ಬೆಂಗಳೂರು: ನಾಡಿನ ಹಿರಿಯ ಪತ್ರಕರ್ತ ವಸಂತ್ ನಾಡಿಗೇರ (60) ಸೋಮವಾರ ಹೃದಯಾಘಾತದಿಂದ ನಿಧನ ಹೊಂದಿದರು.
ಕೆಲಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಇತ್ತೀಚಿಗಷ್ಟೇ ಚೇತರಿಸಿಕೊಂಡಿದ್ದರು. ಆದರೆ, ಸೋಮವಾರ ಮುಂಜಾನೆ ಹಠಾತ್ ಹೃದಯಘಾತದಿಂದ ಅಸುನೀಗಿದರು. ಮೃತರು ಪತ್ನಿ, ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಚಾಮರಾಜಪೇಟೆಯ ಟಿ.ಆರ್. ಮಿಲ್ ಬಳಿಯಿರುವ ಚಿತಾಗಾರದಲ್ಲಿ ನಡೆಯಿತು.
ಮೂಲತಃ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ವಸಂತ್ ನಾಡಿಗೇರ್ ಧಾರವಾಡದ ಕರ್ನಾಟಕ ವಿವಿಯಲ್ಲಿ ಬಿ.ಎಸ್ಸಿ ಪದವಿ, ಬಳಿಕ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದರು. ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ವಿಜಯ ಕರ್ನಾಟಕ ಹಾಗೂ ವಿಶ್ವವಾಣಿ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಸಂಯುಕ್ತ ಕರ್ನಾಟಕದ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಸುದ್ದಿ, ಲೇಖನಗಳಿಗೆ ಆಕರ್ಷಕ ಶೀರ್ಷಿಕೆ ನೀಡುವಲ್ಲಿ ಪ್ರಸಿದ್ಧಿ ಪಡೆದಿದ್ದ ಇವರು, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ಕೃತಿಯೊಂದನ್ನು ಹೊರತಂದಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸಂದಿವೆ.
ಗಣ್ಯರಿಂದ ಕಂಬನಿ:
ವಸಂತ್ ನಾಡಿಗೇರ್ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.