ವ್ಯವಸ್ಥೆ ಸುಧಾರಣೆಯಿಂದ ಮಾತ್ರ ಅಪಘಾತ ಇಳಿಕೆ

ಚಿಕ್ಕಮಗಳೂರು: ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಕೈಗೊಂಡಾಗ ಮಾತ್ರ ಸಂಭಾವ್ಯ ಅಪಘಾತಗಳನ್ನು ತಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರಿಗೆ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಪ್ರಮಾಣದಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ಹಾಗಾದಾಗ ಮಾತ್ರ ವಾಹನಗಳ ಸುಗಮ ಸಂಚಾರ ಸಾಧ್ಯ ಎಂದರು.

ನಗರ ಪ್ರದೇಶದಲ್ಲಿ ಏಕಕಾಲದಲ್ಲಿ ಭಾರಿ ಸರಕು ಸಾಗಣೆ ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳು ಸಂಚರಿಸುತ್ತಿರುವುದರಿಂದ ಅಪಘಾತವಾಗಿ ಮರಣ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಸರಕು ಸಾಗಣೆಗೆ ಪ್ರತ್ಯೇಕ ಸಮಯ ನಿಗದಿ ಮಾಡಿದಾಗ ಮಾತ್ರ ಸಾರ್ವಜನಿಕರು ಸುರಕ್ಷಿತವಾಗಿ ಓಡಾಡಲು ಸಾಧ್ಯ ಎಂದರು.

ಭಾರಿ ವಾಹನಗಳಲ್ಲಿ ಸರಕು ಸಾಗಣೆಗೆ ಅವಕಾಶ ಕಲ್ಪಿಸಲು ಸಮಯ ನಿಗದಿಗೊಳಿಸಲು ಲಾರಿ ಮಾಲೀಕರ ಸಂಘದವರು ವಾರದೊಳಗೆ ತಮ್ಮ ಅಭಿಪ್ರಾಯ ತಿಳಿಸಬೇಕೆಂದು ತಿಳಿಸಿದರು.

ಸೈಲೆನ್ಸರ್ ಬದಲಿಸಿದವರ ವಿರುದ್ಧ ಕ್ರಮ ಜರುಗಿಸಿ: ಜಿಲ್ಲೆಯಲ್ಲಿ ಅಪಘಾತ ವಲಯಗಳೆಂದು ಸುಮಾರು 39 ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳಿಗೆ ಅಗತ್ಯ ಪರಿಣಾಮಕಾರಿ ರಸ್ತೆ ಸುರಕ್ಷತಾ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದು, ಇವು ಶೀಘ್ರದಲ್ಲಿ ಅನುಷ್ಠಾನಗೊಳಿಸಬೇಕು. ದ್ವಿಚಕ್ರ ವಾಹನಗಳಿಗೆ ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್ ಅಳವಡಿಸಿಕೊಂಡಿರುವವರ ವಿರುದ್ಧ ಮತ್ತು ಸೈಲೆನ್ಸರ್ ಪರಿವರ್ತಿಸುವ ಗ್ಯಾರೇಜ್​ಗಳ ಮೇಲೆ ಕ್ರಮ ಕೈಗೊಳ್ಳಲು ಕಳೆದ ರಸ್ತೆ ಸುರಕ್ಷತಾ ಸಭೆಯಲ್ಲಿ ತೀರ್ವನಿಸಲಾಗಿತ್ತು. ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಂಡ ವಿವರ ನೀಡಬೇಕು ಎಂದು ಅಧಿಕಾರಿಗಳಿಗೆ ಡಿಸಿ ಡಾ. ಬಗಾದಿ ಗೌತಮ್ ತಿಳಿಸಿದರು.

ಜನ ಜಾಗೃತಿ ಕಾರ್ಯಕ್ರಮ ನಡೆಸಿ: ರಸ್ತೆ ಅಪಘಾತ ನಡೆದ ತಕ್ಷಣ ಪ್ರಥಮ ಚಿಕಿತ್ಸೆ ನೀಡಲು ಸಾರ್ವಜನಿಕರಿಗೆ ಮಾಹಿತಿ ನೀಡಿ, ಜೀವ ಉಳಿಸುವ ಅರಿವು ಮೂಡಿಸಲು ತರಬೇತಿ ನೀಡಬೇಕು. ಜಿಲ್ಲೆಯ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ 24*7ರಲ್ಲಿ ಕಾರ್ಯ ನಿರ್ವಹಿಸುವ ವ್ಯವಸ್ಥೆ ಮಾಡಬೇಕು. ಅಪಘಾತವಾದ ಸಂದರ್ಭದಲ್ಲಿ ತುರ್ತು ಪ್ರಥಮ ಚಿಕಿತ್ಸೆ ನೀಡಲು ಬೈಕ್ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಡಿಸಿ ಸೂಚಿಸಿದರು. ಸರಕು ಸಾಗಣೆ ವಾಹನಗಳಲ್ಲಿ ಅನಧಿಕೃತವಾಗಿ ಕೂಲಿ ಕಾರ್ವಿುಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯದಂತೆ ಕ್ರಮ ಕೈಗೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.

ಅಪಘಾತದ ಕಾರಣ ವರದಿ ಸಲ್ಲಿಸಿ: ಅಪಘಾತವಾದ ಸಂದರ್ಭದಲ್ಲಿನ ಯಾವ ಕಾರಣಕ್ಕೆ ಅಪಘಾತವಾಯಿತು ಎಂಬುವುದನ್ನು ಅರಿಯಲು ಪೊಲೀಸ್ ಇಲಾಖೆ ಹಾಗೂ ಪಿಡಬ್ಲ್ಯುಡಿ ಅಥವಾ ಹೈವೆ ಅಥಾರಿಟಿ ಅಧಿಕಾರಿಗಳು ಸ್ಥಳ ಪರೀಕ್ಷಿಸಿ ವರದಿ ಸಿದ್ಧಪಡಿಸಬೇಕೆಂದು ಇನ್ಸ್​ಪೆಕ್ಟರ್​ಗಳು ಹಾಗೂ ಅಧಿಕಾರಿಗಳಿಗೆ ಎಸ್ಪಿ ಹರೀಶ್ ಪಾಂಡೆ ಸೂಚಿಸಿದರು. ನಗರದ ಐಜಿ ರಸ್ತೆಯ ಮಧ್ಯಮಾರ್ಗದಲ್ಲಿ ರಸ್ತೆ ವಿಭಜಕ ಅಳವಡಿಸುವುದರಿಂದ ವಾಹನಗಳು ಸುಗಮವಾಗಿ ಸಂಚರಿಸಲು ಸಾಧ್ಯ. ಇದರಿಂದ ವಾಹನಗಳು ಎಲ್ಲೆಂದರಲ್ಲಿ ಹಾಗೂ ಅಡ್ಡ ರಸ್ತೆಗಳಿಂದ ಅಡ್ಡಾದಿಡ್ಡಿಯಾಗಿ ಒಡಾಡುವುದನ್ನು ತಡೆಯಲು ಸಾಧ್ಯ ಎಂದರು.

Leave a Reply

Your email address will not be published. Required fields are marked *