ಮಹಿಳೆಯರೇ ಅಡುಗೆ ಮಾಡುವ ಮುನ್ನಾ ಯೋಚಿಸಿ

ಚಿಕ್ಕಮಗಳೂರು: ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರುತ್ತಿರುವುದರಿಂದ ಮಹಿಳೆಯರು ದಿನವೂ ಅಡುಗೆ ಮಾಡುವ ಮುನ್ನ ಹತ್ತಾರು ಬಾರಿ ಯೋಚಿಸುವಂತಾಗಿದೆ.

ಬೆಲೆ ಏರಿಕೆಯಿಂದ ಕುಟುಂಬದ ಯಜಮಾನನ ಜೇಬು ಖಾಲಿಯಾಗುತ್ತಿದ್ದು, ತರಕಾರಿಗಳನ್ನು ತುಪ್ಪದಂತೆ ಎಚ್ಚರಿಕೆಯಿಂದ ಬಳಸುವಂತಾಗಿದೆ. ಮಧ್ಯವರ್ತಿಗಳ ಮುಖದಲ್ಲಿ ನಗು ಕಾಣುತ್ತಿದ್ದರೆ, ಗ್ರಾಹಕನ ಕಣ್ಣಲ್ಲಿ ನೀರು ಬರಲಾರಂಭಿಸಿದೆ. ತರಕಾರಿ ಬೆಲೆಗಳು 100 ರೂ. ಗಡಿ ಮುಟ್ಟಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕಾಲು ಕೆಜಿ ತೂಕದ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ.

ಒಂದು, ಎರಡು ಕೆಜಿ ತರಕಾರಿ ಖರೀದಿ ಮಾಡುತ್ತಿದ್ದ ಗ್ರಾಹಕರು ಈಗ 250 ಗ್ರಾಂ ಲೆಕ್ಕದಲ್ಲಿ ಅಗತ್ಯ ಇರುವಷ್ಟೇ ತರಕಾರಿ ಕೊಳ್ಳುತ್ತಿದ್ದಾರೆ. ಹೀಗಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಕಾಲು ಕೆಜಿಯದ್ದೇ ಸದ್ದಾಗಿದೆ. ಕೆಜಿ ದರ ಕೇಳಿದ ಗ್ರಾಹಕರು ಶಾಕ್ ಆಗುತ್ತಿರುವುದರಿಂದ ವ್ಯಾಪಾರಿಗಳು ಕಾಲು ಕೆಜಿ ದರ ಹೇಳಲಾರಂಭಿಸಿದ್ದಾರೆ.

ಈರುಳ್ಳಿ, ಟೊಮ್ಯಾಟೊ ಹೊರತುಪಡಿಸಿ ಇತರೆ ತರಕಾರಿ ಬೆಲೆ ನೂರರ ಗಡಿ ಮುಟ್ಟಿದೆ. ಇದೇ ಮೊದಲ ಬಾರಿಗೆ ಬೀನ್ಸ್ 100 ರೂ. ತಲುಪಿದೆ. ಮದುವೆ ಮತ್ತಿತರೆ ಸಮಾರಂಭ ಹೆಚ್ಚಾಗಿರುವುದರಿಂದ ಬೀನ್ಸ್​ಗೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ ಬೀನ್ಸ್ ಅನ್ನು ಸಮಾರಂಭ ಮಾಡುವವರು ಮಾತ್ರ ಕೆಜಿಗಟ್ಟಲೆ ಖರೀದಿ ಮಾಡುತ್ತಿದ್ದಾರೆ. ಗೃಹಬಳಕೆಗೆ ಗ್ರಾಹಕರು ಬೀನ್ಸ್ ಅನ್ನು ಗ್ರಾಂ ಲೆಕ್ಕದಲ್ಲಿ ಖರೀದಿ ಮಾಡುತ್ತಿದ್ದಾರೆ.

ದರ ಏರಿಕೆಗೆ ಕಾರಣಗಳು: ಜಾತ್ರೆ, ಮದುವೆ ಶುಭ ಸಮಾರಂಭಗಳು ಹೆಚ್ಚಾಗಿರುವುದು ಮತ್ತು ತರಕಾರಿ ಆವಕ ಕಡಿಮೆ ಆಗಿರುವುದರಿಂದ ಬೆಲೆ ಹೆಚ್ಚಾಗಲು ಕಾರಣವೆಂದು ಮಾರುಕಟ್ಟೆ ಮೂಲಗಳು ತಿಳಿಸುತ್ತಿವೆ. ಬೇರೆ ಜಿಲ್ಲೆಗಳಿಂದಲೂ ಈಗ ತರಕಾರಿ ಬರುವುದು ಕಡಿಮೆಯಾಗಿದೆ. ಆವಕ ಕಡಿಮೆಯಾಗಿ ಬೇಡಿಕೆ ಹೆಚ್ಚಾದಾಗ ದರ ಹೆಚ್ಚಳವಾಗುವುದು ಸಹಜ. ಜತೆಗೆ ಬೇಸಿಗೆ ಸಮಯವಾದ್ದರಿಂದ ಕೊಳವೆಬಾವಿ ಆಶ್ರಿತ ರೈತರು ಮಾತ್ರ ತರಕಾರಿ ಬೆಳೆಯುತ್ತಿದ್ದಾರೆ. ಉಳಿದಂತೆ ತರಕಾರಿ ಬೆಳೆ ಕಡಿಮೆಯಾಗಿದೆ.

ಬೇಸಿಗೆ ಸಮಯದಲ್ಲಿ ಜಾತ್ರೆ, ವಿವಾಹ ಕಾರ್ಯಕ್ರಮಗಳು ಹೆಚ್ಚಾಗಿವೆ. ಹೀಗಾಗಿ ತರಕಾರಿಯನ್ನು ಇಂಥ ಸಮಾರಂಭದಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಈ ಸಮಯದಲ್ಲೇ ಮಾರುಕಟ್ಟೆಯಲ್ಲಿ ತರಕಾರಿ ಆವಕ ಕಡಿಮೆ ಇರುವುದರಿಂದ ಬೆಲೆ ಹೆಚ್ಚಳವಾಗಿದೆ.

ನೀರಿಲ್ಲದ್ದರಿಂದ ಹಿಂದೇಟು: ಹಿಂಗಾರು ಮಳೆ ಒಂದೆರಡು ಬಾರಿ ಬಂದಿದೆ. ಆದರೆ ಭೂಮಿ ಹಸಿಯಾಗಿ ಅಂತರ್ಜಲ ವೃದ್ಧಿಯಾಗುವಂತೆ ಬಂದಿಲ್ಲ. ಹೀಗಾಗಿ ತರಕಾರಿ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಸುಡುವ ಬಿಸಿಲಿಗೆ ತರಕಾರಿ ಬೆಳೆಗೆ ಹೆಚ್ಚು ನೀರು ಬೇಕಾಗುತ್ತದೆ. ಉಷ್ಣಾಂಶ ಸರಾಸರಿ 34ರಿಂದ 36 ಡಿಗ್ರಿ ತಲುಪಿರುವುದರಿಂದ ಇಂಥ ಸಂದರ್ಭದಲ್ಲಿ ತರಕಾರಿ ಬೆಳೆ ಇಳುವರಿ ಸಹ ಕಡಿಮೆ. ಹೀಗಾಗಿ ರೈತರು ತರಕಾರಿ ಬೆಳೆಯಲು ಹೆಚ್ಚು ಮುಂದಾಗುತ್ತಿಲ್ಲ.

ಸಗಟು- ಚಿಲ್ಲರೆ ಮಾರಾಟ ವ್ಯತ್ಯಾಸ: ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ದರದ ಭಾರಿ ವ್ಯತ್ಯಾಸವಾಗಿದೆ. ಬೀನ್ಸ್ ಬೆಲೆ ಸಗಟು ಮಾರುಕಟ್ಟೆಯಲ್ಲಿ 50-60 ರೂ. ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 100 ರೂ. ಗಡಿ ದಾಟಿದೆ. ಹಸಿಮೆಣಸು 35-40 ರೂ. ಇದ್ದರೆ ಗ್ರಾಹಕರು 60 ರೂ.ಗೆ ಖರೀದಿಸಬೇಕಾಗಿದೆ. ಚಿಲ್ಲರೆ ಹಾಗೂ ಸಗಟು ಮಾರುಕಟ್ಟೆ ನಡುವೆ ದೊಡ್ಡ ಕಂದಕ ಉಂಟಾಗಿರುವುದರಿಂದ ತರಕಾರಿ ಬೆಳೆದವರು ಹಾಗೂ ಖರೀದಿಸುವವರಿಗೆ ದೊಡ್ಡ ಪೆಟ್ಟು ಬೀಳಲಾರಂಭಿಸಿದೆ. ಕಷ್ಟಪಟ್ಟು ದುಡಿಯುವ ರೈತನಿಗೆ ಮಾರುಕಟ್ಟೆ ನೈಜ ದರ ದೊರೆಯದೆ ಅದರ ಲಾಭ ಮಧ್ಯವರ್ತಿಗಳಿಗೆ ಆಗುತ್ತಿದೆ.