ಹುಕ್ಕೇರಿ: ಗ್ರಾಮೀಣ ಜಾನುವಾರುಗಳ ಆರೋಗ್ಯ ಸಂರಕ್ಷಣೆಯಲ್ಲಿ ಪಶು ಸಖಿಯರ ಪಾತ್ರ ಪ್ರಮುಖವಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ಪಟ್ಟಣದಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಶು ಸಖಿಯರಿಗೆ ಪಶು ಚಿಕಿತ್ಸಾ ಕಿಟ್ ಹಾಗೂ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು. ಮನೆ ಬಾಗಿಲಿಗೆ ಪಶು ಸಖಿಯರ ಸೇವೆ ದೊರೆಯಲಿದೆ. ರೈತರು ಮತ್ತು ಪಶು ಇಲಾಖೆ ನಡುವಿನ ಸಂಪರ್ಕದ ಕೊಂಡಿಯಾಗಿ ಸಖಿಯರು ಸೇವೆ ಸಲ್ಲಿಸಲಿದ್ದಾರೆ ಎಂದರು.
ಸಹಾಯಕ ನಿರ್ದೇಶಕ ಡಾ.ಆರ್.ಎಂ.ಕದಂ ಮಾತನಾಡಿ, ತಾಲೂಕಿನಲ್ಲಿ ಇರುವ ಜಾನುವಾರುಗಳ ಸಂಖ್ಯೆಗೆ ತಕ್ಕಂತೆ ಇರದ ಪಶು ಇಲಾಖೆ ಸಿಬ್ಬಂದಿ ಕೊರತೆ ಕುರಿತು ಶಾಸಕರ ಗಮನ ಸೆಳೆದರು. ಪುರಸಭೆ ಸದಸ್ಯ ಭೀಮಶಿ ಗೋರಖನಾಥ, ಮುಖಂಡರಾದ ಚನ್ನಪ್ಪ ಗಜಬರ, ಆನಂದ ಲಕ್ಕುಂಡಿ, ಶಹಜಹಾನ ಬಡಗಾಂವಿ, ಆದರ್ಶ ಅಂಕಲಗಿ, ಸಿದ್ದು ಗಡಕರಿ, ಗಿರೀಶ ಕುಲಕರ್ಣಿ, ನೀಲಪ್ಪ ಕೋಲೆ, ಶಿವರಾಜ ನಾಯಿಕ, ಮುನ್ನಾ ಕಳಾವಂತ, ಸುರೇಶ ಬೇವಿನಕಟ್ಟಿ ಇತರರಿದ್ದರು.