ಬಾಲಿವುಡ್‌ ಹಿರಿಯ ನಟ, ಸಂಭಾಷಣೆಕಾರ ಕಾದರ್‌ ಖಾನ್‌ ಇನ್ನಿಲ್ಲ

ಟೊರೊಂಟೊ: ಬಾಲಿವುಡ್‌ ಹಿರಿಯ ನಟ, ಬರಹಗಾರ ಕಾದರ್‌ ಖಾನ್‌ ದೀರ್ಘಕಾಲದ ಅನಾರೋಗ್ಯದಿಂದಾಗಿ ತಮ್ಮ 81ನೇ ವಯಸ್ಸಿನಲ್ಲಿ ಸೋಮವಾರ ಕೊನೆಯುಸಿರೆಳೆದಿದ್ದಾರೆ.

ಕೆನಡಾದ ಆಸ್ಪತ್ರೆಗೆ ದಾಖಲಾಗಿದ್ದ ಕಾದರ್‌ ಅವರು ಡಿ. 31ರಂದು ಮೃತಪಟ್ಟಿದ್ದು, ಕೆನಡಾದಲ್ಲಿಯೇ ಅವರ ಅಂತ್ಯ ಸಂಸ್ಕಾರವನ್ನು ನಡೆಸಲಾಗುವುದು ಎಂದು ಪುತ್ರ ಸರ್ಫ್‌ರಾಜ್‌ ಸ್ಪಷ್ಟಪಡಿಸಿದ್ದಾರೆ.

ನಮ್ಮ ತಂದೆ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಸೋಮವಾರ ಮಧ್ಯಾಹ್ನದ ವೇಳೆಗೆ ಅವರು ಕೋಮಾಗೆ ಜಾರಿದ್ದರು. ಕಳೆದ 16 ರಿಂದ 17 ವಾರಗಳು ಆಸ್ಪತ್ರೆಯಲ್ಲೇ ಇದ್ದರು. ಕೆನಡಿಯನ್‌ ಸಮಯದ ಪ್ರಕಾರ ಡಿ. 31ರಂದು ಸಂಜೆ 6ಗಂಟೆಗೆ ನಿಧನರಾದರು. ನಮ್ಮ ಎಲ್ಲ ಕುಟುಂಬದವರು ಕೆನಡಾದಲ್ಲಿಯೇ ವಾಸಿಸುತ್ತಿರುವುದರಿಂದಾಗಿ ಕೊನೆ ವಿಧಿ ವಿಧಾನಗಳನ್ನು ಇಲ್ಲಿಯೇ ನಡೆಸಲಾಗುತ್ತದೆ ಎಂದು ಖಾನ್ ಅವರ ಮಗ ಸರ್ಫರಾಜ್ ಪಿಟಿಐಗೆ ತಿಳಿಸಿದ್ದಾರೆ.

1980- 90ರ ದಶಕದಲ್ಲಿ ನಟರಾಗಿ, ಬರಹಗಾರರಾಗಿ ಮಿಂಚಿದ್ದ ಖಾನ್‌ ಅವರು ಪ್ರೊಗ್ರೆಸಿವ್ ಸುಪ್ರನ್ಯೂಕ್ಲಿಯರ್ ಪಾಲ್ಸಿ ಎಂಬ ಮಿದುಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರು. ರೋಗ ಉಲ್ಬಣಗೊಂಡಿದ್ದರಿಂದಾಗಿ ವಾಕಿಂಗ್ ಮತ್ತು ಬುದ್ಧಿಮಾಂದ್ಯತೆ ತೊಂದರೆ ಅನುಭವಿಸುತ್ತಿದ್ದರು.

1973ರಲ್ಲಿ ಕಾಬೂಲ್‌ನಲ್ಲಿ ಜನಿಸಿದ್ದ ಅವರು 1973ರಲ್ಲಿ ರಾಜೇಶ್‌ ಖನ್ನಾ ಅವರ ‘ದಾಗ್‌’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 250 ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಅವರು ನಟರಾಗುವ ಮುನ್ನ ರಣ್‌ಧೀರ್‌ ಕಪೂರ್‌ ಮತ್ತು ಜಯಾ ಬಚ್ಚನ್‌ ಅವರ ‘ಜವಾನಿ ದಿವಾನಿ’ ಚಿತ್ರಕ್ಕೆ ಸಂಭಾಷಣೆಕಾರರಾಗಿದ್ದರು.

ಚಿತ್ರಕಥೆಗಾರನಾಗಿ ಖಾನ್ ಮನಮೋಹನ್ ದೇಸಾಯಿ ಮತ್ತು ಪ್ರಕಾಶ್ ಮೆಹ್ರಾ ಅವರೊಂದಿಗೆ ಗುರುತಿಸಿಕೊಂಡಿದ್ದರು.

ನಿರ್ದೇಶಕ ದೇಸಾಯಿ ಅವರ ‘ಧರಮ್‌ ವೀರ್‌’, ‘ಗಂಗಾ ಜಮುನಾ ಸರಸ್ವತಿ’, ‘ಕೂಲೈ’, ‘ದೇಶ್‌ ಪ್ರೇಮೀ’, ‘ಸುಹಾಗ್‌’, ‘ಪರ್ವಾರಿಶ್‌’ ಮತ್ತು ‘ಅಮರ್‌ ಅಕ್ಬರ್‌ ಆಂಥೋಣಿ’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಿರ್ದೇಶಕ ಮೆಹ್ರಾ ಅವರ ‘ಜ್ವಾಲಾಮುಖಿ’, ‘ಶರಾಬಿ’, ‘ಲಾವಾರಿಸ್‌’, ‘ಮುಕಂದರ್‌ ಕಾ ಸಿಕಂದರ್‌’ ಚಿತ್ರಗಳಲ್ಲಿ ನಟರಾಗಿ ಮತ್ತು ಸಂಭಾಷಣೆಕಾರರಾಗಿ ತೊಡಗಿಕೊಂಡಿದ್ದರು. (ಏಜೆನ್ಸೀಸ್)