ಶಾಂಭವಿ ನದಿಗೆ ವೆಂಟೆಡ್ ಡ್ಯಾಂ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್

ಕಾರ್ಕಳ ತಾಲೂಕಿನ ಬೋಳ, ಸಚ್ಚೇರಿಪೇಟೆ ಹಾಗೂ ಕಡಂದಲೆ ವ್ಯಾಪ್ತಿಯ ಸುಮಾರು ಸಾವಿರಾರು ಎಕರೆ ಕೃಷಿ ಭೂಮಿಗೆ ಆಧಾರವಾಗಬಲ್ಲ ಬೋಳ ಶಾಂಭವಿ ನದಿಗೆ ಈಗ 2.75 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣವಾಗಲಿದ್ದು, ಕಾಮಗಾರಿ ಚುರುಕುಗೊಂಡಿದೆ.

ಬೋಳ ಪಾಲಿಂಗೇರಿ ಸಮೀಪ ಶಾಂಭವಿ ನದಿಗೆ ಈ ಅಣೆಕಟ್ಟು ನಿರ್ಮಾಣಗೊಳ್ಳುವುದರಿಂದ ಮುಂದಿನ ಮಳೆಗಾಲ ಸಂದರ್ಭ ಅಣೆಕಟ್ಟಿನಲ್ಲಿ ನೀರು ಸಂಗ್ರಹಿಸಿ ಬೇಸಗೆಯಲ್ಲಿ ಕಡಂದಲೆ ಹಾಗೂ ಬೋಳದ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸಬಹುದಾಗಿದೆ. ಆ ಮೂಲಕ ಈ ಭಾಗದ ಕೃಷಿ ಭೂಮಿ ಸದಾ ಹಸಿರಾಗುವುದರಲ್ಲಿ ಸಂಶಯವಿಲ್ಲ. ಜತೆಗೆ ಈ ಭಾಗದ ಬಾವಿಗಳಲ್ಲೂ ನೀರಿನ ಒರತೆ ಹೆಚ್ಚಾಗಲಿದ್ದು, ಕುಡಿಯುವ ನೀರಿನ ಸಮಸ್ಯೆ ದೂರವಾಗಲಿದೆ. ನದಿ ಸಮೀಪದ ಕೃಷಿ ಕುಟುಂಬಗಳಿಗೆ ವರ್ಷ ಪೂರ್ತಿ ಇತರ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ನದಿ ನೀರು ಉಪಯೋಗವಾಗಲಿದೆ.

ಸಣ್ಣ ನೀರಾವರಿ ಇಲಾಖೆ ಅನುದಾನದಿಂದ ನಡೆಯುವ ಕಾಮಗಾರಿಯಲ್ಲಿ ಅಣೆಕಟ್ಟಿನ ಜತೆಗೆ ಕಿರು ಸೇತುವೆ ನಿರ್ಮಿಸಲಾಗುತ್ತಿದೆ. ಇದರಿಂದ ಈವರೆಗೆ ಬೋಳದ ಅಂಡಮಾನ್ ಎಂದು ಕರೆಯಲ್ಪಡುತ್ತಿದ್ದ ಅಂಬರಾಡಿಗೆ ಈ ಹಿಂದೆ ಬೋಳದಿಂದ ಸುಮಾರು 5-6 ಕಿ.ಮೀ ಸುತ್ತಿ ಬಳಸಿ ಸಾಗಬೇಕಾಗಿದ್ದು, ಈ ಸಮಸ್ಯೆ ದೂರವಾಗಲಿದೆ. ಪಾಲಿಂಗೇರಿಯಲ್ಲಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡರೆ ಅಂಬರಾಡಿ-ಬಾನಂಗಡಿ ರಸ್ತೆ ಮೂಲಕ ಕೇವಲ 500 ಮೀ.ನಷ್ಟು ಕ್ರಮಿಸಿ ಅಂಬರಾಡಿ ತಲುಪಬಹುದು. ಬೋಳ ಮುಗುಳಿ ಬ್ರಹ್ಮಲಿಂಗೇಶ್ವರ ದೇಗುಲಕ್ಕೂ ಇದು ಹತ್ತಿರದ ಮಾರ್ಗವಾಗಲಿದೆ. ಅಂಬರಾಡಿ ಹಾಗೂ ಪಾಲಿಂಗೇರಿಗೆ ಇದು ಸಂಪರ್ಕ ಕೊಂಡಿಯಾಗಲಿದೆ.
ಕಾಮಗಾರಿ ಗುತ್ತಿಗೆಯನ್ನು ಕುಂದಾಪುರ ಮೂಲದ ಜಿ.ಗೋಕುಲ ಹೆಗ್ಡೆ ವಹಿಸಿಕೊಂಡಿದ್ದು, ಅಣೆಕಟ್ಟಿಗೆ ಕಬ್ಬಿಣದ ಹಲಗೆ ಅಳವಡಿಸಲಾಗುವುದಲ್ಲದೆ ನಿರ್ವಹಣೆಯೂ ಸರಳ ಎಂದಿದ್ದಾರೆ. ಮಳೆಗಾಲಕ್ಕೆ ಮೊದಲು ಕಾಮಗಾರಿ ಮುಗಿಯುವ ಸಾಧ್ಯತೆ ಇದ್ದು, ಬಂಡೆ ಮೇಲೆಯೇ ಅಣೆಕಟ್ಟು ನಿರ್ಮಿಸಬೇಕಾಗಿರುವುದರಿಂದ ಕಾಮಗಾರಿ ತುಸು ವಿಳಂಬವಾಗಬಹುದು ಎಂದು ಕಾಮಗಾರಿ ಮೇಲ್ವಿಚಾರಕ ಗುರುರಾಜ್ ತಿಳಿಸಿದ್ದಾರೆ. ಕಾಮಗಾರಿ ಮುಗಿದ ಕೂಡಲೇ ನೀರು ನಿಲ್ಲಿಸಿ ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಿಸಿದ ಬಳಿಕ ಉದ್ಘಾಟನೆಗೊಳ್ಳಲಿದೆ.
ಒಟ್ಟಾರೆ ಬೋಳ ಶಾಂಭವಿ ನದಿಯ ಕಾರಣಿಕದ ಸಿರಿ ಓಡಾಡಿದ ಪ್ರದೇಶವಾದ ಬ್ರಹ್ಮರ ಗುಂಡಿ ಹಾಗೂ ಸಿರಿಗುಂಡಿ ಬಳಿಯಲ್ಲಿ ನಿರ್ಮಾಣಗೊಳ್ಳಲಿರುವ ಈ ಅಣೆಕಟ್ಟು ಸಹಿತ ಇನ್ನೂ ಮೂರು ಅಣೆಕಟ್ಟುಗಳು ಬೋಳ ಗ್ರಾಮದ ನೀರಿನ ಬವಣೆ ನಿವಾರಿಸಲಿದೆ.

ಅಣೆಕಟ್ಟು ನಿರ್ಮಾಣದಿಂದ ಗ್ರಾಮದ ಬಹುತೇಕ ಕೃಷಿಭೂಮಿಗೆ ವರದಾನವಾಗಲಿದೆ. ನದಿ ಸಮೀಪದ ಸಾವಿರಾರು ಎಕರೆ ಕೃಷಿ ಭೂಮಿ ಇದರಿಂದ ಹಸಿರಾಗಲಿದೆ.
|ಸತೀಶ್ ಪೂಜಾರಿ, ಬೋಳ ಗ್ರಾಪಂ ಅಧ್ಯಕ್ಷ

ಅಣೆಕಟ್ಟಿಗೆ 400 ಮೀ. ಚರಂಡಿಯನ್ನೂ ನಿರ್ಮಿಸಲಾಗುತ್ತಿದ್ದು, ಹೆಚ್ಚುವರಿ ನೀರಿನ ಹರಿವಿಗಾಗಿ ಈ ಚರಂಡಿ ಉಪಯೋಗವಾಗಲಿದೆ. ಬಂಡೆಕಲ್ಲು ಒಡೆದು ಅಣೆಕಟ್ಟು ನಿರ್ಮಿಸಲಾಗುತ್ತಿದೆ. ಮಳೆಗಾಲದ ಮೊದಲು ಕಾಮಗಾರಿ ಮುಗಿಯಲಿದೆ.
|ಅರುಣ್ ಭಂಡಾರಿ, ಗುತ್ತಿಗೆದಾರ

ಇಲ್ಲಿರುವ ಹಳೇ ಕಿಂಡಿ ಅಣೆಕಟ್ಟು ಒಡೆಯಲು ಟೆಂಡರ್ ಆಗಿಲ್ಲ. ಪಕ್ಕದ ಕೃಷಿ ಭೂಮಿಗಳಿಗೆ ತೊಂದರೆಯಾಗದ ರೀತಿ ತಡೆಗೋಡೆ ನಿರ್ಮಿಸಿ ಕಾಮಗಾರಿ ನಡೆಸಲಾಗುತ್ತಿದೆ. ಅಣೆಕಟ್ಟಿನ ಜತೆಗೆ ಸೇತುವೆಯೂ ನಿರ್ಮಾಣವಾಗಲಿದ್ದು, ಈ ಭಾಗದ ಜನರಿಗೆ ಉಪಯೋಗವಾಗಲಿದೆ.
|ಜಿ.ಗೋಕುಲ ಹೆಗ್ಡೆ, ಗುತ್ತಿಗೆದಾರ