ಬಾಡಿಗೆ ಹಣ ಪಾವತಿಸದ ಚುನಾವಣಾ ಆಯೋಗ!

ರಾಣೆಬೆನ್ನೂರ: ವಿಧಾನ ಸಭಾ ಚುನಾವಣೆ ಮುಗಿದು ಒಂದೂವರೆ ತಿಂಗಳಾಗಿದ್ದರೂ ಚುನಾವಣಾ ಕೆಲಸ ಕಾರ್ಯಗಳಿಗೆ ನೇಮಕ ಮಾಡಿಕೊಂಡಿದ್ದ ಖಾಸಗಿ ವಾಹನಗಳಿಗೆ ಇನ್ನೂತನಕ ಬಾಡಿಗೆ ಹಣ ಪಾವತಿಸಿಲ್ಲ. ಕೂಡಲೇ ಚುನಾವಣಾ ಆಯೋಗ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಟ್ಯಾಕ್ಸಿ ವಾಹನ ಚಾಲಕರ ಹಾಗೂ ಮಾಲೀಕರು ಆಗ್ರಹಿಸಿದ್ದಾರೆ.

2018ರ ರಾಜ್ಯ ವಿಧಾನಸಭಾ ಚುನಾವಣೆ ಮುಗಿದು, ಸಂಪುಟ ರಚನೆಯಾಗಿದೆ. ಆದರೆ, ಚುನಾವಣೆಗಾಗಿ ನೇಮಿಸಿದ್ದ ಸೆಕ್ಟರ್ ಅಧಿಕಾರಿಗಳು, ಪ್ಲೈಯಿಂಗ್ ಸ್ಕಾ್ವಡ್ ತಂಡ, ವೀಡಿಯೋ ವೀವಿಂಗ್ ತಂಡದವರಿಗಾಗಿ ಖಾಸಗಿಯವರಿಂದ ವಾಹನ ಪಡೆಲಾಗಿತ್ತು.

ಚುನಾವಣೆ ಸಂದರ್ಭದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ವಾಹನಗಳನ್ನು ಚುನಾವಣೆ ಕರ್ತವ್ಯಕ್ಕೆಂದು ವಶಕ್ಕೆ ಪಡೆಯಲಾಗುತ್ತದೆ. ಉಳಿದಂತೆ ವಾಹನಗಳ ಕೊರತೆಯನ್ನು ನೀಗಿಸಲು ಆಯೋಗ ಖಾಸಗಿ ಮಾಲೀಕರಿಂದ ವಾಹನಗಳನ್ನು ಪಡೆಯುತ್ತದೆ. ಅಂತೆಯೇ 2018ರ ಏ. 14ರಿಂದ ಮೇ. 12ರವೆರೆಗೆ ಖಾಸಗಿಯವರಿಂದ ದಿನವೊಂದಕ್ಕೆ ಕಾರ್​ಗೆ 2,347 ರೂ., ಗೂಡ್ಸ್ ವಾಹನಕ್ಕೆ 5,195, ಮ್ಯಾಕ್ಸಿ ಕ್ಯಾಬ್​ಗೆ 2794 ರೂ., ಲಘು ಗೂಡ್ಸ್ ವಾಹನ 2,482 ರೂ., ಖಾಸಗಿ ಬಸ್​ಗೆ 7101 ರೂ. ನಿಗದಿಗೊಳಿಸಿ ವಾಹನಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ಜತೆಗೆ ಚುನಾವಣೆಗೆ ವಾಹನಗಳನ್ನು ನೀಡದಿದ್ದರೆ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗಿತ್ತು.

ಜಿಲ್ಲಾ ಚುನಾವಣಾಧಿಕಾರಿಯವರ ಆದೇಶದಂತೆ ವಿಧಾನಸಭಾ ಕ್ಷೇತ್ರಗಳಿಗೆ ಕೊರತೆಗೆ ತಕ್ಕಂತೆ ವಾಹನಗಳನ್ನು ವಶಕ್ಕೆ ಪಡೆದು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ, ಚುನಾವಣೆ ಮುಗಿದು ಈಗ ಒಂದೂವರೆ ತಿಂಗಳಾಗಿದೆ. ಇನ್ನೂವರೆಗೂ ಚುನಾವಣೆ ಅಧಿಕಾರಿಗಳು ಬಾಡಿಗೆ ಹಣ ನೀಡಿಲ್ಲ ಎನ್ನಲಾಗಿದೆ. ಆದಷ್ಟು ಬೇಗ ಬಾಡಿಗೆ ಹಣ ನೀಡಬೇಕು ಎಂದು ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡಿದ್ದಾರೆ.

ಬಾಡಿಗೆಯಿಂದಲೇ ಜೀವನ: ಬಹುತೇಕ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರು ವಾಹನಗಳ ಬಾಡಿಗೆ ಹಣದಿಂದಲೇ ಜೀವನ ಸಾಗಿಸುತ್ತಿದ್ದಾರೆ. ಕ್ಷೇತ್ರದ ಚುನಾವಣೆ ಕರ್ತವ್ಯಕ್ಕಾಗಿ ಬಳಸಿಕೊಂಡ ಕಾರ್​ವೊಂದಕ್ಕೆ ಸುಮಾರು 68,150 ರೂ. ನೀಡಬೇಕಿದೆ. ವಾಹನಗಳ ತಪಾಸಣೆಗೂ ಮಾಲೀಕರ ಬಳಿ ಹಣವಿಲ್ಲದೇ ಕೂರುವ ಸ್ಥಿತಿ ನಿರ್ವಣವಾಗಿದೆ. ಜೂನ್ ತಿಂಗಳಲ್ಲಿ ಶಾಲಾ ಕಾಲೇಜ್​ಗಳು ಆರಂಭದ ಸಮಯ. ಈ ಸಂದರ್ಭದಲ್ಲಿ ಮಕ್ಕಳ ಶಾಲಾ ಶುಲ್ಕ ಸೇರಿದಂತೆ ಪಠ್ಯ ಸಾಮಗ್ರಿಗಳನ್ನು ಕೊಳ್ಳಲು ಹಣ ಬೇಕೇ ಬೇಕು. ಆದರೆ, ಹಣ ಹೊಂದಿಸಲು ವಾಹನಗಳ ಚಾಲಕರು ಹಾಗೂ ಮಾಲೀಕರು ಪರದಾಡುವ ಸ್ಥಿತಿ ನಿರ್ವಣವಾಗಿದೆ.

ಚುನಾವಣೆ ಕರ್ತವ್ಯ ನಿಮಿತ್ತ ಕಾರ್ಯನಿರ್ವಹಿಸಿದ ಖಾಸಗಿ ವಾಹನಗಳಿಗೆ ಹಣ ನೀಡಲು ಇಲಾಖೆಯಲ್ಲಿ ಅನುದಾನದ ಕೊರತೆ ಇದೆ. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದ್ದು, ಇದು ಕೇವಲ ಕ್ಷೇತ್ರದಲ್ಲಿ ಮಾತ್ರವಲ್ಲ, ರಾಜ್ಯದಲ್ಲಿ ಇದೇ ಪರಿಸ್ಥಿತಿ ಇದೆ.  – ರಾಮಮೂರ್ತಿ, ತಹಸೀಲ್ದಾರ್

ಕಾರುಗಳನ್ನು ಚುನಾವಣೆಗೆ ಒಂದು ತಿಂಗಳ ಮುಂಚೆ ನೀಡಲಾಗಿತ್ತು. ಒಂದು ತಿಂಗಳ ಕಾರ್ ಬಳಕೆಯಿಂದ ಟೈರ್ ಹಾಗೂ ಇತರೆ ವೆಚ್ಚಗಳನ್ನು ಮಾಲೀಕರೇ ನಿಭಾಯಿಸಿದ್ದಾರೆ. ಆದರೆ, ಈವರೆಗೂ ವಾಹನಗಳ ಮಾಲೀಕರಿಗೆ ಹಣ ನೀಡದೇ ಇರುವುದರಿಂದ ವಾಹನಗಳ ದುರಸ್ತಿಗೆ ಅನಾನುಕೂಲವಾಗಿದೆ. ಜತೆಗೆ ವಾಹನಗಳ ಚಾಲಕರಿಗೂ ವೇತನ ಪಾವತಿಸಲು ಕಷ್ಟವಾಗಿದೆ. –  ರಮೇಶ ಜಾಧವ, ಅಧ್ಯಕ್ಷರು, ಸ್ಥಳೀಯ ಟ್ಯಾಕ್ಸಿ ಮತ್ತು ಮಾಲಕರ ಸಂಘ