ಕಲಬುರಗಿ, ಬಳ್ಳಾರಿಯಲ್ಲಿ ಸುಡುಸುಡು ರಣಬಿಸಿಲು

ಬೆಂಗಳೂರು/ಕಲಬುರಗಿ: ರಾಜ್ಯದಲ್ಲಿ ಬೇಸಿಗೆಯ ಬೇಗೆ ದಿನೇದಿನೆ ಹೆಚ್ಚಾಗುತ್ತಿದ್ದು ಕಲಬುರಗಿ ಹಾಗೂ ಬಳ್ಳಾರಿಯಲ್ಲಿ ಬಿಸಿಲು ರಣಗುಡುತ್ತಿದೆ. ಕಲಬುರಗಿಯಲ್ಲಿ ಬಿಸಿಲಿನ ತಾಪ 41 ಡಿಗ್ರಿ ಸೆಲ್ಸಿಯಸ್​ನಷ್ಟಿದ್ದು, ಏಪ್ರಿಲ್-ಮೇ ಕಳೆಯುವುದು ಹೇಗೆ ಎಂಬ ಆತಂಕ ಎದುರಾಗಿದೆ. ಜತೆಗೆ ಬಿಸಿಗಾಳಿ ಬೀಸುತ್ತಿರುವುದರಿಂದ ಜನತೆ ನಾನಾ ರೋಗಗಳಿಂದ ಬಳಲುವಂತಾಗಿದೆ. ಜಲಚರ ಮತ್ತಿತರ ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಮಕ್ಕಳು, ವೃದ್ಧರು ಬಿಸಿಲಿನ ತಾಪದಿಂದ ತತ್ತರಿಸಿದ್ದಾರೆ. ಜಿಲ್ಲೆಯ 250ಕ್ಕೂ ಹೆಚ್ಚು ಗ್ರಾಮಗಳು ಮತ್ತು ಕಲಬುರಗಿ ನಗರ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿವೆ. ಅನೇಕರು ಜ್ವರ, ತಲೆನೋವು, ಮೈ-ಕೈ ನೋವಿನಿಂದ ಬಳಲುತ್ತಿದ್ದರೆ, ಕೆಲವರು ವಾಂತಿಭೇದಿಯಿಂದ ನರಳುತ್ತಿದ್ದಾರೆ. ಹಲವರ ಮೂಗಿನಲ್ಲಿ ರಕ್ತವೂ ಸೋರುತ್ತಿದೆ.

ಬಿಸಿಲ ತಾಪಕ್ಕೆ ವೃದ್ಧ ಬಲಿ?: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಅಮರವಾದಿ ರಸ್ತೆ ಬದಿಯಲ್ಲಿ ಭೂತಪುರ ಗ್ರಾಮದ ಆಶಪ್ಪ ಬಿಚ್ಚಪ್ಪ (68) ಮೃತಪಟ್ಟಿದ್ದು, ಬಿಸಿಲ ತಾಪಕ್ಕೆ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಂಗಳವಾರ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ. ಮೇಲ್ಮೈ ಸುಳಿಗಾಳಿಯಿಂದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಕಳೆದ 2-3 ದಿನಗಳಿಂದ ಹೆಚ್ಚಳಗೊಂಡಿದ್ದ ತಾಪಮಾನ ಸೋಮವಾರ ಕೊಂಚಮಟ್ಟಿಗೆ ಕಡಿಮೆಯಾಗಿದೆ. ಸೋಮವಾರ ಬಳ್ಳಾರಿಯಲ್ಲಿ 40 ಡಿ.ಸೆ. ತಾಪಮಾನ ದಾಖಲಾಗಿದ್ದು, ರಾಯಚೂರಿನಲ್ಲಿ 39, ವಿಜಯಪುರದಲ್ಲಿ 37.8, ದಾವಣಗೆರೆ, ಬಾಗಲಕೋಟೆಯಲ್ಲಿ 37, ಗದಗದಲ್ಲಿ 36.5, ಮೈಸೂರಿನಲ್ಲಿ 34.5, ಬೆಂಗಳೂರಿನಲ್ಲಿ 34.1, ಮಂಗಳೂರಿನಲ್ಲಿ 34.7, ಕಾರವಾರದಲ್ಲಿ 32.8 ಡಿ.ಸೆ. ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಹಲವು ಭಾಗಗದಲ್ಲಿ ತಾಪಮಾನವು 41 ಡಿ.ಸೆ. ತಲುಪುವ ಅಂದಾಜಿದೆ. ಮಡಿಕೇರಿಯಲ್ಲಿ ಸೋಮವಾರ ಸಂಜೆ ಮಳೆ ಸುರಿದು ತಂಪೆರದಿದೆ.