9 ವರ್ಷ ಹೋರಾಡಿ ಯಾವುದೇ ಜಾತಿ, ಧರ್ಮಕ್ಕಾಗಲಿ ಸೇರಿದವಳಲ್ಲ ಎಂಬ ಪ್ರಮಾಣ ಪತ್ರ ಪಡೆದವಳಿಗೆ ನಟ ಕಮಲ್​​ ಸಲಾಂ

ವೆಲ್ಲೂರ್: ತಮಿಳುನಾಡಿನ ವಕೀಲೆಯೊಬ್ಬರು ನಾನು ಯಾವುದೇ ಜಾತಿಗೆ ಸೇರಿಲ್ಲ ಹಾಗೂ ಯಾವುದೇ ಧರ್ಮಕ್ಕೆ ಸೇರಿಲ್ಲ ಎಂಬುದಾಗಿ ಕಂದಾಯ ಇಲಾಖೆಯಿಂದ ಪ್ರಮಾಣ ಪತ್ರ ಪಡೆದುಕೊಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಶೇಷವೆಂದರೆ ಇದು ಭಾರತದಲ್ಲೇ ಮೊದಲ ಪ್ರಕರಣವಾಗಿದ್ದು, ನಟ ಮತ್ತು ರಾಜಕಾರಣಿಯಾಗಿರುವ ಕಮಲ್​ ಹಾಸನ್​ ಕೂಡ ವಕೀಲೆಯ ವಿನೂತನ ಕಾರ್ಯಕ್ಕೆ ಸಲಾಂ ಹೊಡೆದಿದ್ದಾರೆ. ಟ್ವೀಟ್​ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ವೆಲ್ಲೂರ್ ಜಿಲ್ಲೆಯ​ ನಿವಾಸಿಯಾಗಿರುವ ಸ್ನೆಹಾ ಪಾರ್ಥಿಬರಾಜ ಅವರು ತಿರುಪಟ್ಟೂರು ಕೋರ್ಟ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ನೇಹಾ, “ನಾನು ಯಾವುದೇ ಜಾತಿಗಾಗಲಿ ಹಾಗೂ ಧರ್ಮಕ್ಕಾಗಲಿ ಸೇರಿದವಳಲ್ಲ,” ಎಂದು ಸರ್ಕಾರದಿಂದ ಪ್ರಮಾಣ ಪತ್ರ ಪಡೆದ ಭಾರತದ ಮೊದಲ ಮಹಿಳೆಯಾಗಿದ್ದಾರೆ. ಸುಮಾರು 9 ವರ್ಷಗಳ ಹೋರಾಟದಲ್ಲಿ ಹಲವು ಅಡೆತಡೆಗಳನ್ನು ಎದುರಿಸಿದ ನಂತರ ಕೊನೆಗೂ ತಿರುಪಟ್ಟೂರು ತಹಸೀಲ್ದಾರ್​ ಅವರಿಂದ ಪ್ರಮಾಣ ಪತ್ರವನ್ನು ಪಡೆಯಲು ಯಶಸ್ವಿಯಾಗಿದ್ದಾರೆ.

ಸ್ನೇಹಾ ಮತ್ತು ಪತಿ ಪಾರ್ಥಿಬರಾಜ್ ಅವರು ಮದುವೆ ಸಂದರ್ಭದಲ್ಲಿ ಜಾತಿಯನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ.​ ಸ್ನೇಹಾ ಅವರು ತಂದೆ-ತಾಯಿ ಕೂಡ ಜಾತಿ ಮತ್ತು ಧಾರ್ಮಿಕ ವಿಚಾರಗಳ ಕುರಿತು ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ.

ಸ್ನೇಹಾ ಅವರ ಈ ಕ್ರಾಂತಿಕಾರಿ ಸಾಧನೆಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ವಿಶೇಷ ಅಂದರೆ ಸ್ನೇಹಾ ಅವರು ತಮ್ಮ ಶಿಕ್ಷಣ ಜೀವನದ ಉದ್ದಕ್ಕೂ ಜಾತಿ ಹಾಗೂ ಧರ್ಮವನ್ನು ಎಲ್ಲಿಯೂ ಉಲ್ಲೇಖಿಸಿಲ್ಲ.

ಸ್ನೇಹಾ ಸಾಧನೆ ಕುರಿತು ತಮಿಳುನಾಡಿನ ಮಕ್ಕಳ ನಿಧಿ ಮೈಯಮ್​ ಪಕ್ಷದ ಸಂಸ್ಥಾಪಕ ಕಮಲ್​ ಹಾಸನ್​ ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದು, “ಮನಸ್ಸಿನ ಬದಲಾವಣೆಯು ಧರ್ಮಗಳ ಬದಲಾವಣೆಗೆ ಉತ್ತಮವಾಗಿದೆ. ಕ್ರಾಂತಿಕಾರಿ ಯುವತಿ ಹೊಸ ವಿಶ್ವವನ್ನು ರೂಪಿಸಿದ್ದಾರೆ. ಜಾತಿ ಇಲ್ಲದೆ ಯಾವುದೇ ಸಮಾಜವಿಲ್ಲ ಎಂದು ಹೇಳಿಕೊಳ್ಳುವರಿಗೆ ನಾವು ಮೀಸಲಾತಿ ನೀಡೋಣ. ಜನರ ನ್ಯಾಯವು ಎಲ್ಲದರಲ್ಲೂ ಕೇಂದ್ರವಾಗಿರುತ್ತದೆ. ನಾಳೆ ನಮ್ಮದು, ಖಂಡಿತವಾಗಿಯೂ ನಮ್ಮದೇ,” ಎಂದು ಕಮಲ್​ ತಿಳಿಸಿದ್ದಾರೆ.(ಏಜೆನ್ಸೀಸ್​)