ತರಕಾರಿ ಮಾರುಕಟ್ಟೆ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

ಬೆಳಗಾವಿ: ನಗರದ ದಂಡು ಮಂಡಳಿ ಪ್ರದೇಶದಲ್ಲಿನ ತರಕಾರಿ ಸಗಟು ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸುವುದನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಸೋಮವಾರ ಜೈ ಕಿಸಾನ್ ತರಕಾರಿ ಮಾರುಕಟ್ಟೆ ಅಸೋಸಿಯೇಷನ್ ಸಂಘಟನೆಯ ನೇತೃತ್ವದಲ್ಲಿ ವ್ಯಾಪಾರಿಗಳು, ರೈತರು ಮಾರುಕಟ್ಟೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ರ‌್ಯಾಲಿ ನಡೆಸಿದರು.

ದಂಡುಮಂಡಳಿಯ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ತರಕಾರಿ ಸಗಟು ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುವವರಿಗೆ 144 ಕಲಂ ಜಾರಿ ಮಾಡಿ ಸ್ಥಳಾಂತರಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿಸುತ್ತಿದ್ದಾರೆ. ನಾವು ಏನು ಗಲಭೆ ಮಾಡಿಲ್ಲ. ನಮ್ಮ ಮೇಲೆ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ಮಾರುಕಟ್ಟೆಯ ಸ್ಥಳಾಂತರ ನಿರ್ಧಾರ ಕೈಬಿಡಬೇಕು ಎಂದು ಮನವಿ ಮೂಲಕ ವಿನಂತಿಸಿದರು.

ದಂಡುಮಂಡಳಿಯಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಸಾವಿರಾರು ಜನರು ತಮ್ಮ ಉಪ ಜೀವನ ನಡೆಸುತ್ತಿದ್ದಾರೆ. ಏಕಾಏಕಿ ಮಾರುಕಟ್ಟೆ ಸ್ಥಳಾಂತರಿಸುವುದರಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗುತ್ತದೆ. ಅನಾಹುತಗಳಿಗೆ ನೇರವಾಗಿ ಸರ್ಕಾರ ಹೊಣೆಯಾಗುತ್ತದೆ ಎಂದರು.
ಹಣ್ಣಿನ ವ್ಯಾಪಾರ, ತೆಂಗಿನ ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ದಂಡುಮಂಡಳಿಯ ಸಗಟು ತರಕಾರಿ ಮಾರುಕಟ್ಟೆಯಲ್ಲಿ 230 ಮಳಿಗೆಗಳಲ್ಲಿ ವ್ಯಾಪಾರಸ್ಥರು ವ್ಯವಹಾರ ನಡೆಸುತ್ತಿದ್ದಾರೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಮಳಿಗೆಗಳನ್ನು ತೆಗೆದುಕೊಂಡವರಿಗೆ ಮಾತ್ರ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ ಎಂದು ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಗಾಂಧಿನಗರದ ಹೆದ್ದಾರಿಯ ಪಕ್ಕದಲ್ಲಿ 11ಕೋಟಿ ರೂ. ವೆಚ್ಚದಲ್ಲಿ ಜೈ ಕಿಸಾನ್ ಸಗಟು ತರಕಾರಿ ವ್ಯಾಪಾರಸ್ಥರ ಸಂಘದಿಂದ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ನಾವು ದಂಡುಮಂಡಳಿಯವರ ವಿರುದ್ಧ ರಿಟ್ ಪಿಟಿಷನ್ ನಂ.10974/2017 ಅರ್ಜಿಯನ್ನು ಹಾಕಿ ಸ್ಥಳಾಂತರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇವೆ ಎಂದರು.

ದೇಶದ ಯಾವುದೇ ಮೂಲೆಯಲ್ಲಿ ವ್ಯಾಪಾರ, ಉದ್ಯೋಗ ಮಾಡಲು ಹಕ್ಕಿದೆ. ಮೂಲ ಹಕ್ಕುಗಳನ್ನು ಉಲ್ಲಂಘಿಸಿ ಮಾರುಕಟ್ಟೆ ಎಪಿಎಂಸಿಗೆ ಸ್ಥಳಾಂತರ ಮಾಡುತ್ತಿರುವುದು ಸರಿಯಲ್ಲ.ಇದನ್ನು ಕೈ ಬಿಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ವ್ಯಾಪಾರಿಗಳು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ದಿವಾಕರ ಪಾಟೀಲ, ಮೋಹನ ಮನೋಳ್ಕರ್, ರಾಮ ಹವಳ, ಇಕ್ಬಾಲ ಡೋಣಿ, ಸುನೀಲ ಭೋಸಲೆ, ಸುರೇಶ ಹವಳ, ಸಂಜಯ ಬಾಬಿ, ವಿಶ್ವನಾಥ ಪಾಟೀಲ, ರಾಜು ಡೋಣಿ ಸೇರಿದಂತೆ ಇನ್ನಿತರರು ಇದ್ದರು.

ಬೆಳಗಾವಿ ದಂಡು ಮಂಡಳಿ ಪ್ರದೇಶದಲ್ಲಿರುವ ತರಕಾರಿ ಮಾರುಕಟ್ಟೆ ಸ್ಥಳಾಂತರಿಸುವ ಕುರಿತು ಎಪಿಎಂಸಿ ಮಾರುಕಟ್ಟೆ ನಿರ್ದೇಶಕರು ಕ್ರಮ ಕೈಗೊಳ್ಳಲಿದ್ದಾರೆ. ಸ್ಥಳಾಂತರಕ್ಕೆ ಭದ್ರತೆ ನೀಡಲು ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮಾರುಕಟ್ಟೆ ಸ್ಥಳಾಂತರ ಸೂಕ್ತವಾದುದು.
| ಡಾ.ಆರ್.ವಿಶಾಲ, ಜಿಲ್ಲಾಧಿಕಾರಿ

Leave a Reply

Your email address will not be published. Required fields are marked *