ವಾಹನಗಳಿಗೆ ಕಲ್ಲೆಸೆತ, ಗಲಭೆ ಪ್ರಕರಣ, ಓರ್ವ ಸೆರೆ

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಹಿಂದು ಸಮಾಜೋತ್ಸವ ಮುಗಿಸಿ ವಾಪಸಾಗುತ್ತಿದ್ದ ವಾಹನಗಳಿಗೆ ಕಲ್ಲು ತೂರಾಟ ನಡೆಸಿ ಗಲಭೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿ, 25 ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ.

ಉಳಿಯತ್ತಡ್ಕ ಇಜ್ಜತ್ ನಗರ ನಿವಾಸಿ ನೌಫಾಲ್ ಬಂಧಿತ ಆರೋಪಿ, ಸಿದ್ದಿಕ್, ಮಾಜ್, ಇಜಾಸ್, ಶಕೀಲ್, ಶಾನಿ ಸಹಿತ 25 ಮಂದಿ ವಿರುದ್ಧ ಕೇಸು ದಾಖಲಾಗಿದೆ. ಇಜ್ಜತ್‌ನಗರ, ಎಸ್.ಪಿ ನಗರ ಹಾಗೂ ಉಳಿಯತ್ತಡ್ಕ ಜಂಕ್ಷನ್‌ಗಳಲ್ಲಿ ಮಾರಕಾಯುಧದೊಂದಿಗೆ ಗುಂಪುಗೂಡಿ ಸಾಮಗ್ರಿಗಳಿಗೆ ಹಾನಿಯೆಸಗಿರುವ ಬಗ್ಗೆ ವಿದ್ಯಾನಗರ ಠಾಣೆ ಎಸ್‌ಐ ಅನೂಪ್‌ಕುಮಾರ್ ಕೇಸು ದಾಖಲಿದ್ದರು.

ಕಾಸರಗೋಡು-ಸೀತಾಂಗೋಳಿ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್‌ಗೆ ಕಲ್ಲು ತೂರಾಟ ನಡೆಸಿದ ಪರಿಣಾಮ ಬಸ್ಸಿನ ಗಾಜು ಪುಡಿಯಾಗಿದೆ. ಕಾಸರಗೋಡು ಪ್ರೆಸ್‌ಕ್ಲಬ್ ಜಂಕ್ಷನ್‌ನಲ್ಲಿ ಕಲ್ಲು ತೂರಾಟದಿಂದ ಗಾಯಗೊಂಡ ಕಾಞಂಗಾಡಿನ ರಂಜಿತ್ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವ್ಯಾಪಾರಿಗೆ ಹಲ್ಲೆ ಖಂಡಿಸಿ ಹರತಾಳ: ವಾಹನಗಳಿಗೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ ನೆಪದಲ್ಲಿ ಪೊಲೀಸರು ವ್ಯಾಪಾರಿಗಳಿಗೆ ಕಿರುಕುಳ ನೀಡಿರುವುದಾಗಿ ಆರೋಪಿಸಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ವತಿಯಿಂದ ಉಳಿಯತ್ತಡ್ಕದಲ್ಲಿ ಸೋಮವಾರ ಹರತಾಳ ನಡೆಯಿತು.

ವಾಹನ ಸಾಗುವ ಹಾದಿಯಲ್ಲಿ ಪೊಲೀಸ್ ಭದ್ರತೆ ಒದಗಿಸದೆ, ಅಹಿತಕರ ಘಟನೆ ನಡೆದ ತಾಸಿನ ಬಳಿಕ ಆಗಮಿಸಿದ ಪೊಲೀಸರು, ವ್ಯಾಪಾರಿಗಳ ಮೇಲೆ ದರ್ಪ ಮೆರೆದಿದ್ದಾರೆ. ಹೋಟೆಲ್‌ಗೆ ನುಗ್ಗಿದ ಪೊಲೀಸರು ಮಾಲೀಕ ಎಂ.ಲತೀಫ್ ಎಂಬುವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಸಮಿತಿ ಪದಾಧಿಕಾರಿಗಳು ದೂರಿದ್ದಾರೆ. ಘಟನೆ ಖಂಡಿಸಿ ಉಳಿಯತ್ತಡ್ಕ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಅಹಮ್ಮದ್ ಶೆರೀಫ್, ಪದಾಧಿಕಾರಿಗಳಾದ ಎಚ್.ಎ ಅಬೂಬಕರ್, ಸಂಜೀವ ರೈ, ಕೆ.ಜೆ ಶಾಜಿ, ಅಶೋಕ್ ನಂಬ್ಯಾರ್, ಯು.ಎಸ್ ಸುರೇಶ್, ನಾರಾಯಣ, ಜಮೀಲಾಹಮ್ಮದ್, ಅಬ್ದುಲ್‌ರಹಮಾನ್ ಉಡುಪಿ ಭಾಗವಹಿಸಿದ್ದರು.