ವೆಲ್ಲೋರ್​ ಲೋಕಸಭಾ ಕ್ಷೇತ್ರದ ಚುನಾವಣೆ ರದ್ದುಗೊಳಿಸಿಲ್ಲ: ಕೇಂದ್ರ ಚುನಾವಣಾ ಆಯೋಗದ ಸ್ಪಷ್ಟನೆ

ವೆಲ್ಲೋರ್​: ವೆಲ್ಲೋರ್​ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಮತದಾರರನ್ನು ಓಲೈಸಲು ಅಪಾರ ಪ್ರಮಾಣದಲ್ಲಿ ಹಣ ಹಂಚಲಾಗುತ್ತಿದೆ ಎಂಬ ಆರೋಪದಲ್ಲಿ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಸ್ಪಷ್ಟನೆ ನೀಡಿದೆ.

ವೆಲ್ಲೋರ್​ನಲ್ಲಿ ಏ.18ರಂದು ನಿಗದಿಯಂತೆ ಚುನಾವಣೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಚುನಾವಣೆ ಮುಂದೂಡಿಕೆ ಕುರಿತು ಮತದಾರರು ಗೊಂದಲಕ್ಕೆ ಒಳಗಾಗದೆ, ಅಂದು ಮತದಾನ ಮಾಡಬೇಕು ಎಂದು ಆಯೋಗದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಡಿಎಂಕೆಯ ಖದೀರ್​ ಆನಂದ್​ ಮತ್ತು ಎಐಎಡಿಎಂಕೆಯ ಎ.ಸಿ. ಷಣ್ಮುಗಂ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರವನ್ನು ತಮ್ಮ ಮೈತ್ರಿಕೂಟಕ್ಕೆ ಗೆದ್ದುಕೊಡಲೇ ಬೇಕು ಎಂಬ ಜಿದ್ದಿಗೆ ಬಿದ್ದಿರುವ ಉಭಯ ಪಕ್ಷಗಳು ಮತದಾರರನ್ನು ಓಲೈಸಲು ಭಾರಿ ಹಣ ಬಳಕೆ ಮಾಡುತ್ತಿವೆ ಎಂದು ಹೇಳಲಾಗುತ್ತಿದೆ.

ಡಿಎಂಕೆಯ ಖಚಾಂಚಿ ದೊರೈ ಮುರುಗನ್​ ಮನೆ ಮತ್ತು ಕಾಲೇಜುಗಳ ಮೇಲೆ ದಾಳಿ ಮಾಡಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿಕೆಯಾಗಿದೆ ಎಂಬ ವದಂತಿ ಕ್ಷೇತ್ರಾದ್ಯಂತ ಹಬ್ಬಿತ್ತು. (ಏಜೆನ್ಸೀಸ್​)