ಕೃಷ್ಣಮೂರ್ತಿ ಪಿ.ಎಚ್ ಮಾಯಕೊಂಡ

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆ ಕುಸಿತ ಕಾಣುತ್ತಿದೆ. ಇದರಿಂದ ರೈತರು ಕಂಗಾಲಾಗಿ ತಲೆ ಮೇಲೆ ಕೈ ಹೊತ್ತು ಕೂರುವ ಸ್ಥಿತಿ ಉಂಟಾಗಿದೆ.
ತಾಲೂಕಿನ ಆನಗೋಡು, ಮಾಯಕೊಂಡ, ಅಣಜಿ ಹೋಬಳಿಗಳ ಹಲವು ಗ್ರಾಮಗಳ ರೈತರು ಬೋರ್ವೆಲ್ ನೀರಾವರಿಗೆ ತರಕಾರಿ, ಹಣ್ಣು, ಹೂವು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಟೊಮ್ಯಾಟೊ, ಮೆಣಸಿನಕಾಯಿ, ಬದನೆ, ಎಲೆಕೋಸು, ಸಿಹಿ ಕುಂಬಳ, ಸಾಂಬಾರ್ ಸೌತೆ, ಹೀರೆ, ಹಾಗಲ ಸೇರಿ ವಿವಿಧ ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದು, ರೈತರಿಗೆ ಲಾಭದ ಜತೆಗೆ ನಷ್ಟ ಅನುಭವಿಸುವಂತೆ ಮಾಡಿದೆ.
ಆನಗೋಡು ಹೋಬಳಿಯ ನೇರ್ಲಿಗೆ, ಸುಲ್ತಾನಿಪುರ, ಗಂಗನಕಟ್ಟೆ, ಈಚಘಟ್ಟ, ಕಂದನಕೋವಿ, ಹಾಲುವರ್ತಿ, ನಿರ್ಥಡಿ, ಗುಡಾಳು, ಗುಮ್ಮನೂರು, ನರಗನಹಳ್ಳಿ, ಚಿನ್ನಸಮುದ್ರ, ಮಾಯಕೊಂಡ ಹೋಬಳಿಯ ಕೊಡಗನೂರು, ಬೊಮ್ಮೇನಹಳ್ಳಿ, ಅಣ್ಣಾಪುರ, ಪರಶುರಾಂಪುರ, ದಿಂಡದಹಳ್ಳಿ, ದೊಡ್ಡ ಮಾಗಡಿ, ಎಚ್. ಬಸವಪುರ, ಹುಚ್ಚವನಹಳ್ಳಿ, ಹೆದ್ನೇ, ಬಳ್ಳಾಪುರ ಭಾಗದ ಗ್ರಾಮಗಳು ತರಕಾರಿ ಕಣಜಗಳಾಗಿವೆ.
ಕಳೆದೊಂದು ತಿಂಗಳಿನಿಂದ ಟೊಮ್ಯಾಟೊ ಬೆಲೆ ಪಾತಾಳಕ್ಕೆ ಕುಸಿದಿದ್ದು ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 5 ರಿಂದ 10 ರೂ. ಗಳಿಗೆ ಮಾರಾಟವಾಗುತ್ತಿದೆ.
ಪಾತಾಳಕ್ಕೆ ಕುಸಿದ ಬೆಲೆ: 25 ಕೆಜಿ ಟೊಮ್ಯಾಟೊ ಬಾಕ್ಸ್ಗೆ 100- 150 ರೂ., ಹಸಿ ಮೆಣಸಿನಕಾಯಿ ಕೆಜಿಗೆ 25- 30 ರೂ., ಬದನೇಕಾಯಿ 10 ಕೆಜಿ ಪ್ಯಾಕೆಟ್ಗೆ 50 ರೂ., ಈರೆ ಕೆಜಿಗೆ 10 ರೂ., ಹೂಕೋಸು ಕೆಜಿಗೆ 8 ರೂ.ಗೆ ಮಾರಾಟವಾಗುತ್ತಿರುವುದರಿಂದ ಮಾಡಿದ ಖರ್ಚು ಮೈಮೇಲೆ ಬರುತ್ತದೆ ಎನ್ನುವ ಆತಂಕದಲ್ಲಿ ರೈತರು ಹತಾಶರಾಗಿದ್ದಾರೆ.
ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪಿಸಿ: ತರಕಾರಿ, ಹಣ್ಣು, ಹೂವು ಬೆಳೆಗಾರರಿಗೆ ಸರ್ಕಾರ ಬೆಂಬಲ ಬೆಲೆಯನ್ನು ನಿಗದಿಗೊಳಿಸುವ ಮೂಲಕ ರೈತರಿಗೆ ನೆರವಾಗಬೇಕು. ಜತೆಗೆ ಅತಿ ಹೆಚ್ಚು ತರಕಾರಿ, ಹಣ್ಣು, ಹೂವು ಬೆಳೆಯುತ್ತಿರುವ ತಾಲೂಕಿನ ಆನಗೋಡು, ಮಾಯಕೊಂಡ, ಅಣಜಿ ಹೋಬಳಿಗಳಲ್ಲಿ ಕೋಲ್ಡ್ ಸ್ಟೋರೇಜ್ ಘಟಕಗಳನ್ನು ನಿರ್ಮಾಣ ಮಾಡಬೇಕು ಎಂದು ಹುಚ್ಚವ್ವನಹಳ್ಳಿ ಗ್ರಾಮದ ಪ್ರಗತಿಪರ ತರಕಾರಿ ಬೆಳೆಗಾರರಾದ ವಿ. ಸಂತೋಷ್, ಹರೀಶ್, ಎಚ್.ಟಿ. ಗಂಗಾಧರ್, ನಾಗರಾಜ್, ವಿರುಪಾಕ್ಷಪ್ಪ, ಜೆ. ಸಮಿವುಲ್ಲಾ ಅವರು ಒತ್ತಾಯಿಸುತ್ತಿದ್ದಾರೆ.
ಎರಡೂವರೆ ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆಯಲು ಸಸಿ ಒಂದಕ್ಕೆ 1ರೂ., ಗಿಡಗಳನ್ನು ಕಟ್ಟಲು, ಗೂಟ ಹಾಕುವುದು, ವಯರ್ ಹುರಿಕಟ್ಟುವುದು, ಕಳೆ, ರಸಗೊಬ್ಬರ, ಕೀಟನಾಶಕ, ಕೂಲಿ ಕಾರ್ವಿುಕರ ಖರ್ಚು ಸೇರಿ ಹಣ್ಣನ್ನು ಕಟಾವು ಮಾಡಿ ಮಾರುಕಟ್ಟೆ ತಲುಪಿಸುವವರೆಗೆ ಸುಮಾರು 1 ಲಕ್ಷ ಹಣ ಖರ್ಚಾಗಿದೆ.
| ನಿಂಗರಾಜ್, ಹೆದ್ನೇ ಗ್ರಾಮದ ರೈತ
ದಾವಣಗೆರೆ ಜಿಲ್ಲೆಯಲ್ಲಿ ಪ್ರಸ್ತುತ 500 ಹೆಕ್ಟರ್ಗಿಂತ ಹೆಚ್ಚಿನ ಪ್ರದೇಶದಲ್ಲಿ ಟೊಮ್ಯಾಟೊ, ಬದನೆ, ಹಸಿಮೆಣಸು ಬೆಳೆದಿದ್ದು ಈಗಾಗಲೇ ಕಟಾವಿಗೆ ಬಂದಿದೆ. ಮಾರುಕಟ್ಟೆಯಲ್ಲಿ ದರ ಏರಿಳಿತದಿಂದ ರೈತರಿಗೆ ಲಾಭ ನಷ್ಟ ತಂದುಕೊಡುತ್ತಿದೆ. ಹೊಸದಾಗಿ ಸುಮಾರು 300 ಹೆಕ್ಟರ್ಗಿಂತ ಹೆಚ್ಚಿನ ಪ್ರದೇಶದಲ್ಲಿ ಟೊಮ್ಯಾಟೊ ಸಸಿ ನಾಟಿ ಮಾಡಿರುವ ಅಂದಾಜಿದೆ.
| ರಾಘವೇಂದ್ರ ಪ್ರಸಾದ್, ಉಪನಿರ್ದೇಶಕ, ತೋಟಗಾರಿಕಾ ಇಲಾಖೆ
ಮಾರುಕಟ್ಟೆಯಲ್ಲಿ ಟೊಮ್ಯಾಟೊ ಹಣ್ಣಿನ ದರ ದಿಢೀರ್ ಕುಸಿತವಾಗಿದೆ. ತೀವ್ರತರನಾದ ಬಿಸಿಲು ಹಾಗೂ ಉಷ್ಣಾಂಶ ಜಾಸ್ತಿ ಇರುವುದರಿಂದ ಹೊರ ರಾಜ್ಯಗಳಿಗೆ ತುಂಬಿಸುವ ಖರೀದಿದಾರರು ಮಾರುಕಟ್ಟೆಗೆ ಬರುತ್ತಿಲ್ಲ. ಖರೀದಿದಾರರಿಲ್ಲದ ಕಾರಣ ತರಕಾರಿಗಳನ್ನು ಮಾರಾಟ ಮಾಡುವುದೇ ದುಸ್ತರವಾಗಿದೆ.
| ಸಿದ್ದಣ್ಣ, ಹೋಲ್ಸೇಲ್ ವರ್ತಕ, ದಾವಣಗೆರೆ ತರಕಾರಿ ಮಾರುಕಟ್ಟೆ