ತರಕಾರಿ ಮಾರುಕಟ್ಟೆ ಸ್ಥಳಾಂತರ ಸುಸೂತ್ರ

ಬೆಳಗಾವಿ: ನಗರದ ದಂಡು ಮಂಡಳಿ ಪ್ರದೇಶದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣಕ್ಕೆ ಸ್ಥಳಾಂತರಗೊಂಡಿರುವ ಸಗಟು ತರಕಾರಿ ಮಾರುಕಟ್ಟೆಗೆ ಮೊದಲ ದಿನವೇ ರೈತರು, ವ್ಯಾಪಾರಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಬಹುದಿನಗಳ ನಂತರ ತರಕಾರಿ ಮಾರುಕಟ್ಟೆ ಸ್ಥಳಾಂತರಗೊಂಡಿರುವುದಕ್ಕೆ ರೈತರು,ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಎಪಿಎಂಸಿ ಪ್ರಾಂಗಣದಲ್ಲಿ ಮಂಗಳವಾರ ನಡೆದ ಮೊದಲು ದಿನದ ತರಕಾರಿ ವಹಿವಾಟಿನಲ್ಲಿ ವಿವಿಧ ಜಿಲ್ಲೆಗಳಲ್ಲದೆ ನೆರೆಯ ಗೋವಾ, ಮಹಾರಾಷ್ಟ್ರ ರಾಜ್ಯಗಳಿಂದ ವ್ಯಾಪಾರಿಗಳು, ಮಧ್ಯವರ್ತಿಗಳು ಹಾಗೂ ರೈತರು ಭಾಗವಹಿಸಿದ್ದರು. ನಗರ ಪೊಲೀಸರು ತರಕಾರಿ ಮಾರುಕಟ್ಟೆ ಎಪಿಎಂಸಿಗೆ ಸ್ಥಳಾಂತರಗೊಂಡಿದೆ ಎಂದು ಹೇಳುತ್ತ ಜಿಲ್ಲೆಯ ವಿವಿಧ ಭಾಗಗಳಿಂದ ನಗರಕ್ಕೆ ತರಕಾರಿ ತುಂಬಿಕೊಂಡು ಬರುತ್ತಿದ್ದ ಲಾರಿಗಳನ್ನು ಎಪಿಎಂಸಿಗೆ ಕಳುಹಿಸಿ ಕೊಡುತ್ತಿದ್ದುದು ಗಮನ ಸೆಳೆಯಿತು.

ಜಿಲ್ಲೆಯ ವಿವಿಧ ಭಾಗಗಳಿಂದ ತರಕಾರಿ ತುಂಬಿಕೊಂಡು 150ಕ್ಕೂ ಅಧಿಕ ವಾಹನಗಳು ಎಪಿಎಂಸಿ ಮಾರುಕಟ್ಟೆಗೆ ಆಗಮಿಸುತ್ತಿದ್ದಂತೆ ವ್ಯಾಪಾರಿಗಳು ಸಿಹಿ ಹಂಚಿ ಬರಮಾಡಿಕೊಂಡರು. ಟ್ರಾೃಕ್ಟರ್, ಚಕ್ಕಡಿ ಹಾಗೂ ಬೈಕ್‌ಗಳ ಮೇಲೆ ತರಕಾರಿ ಮಾರಾಟ ಮಾಡಲು ಬಂದ ರೈತರಿಗೆ ಹೂವಿನ ಹಾರ ಹಾಕಿ ವ್ಯಾಪಾರಿಗಳು ಸ್ವಾಗತಿಸಿದರು. ಮಧ್ಯಾಹ್ನ 2ಗಂಟೆ ಆಗುತ್ತಿದ್ದಂತೆ ನೆರೆಯ ಗೋವಾ, ಮಹಾರಾಷ್ಟ್ರ ರಾಜ್ಯಗಳಿಂದ ತರಕಾರಿ ಖರೀದಿಸಲು ವ್ಯಾಪಾರಿಗಳು ಆಗಮಿಸಿದರು.

ರಾಜ್ಯ ಸರ್ಕಾರ ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿರುವ ಎಪಿಎಂಸಿ ಮಾರುಕಟ್ಟೆ ಮಾದರಿಯಲ್ಲಿ ಬೆಳಗಾವಿಯಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ 132 ಮಳಿಗೆಗಳನ್ನು ನಿರ್ಮಿಸಿದೆ. ಮಾರುಕಟ್ಟೆ ಆವರಣದಲ್ಲಿ ಈಗಾಗಲೇ 102 ಮಳಿಗೆಗಳನ್ನು ವ್ಯಾಪಾರಿಗಳಿಗೆ ಹಂಚಿಕೆ ಮಾಡಲಾಗಿದ್ದು, ಬಾಕಿ ಉಳಿದಿರುವ ಮಳಿಗೆಗಳನ್ನು ಶೀಘ್ರ ಹಂಚಿಕೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಎರಡನೇ ಹಂತದಲ್ಲಿ ಮಳಿಗೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದರು.

ಪೊಲೀಸ್ ಸಿಬ್ಬಂದಿ ನಿಯೋಜನೆ

ಎಪಿಎಂಸಿ ಪ್ರಾಂಗಣಕ್ಕೆ ಸಗಟು ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಿರುವ ಹಿನ್ನೆಲೆಯಲ್ಲಿ ದಂಡು ಮಂಡಳಿಯ ಪ್ರದೇಶದಲ್ಲಿ ಮೇ 14ರ ಬಳಿಕ ತರಕಾರಿ ವ್ಯಾಪಾರ ವಹಿವಾಟು ನಡೆಸಬಾರದು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದಕ್ಕೆ ಕೆಲ ವ್ಯಾಪಾರಿಗಳು ವಿರೋಧಿಸಿದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ದಂಡು ಮಂಡಳಿ ಪ್ರದೇಶ, ಎಪಿಎಂಸಿ ಮಾರುಕಟ್ಟೆ ಪ್ರದೇಶ, ನಗರ ರಸ್ತೆಗಳು, ವೃತ್ತಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಪೊಲೀಸ ಆಯುಕ್ತರು ತಿಳಿಸಿದ್ದಾರೆ.

ಮುಂದುವರಿದ ಪ್ರತಿಭಟನೆ: ನಗರದ ದಂಡು ಮಂಡಳಿ ಪ್ರದೇಶದಲ್ಲಿದ್ದ ಸಗಟು ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿರುವ ನಿರ್ಧಾರವನ್ನು ರಾಜ್ಯ ಸರ್ಕಾರ, ಜಿಲ್ಲಾಡಳಿತ ವಾಪಸ್ ಕೈಬಿಡಬೇಕು ಎಂದು ಆಗ್ರಹಿಸಿ ಜೈ ಕಿಸಾನ್ ತರಕಾರಿ ಮಾರುಕಟ್ಟೆ ಅಸೋಸಿಯೇಷನ್ ನೇತೃತ್ವದಲ್ಲಿ ಕೆಲ ವ್ಯಾಪಾರಿಗಳು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರವೂ ು ಮುಂದುವರಿದಿದೆ.

ನಗರದ ದಂಡು ಮಂಡಳಿ ಪ್ರದೇಶದಿಂದ ಎಪಿಎಂಸಿ ಆವರಣಕ್ಕೆ ತರಕಾರಿ ಸಗಟು ಮಾರುಕಟ್ಟೆ ಸ್ಥಳಾಂತರಗೊಂಡಿರುವುದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಎಲ್ಲ ರೀತಿಯ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ರೈತರು ಉತ್ಪನ್ನಗಳನ್ನು ನ್ಯಾಯಯುತ ಬೆಲೆಗೆ ಧೈರ್ಯವಾಗಿ ಮಾರಾಟ ಮಾಡಬಹುದು.ಗೋವಾ, ಮಹಾರಾಷ್ಟ್ರ ಒಳಗೊಂಡು ವಿವಿಧ ಕಡೆಯಿಂದ ವ್ಯಾಪಾರಿಗಳು ಮಾರುಕಟ್ಟೆಗೆ ಬಂದಿದ್ದು, ಪೊಲೀಸರು ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ.
| ಎಚ್.ಕೆ.ಗುರುಪ್ರಸಾದ್, ಕಾರ್ಯದರ್ಶಿ ಎಪಿಎಂಸಿ

Leave a Reply

Your email address will not be published. Required fields are marked *