ಸಂತ್ರಸ್ತರ ನೆರವಿಗೆ ಹರಿದುಬಂದ ನೆರವು

ಇಟಗಿ: ಕೊಡಗು, ಕರಾವಳಿ, ಮಲೆನಾಡು ಹಾಗೂ ಕೇರಳದಲ್ಲಿ ಭಾರಿ ಮಳೆಯಿಂದಾಗಿ ಸಂತ್ರಸ್ತರಾಗಿರುವ ಜನರ ನೆರವಿಗೆ ಗಂದಿಗವಾಡದಲ್ಲಿ ನೆರವಿನ ಮಹಾಪೂರ ಹರಿದು ಬಂದಿದೆ.

ಹಸಿರು ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಈ ಕುರಿತು ಶನಿವಾರ ಸಂಜೆ ಗಂದಿಗವಾಡ ಸೇರಿ ಸುತ್ತಲಿನ ಗ್ರಾಮಗಳಿಗೆ ಮಾಹಿತಿ ನೀಡಲಾಗಿತ್ತು. ಭಾನುವಾರ ಸಂಜೆ ಹೊತ್ತಿಗೆ ಸ್ಥಳೀಯ ಗ್ರಾಮದೇವಿ ದೇವಸ್ಥಾನದಲ್ಲಿ ಖಾನಾಪುರ ತಾಲೂಕಿನ ಗಂದಿಗವಾಡ, ಕಕ್ಕೇರಿ, ಹಿರೇಕರ ದಡ್ಡಿ, ಮಂಗೇನಕೊಪ್ಪ, ಹಿಂಡಲಗಿ, ಚಿಕ್ಕಅಂಗ್ರೋಳ್ಳಿ, ಹಂದೂರ, ಹುಲಿಕೊತ್ತಲ, ಗೋಲಿಹಳ್ಳಿ ಸೇರಿ ವಿವಿಧ ಗ್ರಾಮಗಳಿಂದ ಅಗತ್ಯ ಸಾಮಗ್ರಿ ಸಂಗ್ರಹವಾಗಿದೆ.

15000 ರೊಟ್ಟಿ, 5 ಕ್ವಿಂಟಾಲ್ ಅಕ್ಕಿ, 10 ಬಾಕ್ಸ್ ಬಿಸ್ಕಿಟ್, 1 ಕ್ವಿಂಟಾಲ್ ಖಾರಾ ಸೇರಿ ಇತರೆ ಆಹಾರ ಪದಾರ್ಥಗಳು ಸಂಗ್ರಹವಾಗಿದ್ದು ಸೋಮವಾರ ಬೆಳಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಸಾಮಗ್ರಿ ತಲುಪಿಸಲಾಗುವುದು ಎಂದು ಜಿಲ್ಲಾ ರೈತ ಮುಖಂಡ ಅಶೋಕ ಯಮಕನಮರ್ಡಿ ವಿಜಯವಾಣಿಗೆ ತಿಳಿಸಿದ್ದಾರೆ.

ಗಂದಿಗವಾಡದ ಶಶಿಧರ ಮೂಲಿಮನಿ, ಅರ್ಜುನ ಗಾಳಿ, ಗಂಗಪ್ಪ ಹಿರೇಕರ, ಅಣ್ಣಪ್ಪ ಮಿರಜಕರ, ಅನಿಲ ಅಂಗಡಿ, ಮಂಜುನಾಥ ಕಮ್ಮಾರ, ಮಲ್ಲಪ್ಪ ಗಾಳಿ, ಶ್ರೀಶೈಲ ಕಮ್ಮಾರ, ಗುರುಲಿಂಗಯ್ಯ ಪೂಜಾರ ಹಾಗೂ ಇತರರು ಇದ್ದರು.