ಬೆಂಗಳೂರು – ಮೈಸೂರುಹೆದ್ದಾರಿ ಸಂಚಾರ ಅಯೋಮಯ

ಮಂಡ್ಯ: ಪುತ್ರನ ನಾಮಪತ್ರ ಸಲ್ಲಿಕೆ ವೇಳೆ ಶಕ್ತಿ ಪ್ರದರ್ಶನ ಮಾಡಲು ಜಿಲ್ಲೆ ಮಾತ್ರವಲ್ಲದೆ, ಹೊರ ಜಿಲ್ಲೆಗಳಿಂದ ಜನರನ್ನು ಕರೆಸಿದ್ದ ಹಿನ್ನೆಲೆಯಲ್ಲಿ ಬೆಂಗಳೂರು – ಮೈಸೂರು ಹೆದ್ದಾರಿ ಸಂಚಾರ ಅಯೋಮಯವಾಯಿತು.
ಬೆಳಗ್ಗೆ 10 ಗಂಟೆಯಿಂದಲೇ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವಾಹನಗಳನ್ನು ಬಾಬುರಾಯನ ಕೊಪ್ಪಲು ಸಮೀಪದ ಲೋಕಪಾವನಿ ವೃತ್ತದಲ್ಲಿ ತಡೆದು ಕರೀಘಟ್ಟದ ಮೂಲಕ ಕಳಿಸಲಾಯಿತು.

ಅಂತೆಯೇ, ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ವಾಹನಗಳನ್ನು ಮದ್ದೂರಿನ ಪ್ರವಾಸಿ ಮಂದಿರದ ಬಳಿ ತಡೆದು ಕೆ.ಎಂ.ದೊಡ್ಡಿಯತ್ತ ಕಳಿಸಲಾಯಿತು. ಮಂಡ್ಯಕ್ಕೆ ಹೋಗಬೇಕಿದೆ ಎಂದರೂ ಕೂಡ ವಾಹನಗಳನ್ನು ಬಿಡಲಿಲ್ಲ. ಕೆಲವರು ಅಕ್ಕಪಕ್ಕದ ಹಳ್ಳಿಯವರು ಎಂದು ಹೇಳಿ ಬಿಡಿಸಿಕೊಂಡು ಬರಲು ಪರದಾಡಿದರು.
ಇನ್ನು ಬೆಂಗಳೂರು-ಮೈಸೂರಿನಿಂದ ಮಂಡ್ಯಕ್ಕೆ ಬರುತ್ತಿದ್ದವರ ಪಾಡು ಹರೋಹರ. ಜತೆಗೆ ಕಾರು ಮೊದಲಾದ ಸ್ವಂತ ವಾಹನಗಳಲ್ಲಿ ಬರುತ್ತಿದ್ದವರನ್ನು ತಡೆದು ಪರ್ಯಾಯ ಮಾರ್ಗದಲ್ಲಿ ತೆರಳಲು ಸೂಚಿಸಿದ್ದರಿಂದ ಹಲವರು ದಿಕ್ಕು ತಪ್ಪಿ ಪರದಾಡುವಂತಾಯಿತು.

ಮಂಡ್ಯದಲ್ಲಿನ ಕಾರ್ಯಕ್ರಮಕ್ಕೆ ಬರುತ್ತಿದ್ದ ಬಸ್ ಸೇರಿ ಇತರೆ ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶವಿತ್ತು. ಮಂಡ್ಯ, ಚನ್ನಪಟ್ಟಣ, ರಾಮನಗರ, ಬೆಂಗಳೂರು, ಹಾಸನ ಸೇರಿ ಹಲವೆಡೆಯಿಂದ ವಿವಿಧ ವಾಹನಗಳ ಮೂಲಕ ಸಾವಿರಾರು ಜನತೆ ಆಗಮಿಸಿದ್ದರಿಂದ ಮಂಡ್ಯ ನಗರ ತುಂಬಿ ತುಳುಕಿತು. ನಗರದಲ್ಲಿ ಕೂಡ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಯಿತು.

ನಗರದ ಹೆದ್ದಾರಿಯಲ್ಲಿ ತುರ್ತು ಚಿಕಿತ್ಸಾ ವಾಹನ ತೆರಳಲು ಅವಕಾಶ ನೀಡಲಿಲ್ಲ. ಹೀಗಾಗಿ ನಗರದ ವಿವೇಕಾನಂದ ರಸ್ತೆಯ ಮೂಲಕ ತೆರಳಿತು. ಅಲ್ಲಿಯೂ ಅದು ಸುಗಮವಾಗಿ ಸಾಗಲು ಅವಕಾಶ ಸಿಗಲಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ತುಂಬಿ ತುಳುಕಿದ ಬಾರ್‌ಗಳು: ಜೆಡಿಎಸ್ ಅಭ್ಯರ್ಥಿ ನಿಖಿಲ್ ನಾಮಪತ್ರ ಸಲ್ಲಿಸುವ ಸಂದರ್ಭಕ್ಕೆ ಸಾಕ್ಷಿಯಾಗಲು ಬಂದ ಜನತೆ ಕುತ್ತಿಗೆಯಲ್ಲಿ ಜೆಡಿಎಸ್ ಟವೆಲ್, ತಲೆಗೆ ಟೋಪಿ, ಟೀ ಶಟ್‌ಗಳನ್ನು ಹಾಕಿಕೊಂಡೇ ಬಾರ್‌ಗಳಿಗೆ ತೆರಳಿದರು.
ಹಾಗಾಗಿ ನಗರದ ಹಲವು ಬಾರ್ ಅಂಡ್ ರೆಸ್ಟೋರೆಂಟ್‌ಗಳು ತುಂಬಿ ತುಳುಕಿದವು. ಬಾರ್‌ಗಳ ಮುಂದೆ ರಾರಾಜಿಸುತ್ತಿದ್ದ ಜೆಡಿಎಸ್ ಪ್ರಚಾರ ಸಾಮಗ್ರಿಗಳನ್ನು ಹೊಂದಿದ್ದ ಜನರ ಫೋಟೋಗಳು ಸಾಮಾಜಿಕ ಜಾಲತಾಣಗಲ್ಲೂ ವೈರಲ್ ಆದವು.