ನವದೆಹಲಿ: ಐಪಿಎಲ್ 14ನೇ ಆವೃತ್ತಿಯ 2ನೇ ಚರಣದಲ್ಲಿ ಕೋಲ್ಕತ ನೈಟ್‌ರೈಡರ್ಸ್ ಪರ ಆಲ್ರೌಂಡ್ ನಿರ್ವಹಣೆ ತೋರುವ ಮೂಲಕ ಗಮನಸೆಳೆದಿರುವ ವೆಂಕಟೇಶ್ ಅಯ್ಯರ್, ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಸಂಪಾದಿಸುವ ಸಾಧ್ಯತೆ ಕಾಣಿಸಿದೆ. ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಅದೃಷ್ಟ ಬದಲಾಯಿಸಿರುವ ವೆಂಕಟೇಶ್ ಅಯ್ಯರ್ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರವೂ ಅಂಥದ್ದೇ ಮೋಡಿ ಮಾಡಬಹುದೇ ಎಂಬ ಕುತೂಹಲವೂ ಹರಡಿದೆ.
ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್‌ನಲ್ಲಿ ಬೌಲಿಂಗ್ ಮಾಡುವುದು ಅನುಮಾನವೆನಿಸಿರುವ ಕಾರಣ ಕೇವಲ ಬ್ಯಾಟರ್ ಆಗಿ ಭಾರತ ತಂಡದ ಜತೆಗಿರಲಿದ್ದಾರೆ ಎನ್ನಲಾಗಿದೆ. ಅವರಿಗೆ ಮೀಸಲು ಆಟಗಾರರಾಗಿ ಕೆಕೆಆರ್ ತಂಡದ ಆರಂಭಿಕ ಹಾಗೂ ವೇಗದ ಬೌಲರ್ ವೆಂಕಟೇಶ್ ಅಯ್ಯರ್‌ಗೆ ಟೀಮ್ ಇಂಡಿಯಾದ ಬಯೋಬಬಲ್‌ನಲ್ಲಿ ಉಳಿದುಕೊಳ್ಳಲು ಬಿಸಿಸಿಐ ಸೂಚಿಸಲಿದೆ ಎನ್ನಲಾಗಿದೆ.
ಮಧ್ಯಪ್ರದೇಶದ 27 ವರ್ಷದ ವೆಂಕಟೇಶ್ ಅಯ್ಯರ್, ಐಪಿಎಲ್‌ನಲ್ಲಿ ಕೆಕೆಆರ್ ಪರ 8 ಪಂದ್ಯಗಳಲ್ಲಿ 2 ಅರ್ಧಶತಕ ಸಹಿತ 265 ರನ್ ಮತ್ತು 3 ವಿಕೆಟ್ ಗಳಿಸಿ ಮಿಂಚಿದ್ದಾರೆ. ವರ್ಷಾರಂಭದಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ಪಂಜಾಬ್ ವಿರುದ್ಧದ ಪಂದ್ಯದಲ್ಲಿ 146 ಎಸೆತಗಳಲ್ಲಿ 20 ಬೌಂಡರಿ, 7 ಸಿಕ್ಸರ್ ಸಹಿತ 198 ರನ್ ಸಿಡಿಸಿ ಗಮನಸೆಳೆದಿದ್ದರು. ಸಿಎ ವಿದ್ಯಾರ್ಥಿಯಾಗಿದ್ದ ಅವರು ಕ್ರಿಕೆಟ್‌ಗೆ ಹೆಚ್ಚಿನ ಸಮಯ ನೀಡುವ ಸಲುವಾಗಿ ಅದನ್ನು ತೊರೆದು ಎಂಬಿಎ ಸೇರಿದ್ದರು.
ಭಾರತ ತಂಡಕ್ಕೆ ಆವೇಶ್ ಖಾನ್ ನೆಟ್ ಬೌಲರ್
ಡೆಲ್ಲಿ ಕ್ಯಾಪಿಟಲ್ಸ್ ಪರ ಗಮನಾರ್ಹ ನಿರ್ವಹಣೆ ತೋರುತ್ತಿರುವ ಯುವ ವೇಗಿ ಆವೇಶ್ ಖಾನ್ ಟಿ20 ವಿಶ್ವಕಪ್‌ನಲ್ಲಿ ನೆಟ್ ಬೌಲರ್ ಆಗಿ ಭಾರತ ತಂಡದ ಜತೆಗಿರಲು ಬಿಸಿಸಿಐ ಸೂಚಿಸಿದೆ ಎನ್ನಲಾಗಿದೆ. 24 ವರ್ಷದ ಆವೇಶ್ ನೆಟ್ ಬೌಲರ್ ಆಗಿ ಸೇರ್ಪಡೆಗೊಳ್ಳುತ್ತಿರುವ 2ನೇ ವೇಗಿಯಾಗಿದ್ದಾರೆ. ಜಮ್ಮು-ಕಾಶ್ಮೀರದ ಉಮ್ರಾನ್ ಮಲಿಕ್‌ಗೆ ನೆಟ್ ಬೌಲರ್ ಆಗಿ ತಂಡದ ಜತೆಗಿರಲು ಈಗಾಗಲೆ ಬಿಸಿಸಿಐ ಸೂಚಿಸಿದೆ ಎನ್ನಲಾಗಿದೆ. ಮಲಿಕ್ ಐಪಿಎಲ್‌ನಲ್ಲಿ ಅತಿವೇಗದ ಎಸೆತ ಎಸೆದು ಗಮನಸೆಳೆದಿದ್ದರು. ಆವೇಶ್ ಐಪಿಎಲ್‌ನಲ್ಲಿ ಡೆಲ್ಲಿ ಪರ 23 ವಿಕೆಟ್ ಕಬಳಿಸಿದ್ದು, ಗಂಟೆಗೆ 142-145 ಕಿಮೀ ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯ ಹೊಂದಿದ್ದಾರೆ.
ಆರ್‌ಸಿಬಿ ಸೋಲಿನ ಬಳಿಕ ಡೇನಿಯಲ್ ಕ್ರಿಶ್ಚಿಯನ್ ಮತ್ತು ಗರ್ಭಿಣಿ ಸಂಗಾತಿಗೆ ನಿಂದನೆ