ವಿಶ್ವಕಪ್ ಗೆಲ್ಲಲಿದೆ ಭಾರತ ತಂಡ: ವೆಂಕಟೇಶ ಪ್ರಸಾದ್

ಕಲಬುರಗಿ: ಪ್ರಸ್ತುತ ಭಾರತ ಕ್ರಿಕೆಟ್ ತಂಡ ವಿಶ್ವದಲ್ಲೇ ಅತ್ಯಂತ ಬಲಿಷ್ಠವಾಗಿದ್ದು, ವಿಶ್ವಕಪ್ ಗೆಲ್ಲುವ ಎಲ್ಲ ಅವಕಾಶಗಳಿವೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾದ್ ಅಭಿಮತ ವ್ಯಕ್ತಪಡಿಸಿದರು.

ಕನ್ನಡ ಭವನದಲ್ಲಿ ಗುರುವಾರ ಕೆನರಾ ಬ್ಯಾಂಕ್ ಆಯೋಜಿಸಿದ್ದ ಸಾಲ ಮೇಳಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆ ಕೇವಲ ಟಿ-20 ಬಗ್ಗೆ ಆಸಕ್ತಿ ಹೊಂದುತ್ತಿದೆ. ಟಿ-20ಗಳಲ್ಲಿ 4 ಓವರ ಮಾತ್ರ ಬೌಲಿಂಗ್ಗೆ ಅವಕಾಶ ಸಿಗುತ್ತದೆ. ಒಂದು ದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚು ಅವಕಾಶ ಸಿಗುವುದರಿಂದ ಸಾಧನೆಗೆ ಪೂರಕವಾಗಬಲ್ಲದು ಎಂದರು.

ಹೈದರಾಬಾದ್ ಕರ್ನಾಟಕಕ್ಕೆ ಕ್ರಿಕೆಟ್ ಕ್ಷೇತ್ರದಲ್ಲಿ ಅವಕಾಶ ಸಿಗುತ್ತಿಲ್ಲ. ಈ ಭಾಗಕ್ಕೆ ಪ್ರತ್ಯೇಕ ರಣಜಿ ತಂಡವನ್ನೇಕೆ ಮಾಡಬಾರದು ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಸಾದ್, ಅಖಂಡ ಕರ್ನಾಟಕ ಒಂದೇ. ಇದರಲ್ಲಿ ಭಾಗವಾಗಿಸುವುದು ಬೇಡ. ಈ ಭಾಗಕ್ಕೆ ಹೆಚ್ಚಿನ ಸೌಲಭ್ಯ ಸಿಗಲಿ ಎಂದು ಕೇಳೋದರಲ್ಲಿ ತಪ್ಪಿಲ್ಲ. ಆದರೆ ಪ್ರತ್ಯೇಕ ಟೀಂ ಬೇಡಿಕೆ ಸರಿಯಲ್ಲ ಎಂದು ಹೇಳಿದರು.

ಆಸ್ಟ್ರೇಲಿಯಾ ಜತೆ ಟೆಸ್ಟ್ ಸರಣಿ ಗೆದ್ದ ಬಳಿಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವಕಪ್ ಗೆದ್ದಿದ್ದಕ್ಕಿಂತ ಹೆಚ್ಚು ಖುಷಿಯಾಗಿದೆ ಎಂದು ಹೇಳಿರುವುದು ಸರಿನಾ ಎಂಬ ಪ್ರಶ್ನೆಗೆ, ಅದು ಅವರ ವೈಯಕ್ತಿಕ ಹೇಳಿಕೆ. ತಂಡದ ಪರವಾದ ಹೇಳಿಕೆಯಲ್ಲ. 80, 90ರ ದಶಕದ ಆಸ್ಟ್ರೇಲಿಯಾ ತಂಡಕ್ಕೂ ಈಗಿನದ್ದಕ್ಕೂ ವ್ಯತ್ಯಾಸವಿದೆ. ಅಂದು ಅತಿರಥ ಮಹಾರಥರಿದ್ದರು. ಅಂದಿನ ತಂಡಕ್ಕೆ ಹೋಲಿಸಿದರೆ ಇಂದಿನ ಆಸ್ಟ್ರೇಲಿಯಾ ಪರಿಪೂರ್ಣ ತಂಡವಲ್ಲ. ಈಗಿನ ಗೆಲುವು ಸುಲಭವಾಗಿತ್ತು. ಒಳ್ಳೆಯ ಸಾಧನೆ ಮೆರೆದ ಭಾರತದ ಆಟಗಾರರಿಗೆ ಅಭಿನಂದನೆ ಸಲ್ಲಿಸುವೆ ಎಂದು ಹೇಳಿದರು.

ಭಾರತ ತಂಡದಲ್ಲಿ ಇಂದು ಉತ್ತಮ ಬೌಲರ್ಸ್ ಮತ್ತು ಬ್ಯಾಟ್ಸ್​ ಮನ್​ಗಳಿದ್ದಾರೆ. ಸ್ವಲ್ಪ ಶ್ರಮ ವಹಿಸಿದರೆ ಮುಂಬರುವ ವಿಶ್ವಕಪ್ ಭಾರತದ ಮಡಿಲು ಸೇರಲಿದೆ. ಭಾರತ ಗೆಲ್ಲಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ ಎಂದರು.

ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ, ರಣಜಿ ಆಟಗಾರ ಶ್ರೀನಿವಾಸ ಮೂರ್ತಿ, ಕೆನರಾ ಬ್ಯಾಂಕ್ ಉಪ ಮಹಾಪ್ರಬಂಧಕ ಗಂಗಾಧರ ಇದ್ದರು.

1983ರ ವಿಶ್ವಕಪ್ ಪ್ರೇರಣೆ

1983ರಲ್ಲಿ ಭಾರತ ಗೆದ್ದ ವಿಶ್ವಕಪ್ ನಮಗೆಲ್ಲ ಪ್ರೇರಣೆ ನೀಡಿದೆ ಎಂದು ಕ್ರಿಕೆಟಿಗ ಸುನೀಲ್ ಜೋಶಿ ಹೇಳಿದರು. ಅಂದು ಕಪಿಲ್ ದೇವ್ ನಾಯಕತ್ವದಲ್ಲಿ ತಂಡ ವಿಶ್ವಕಪ್ ಗೆದ್ದ ನಂತರ ಭಾರತದಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಬೆಳೆಯಿತು. ನಾನು ಸೇರಿ ವೆಂಕಟೇಶ ಪ್ರಸಾದ್, ರಾಹುಲ್ ದ್ರಾವಿಡ್ ಎಲ್ಲರಿಗೂ 83ರ ವಿಶ್ವಕಪ್ ಪ್ರೇರಣೆ ನೀಡಿತು. ನಾವು ಭಾರತ ತಂಡದಲ್ಲಿ ಆಟವಾಡಬೇಕು ಎಂಬ ಕನಸು ಮೂಡತೊಡಗಿತು. ನಿರಂತರ ಶ್ರಮಪಟ್ಟು ಕನಸು ನನಸು ಮಾಡಿಕೊಂಡೆವು. ಅದರಂತೆ ಪ್ರಸ್ತುತ ಆಸ್ಟ್ರೇಲಿಯಾ ಜತೆಗಿನ ಗೆಲುವು ಈಗಿನ ಯುವಕರಿಗೆ ಸ್ಫೂರ್ತಿ ಆಗಬಲ್ಲದು ಎಂದರು.

ಅವಕಾಶವಂಚಿತ ಜನತೆಗೆ ಸಾಲದ ಬಗ್ಗೆ ಅರಿವು ಮೂಡಿಸಲು ಎರಡು ದಿನ ಸಾಲ ಮೇಳ ಆಯೋಜಿಸಲಾಗಿದೆ. ಗೃಹ, ವಾಹನ ಖರೀದಿಗೆ ಸಾಲಸೌಲಭ್ಯ ಕಲ್ಪಿಸಲಾಗುತ್ತಿದೆ. ಗೃಹ ಸಾಲಕ್ಕೆ ಪ್ರಧಾನಮಂತ್ರಿ ಯೋಜನೆ ಸಬ್ಸಿಡಿ ಸಿಗಲಿದೆ. ದೇಶದಲ್ಲಿ 6300 ಶಾಖೆ ಹೊಂದಿರುವ ಕೆನರಾ ಬ್ಯಾಂಕ್ ಗ್ರಾಹಕರನ್ನು ಕುಟುಂಬ ಸದಸ್ಯರಂತೆ ನೋಡಿಕೊಳ್ಳುತ್ತಿದೆ. ನೋಟ್ ಬ್ಯಾನ್ ಸಂದರ್ಭದಲ್ಲೂ ಕೆನರಾ ಬ್ಯಾಂಕ್ ಮೊಬೈಲ್ ಟೀಮ್ ಮೂಲಕ ಹಳ್ಳಿ ಹಳ್ಳಿಗೆ ತೆರಳಿ ಹಣ ನೀಡುವ ಕಾರ್ಯ ಮಾಡಿದೆ.
| ಗಂಗಾಧರ ಕೆನರಾ ಬ್ಯಾಂಕಿನ ಉಪ ಮಹಾ ಪ್ರಬಂಧಕ

Leave a Reply

Your email address will not be published. Required fields are marked *