VIDEO| ರಾತ್ರಿ ಮಲಗಿದ್ದ ವ್ಯಕ್ತಿಯ ಬಟ್ಟೆಯೊಳಗೆ ನುಸುಳಿದ ವಿಷಕಾರಿ ಹಸಿರು ಹಾವು: ರಕ್ಷಣೆ ಮಾಡಿದ ವಿಡಿಯೋ ವೈರಲ್​!

ನವದೆಹಲಿ: ವಿಷಕಾರಿ ಹಾವುಗಳು ತಮ್ಮ ಆಹಾರವನ್ನು ಅರಸಿ ಯಾವುದಾದರೂ ಮನೆಯೊಳಗೆ ಬರವುದು ಸಾಮಾನ್ಯವಾಗಿದೆ. ಹಾಗೇ ಕೆಲವೆಡೆ ಶೂ, ವಾಹನಗಳು ಹಾಗೂ ಶೌಚಗೃಹದಲ್ಲಿ ಹಾವುಗಳಿರುವುದನ್ನು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ, ವ್ಯಕ್ತಿಯೊಬ್ಬ ಧರಿಸಿರುವ ಬಟ್ಟೆಯೊಳಗೆ ಹಾವು ಇರುವುದನ್ನು ನೋಡಿದ್ದೀರಾ? ಇಲ್ಲ ಎಂದಾದರೆ ಇಲ್ಲಿ ನೋಡಿ ನಾವು ನಿಮಗೆ ತೋರಿಸುತ್ತೇವೆ…

ಮಹರಾಷ್ಟ್ರದ ಅಹಮದ್​ನಗರದ ಆಸ್ಪತ್ರೆಯೊಂದರಲ್ಲಿ ರಾತ್ರಿ ಮಲಗಿದ್ದ ವ್ಯಕ್ತಿಯ ಬಟ್ಟೆಯೊಳಗೆ ಸೇರಿಕೊಂಡಿದ್ದ ವಿಷಕಾರಿ ಹಸಿರು ಹಾವನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ಹಾವನ್ನು ಗುರುತಿಸಿ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿ, ವ್ಯಕ್ತಿಯೊಬ್ಬನ ಪ್ರಾಣವನ್ನು ಉಳಿಸಿದ್ದಾರೆ.

ಹಾವಿನಿಂದ ಪಾರಾದ ಅದೃಷ್ಟ ವ್ಯಕ್ತಿಯನ್ನು ಅಹಮದ್​ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ರೋಗಿಯೊಬ್ಬರ ಸಂಬಂಧಿಕನೆಂದು ಗುರುತಿಸಲಾಗಿದೆ. ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಆಹಾರ ಅರಸಿ ಬಂದ ಹಾವು ಆತನ ಬಟ್ಟೆಯ ಒಳಗೆ ನುಸುಳಿತ್ತು. ಇದನ್ನು ಗಮನಿಸಿ ಆಸ್ಪತ್ರೆಯ ಸಿಬ್ಬಂದಿ ಅಹಮದ್​ನಗರದ ವನ್ಯಜೀವಿ ಪಾರುಗಾಣಿಕಾ ಸೊಸೈಟಿಗೆ ಮಾಹಿತಿ ನೀಡಿದಾಗ, ಅಲ್ಲಿನ ಸಿಬ್ಬಂದಿ ಬಂದು ವ್ಯಕ್ತಿಯನ್ನು ಎಚ್ಚರಿಸದೇ ಕುರ್ತಾದಿಂದ ಯಶಸ್ವಿಯಾಗಿ ಹಾವನ್ನು ಹೊರತೆಗೆದಿದ್ದಾರೆ. ಬಳಿಕ ಹಾವನ್ನು ಸ್ಥಳೀಯ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಬಿಡಲಾಗಿದೆ.

ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಆಗಿದ್ದು, ಸಾಕಷ್ಟು ವೈರಲ್​ ಆಗಿದೆ. ಯೂಟ್ಯೂಬ್​ನಲ್ಲೂ ವಿಡಿಯೋ ಪೋಸ್ಟ್​ ಮಾಡಲಾಗಿದ್ದು, ಇದುವರೆಗೂ ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *