪ ಮಾಡಿದ್ದರು. ಸಿ.ಟಿ.ರವಿ ಉತ್ತಮ ವಾಗ್ಮಿ, ವಿಧಾನಸಭೆ ಅಥವಾ ವಿಧಾನಪರಿಷತ್‌ನಲ್ಲಿ ಅವರಂಥ ನಾಯಕರು ಬೇಕು. ಹೀಗಾಗಿ ಸಿ.ಟಿ.ರವಿ ಅವರನ್ನು ವಿಧಾನಸಭೆ ಅಥವಾ ವಿಧಾನ ಪರಿಷತ್‌ಗೆ ಕಳುಹಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರು ಆಗಿದ್ದ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಆಗಲೇ ಸಿ.ಟಿ.ರವಿ ಅವರು ಪರಿಷತ್ ಸದಸ್ಯರಾಗುವುದು ಬಹುತೇಕ ಖಾತ್ರಿಯಾಗಿತ್ತು.
ವಿಪಕ್ಷ ನಾಯಕರಾಗುವ ಸಾಧ್ಯತೆಯೂ ಇದೆ
ಸಿ.ಟಿ.ರವಿ ನಾಲ್ಕು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ವಿಧಾನ ಪರಿಷತ್ ವಿಪಕ್ಷ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಒಂದು ವೇಳೆ ಕೋಟ ಶ್ರೀನಿವಾಸ ಪೂಜಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾದಲ್ಲಿ ವಿಧಾನಪರಿಷತ್ ಸ್ಥಾನದ ಜತೆಗೆ ವಿಪಕ್ಷ ನಾಯಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕಾಗಲಿದೆ. ಆಗ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾಗುವ ವಿಧಾನ ಪರಿಷತ್‌ವಿಪಕ್ಷ ನಾಯಕನ ಸ್ಥಾನಕ್ಕೆ ಹಿರಿತನದ ಆಧಾರದ ಮೇಲೆ ಸಿ.ಟಿ.ರವಿ ಅವರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ದಟ್ಟವಾಗಿದೆ.