ಹುಕ್ಕೇರಿ: ಸಂತ್ರಸ್ತರಿಗೆ ಶೀಘ್ರ ಪರಿಹಾರ ಕಲ್ಪಿಸಲು ಆಗ್ರಹ

ಹುಕ್ಕೇರಿ: ಅತಿವೃಷ್ಟಿಯಿಂದ ನಲುಗುತ್ತಿರುವ ಸಂತ್ರಸ್ಥರಿಗೆ ತಕ್ಷಣ ಮರು ವಸತಿ ಹಾಗೂ ಬದುಕು ರೂಪಿಸಿಕೊಳ್ಳಲು ಯೋಗ್ಯ ಆರ್ಥಿಕ ಸಹಾಯ ಸೌಲಭ್ಯ ಒದಗಿಸಲು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಗುರುವಾರ ಸ್ಥಳೀಯ ಕೋರ್ಟ್ ವೃತ್ತದಿಂದ ತಹಸೀಲ್ದಾರ್ ಕಾರ್ಯಾಲಯದವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.

ಕಾಂಗ್ರೆಸ್ ಪಕ್ಷ ಧುರೀಣರಾದ ಪ್ರಕಾಶ ದೇಶಪಾಂಡೆ, ಡಾ.ಎಸ್.ಕೆ.ಮಕಾನದಾರ, ಪಕ್ಷದ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಪಂಕಜಾ ನೇರ್ಲಿ, ತಾಲೂಕು ಘಟಕದ ಅಧ್ಯಕ್ಷೆ ರೇಖಾ ಚಿಕ್ಕೋಡಿ ಮಾತನಾಡಿ, ನೆರೆ ಹಾವಳಿಯಲ್ಲಿ ಬದುಕು ಕಳೆದು ಕೊಂಡವರ ಜೀವನದೊಂದಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಇರುವ ಬಿಜೆಪಿ ಸರ್ಕಾರ ಸರಿಯಾಗಿ ಸಹಾಯ ಸೌಲಭ್ಯ ಒದಗಿಸಿಲ್ಲ ಎಂದು ಆರೋಪಿಸಿದರು. ಸಂಕಟದಲ್ಲಿರುವ ಸಂತ್ರಸ್ತರಿಗೆ ತಾರತಮ್ಯ ಮಾಡದೇ ನೆರವು ಕಲ್ಪಿಸಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ತಹಸೀಲ್ದಾರ್ ರೇಷ್ಮಾ ತಾಳಿಕೋಟೆ ಮನವಿ ಸ್ವೀಕರಿಸಿದರು. ಹುಕ್ಕೇರಿ ಬ್ಲಾಕ್ ಅಧ್ಯಕ್ಷ ಅಶೋಕ ಅಂಕಲಗಿ, ವಿಜಯ ರವದಿ, ಶ್ರೀಕಾಂತ ಭೂಷಿ, ರವಿ ಕರಾಳೆ, ಮಹಾದೇವ ಪಾಟೀಲ, ಮಹೇಶ ಹಟ್ಟಿಹೊಳಿ, ಸಲೀಮ ಕಳಾವಂತ, ಎ.ಕೆ. ಪಾಟೀಲ, ಕಬೀರ ಮಲೀಕ್, ಭೀಮಗೌಡ ಅಮ್ಮಣಗಿ, ಕೆಂಪಣ್ಣ ಶಿರಹಟ್ಟಿ, ಬಸವರಾಜ ನಾಯಿಕ ಇತರರಿದ್ದರು.

Leave a Reply

Your email address will not be published. Required fields are marked *