ಹಸಿ ತರಕಾರಿಗಳಲ್ಲಿದೆ ಅಗಾಧವಾದ ಆರೋಗ್ಯ ಭಂಡಾರ

ತರಕಾರಿಗಳು ಆರೋಗ್ಯಕ್ಕೆ ಪೂರಕ ಎಂಬುದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಆದರೆ ಇತ್ತೀಚೆಗೆ ಅನೇಕರು, ‘ತರಕಾರಿಗಳಿಗೆ ರಾಸಾಯನಿಕ ಹಾಕುತ್ತಾರೆ. ಆದುದರಿಂದ ತರಕಾರಿ ಒಳ್ಳೆಯದಲ್ಲ’ ಎನ್ನುತ್ತಿದ್ದಾರೆ. ಸಾಧ್ಯವಾದಷ್ಟು ಸಾವಯವ ತರಕಾರಿಗಳನ್ನು ನಾವೇ ಹಿತ್ತಲಿನಲ್ಲಿ ಬೆಳೆದು ಉಪಯೋಗಿಸುವುದು ಸೂಕ್ತ. ಆದರೆ ಎಲ್ಲರಿಂದಲೂ ಇದು ಸಾಧ್ಯವಿಲ್ಲ. ತರಕಾರಿ, ಹಣ್ಣುಗಳನ್ನು ಉಪ್ಪು ಬೆರೆಸಿದ ಬಿಸಿನೀರಿನಲ್ಲಿ 2-3 ಗಂಟೆ ನೆನೆಸಿಟ್ಟು ನಂತರ ಉಪಯೋಗಿಸುವ ರೂಢಿಯನ್ನು ಬೆಳೆಸಿಕೊಳ್ಳಬಹುದು. ಇದನ್ನು ಬಿಟ್ಟು ಹಣ್ಣು-ತರಕಾರಿ ಉಪಯೋಗಿಸದೆ ಇರುವುದು ತಪ್ಪು.

ಒಂದು ವೇಳೆ ತರಕಾರಿಗಳಲ್ಲಿ ರಾಸಾಯನಿಕ ಅಂಶ ಉಳಿದಿದ್ದೇ ಆದಲ್ಲಿ ದೇಹವು ಅದನ್ನು ಗುರುತಿಸಿ ಮಲ, ಮೂತ್ರ, ಬೆವರುಗಳ ಮೂಲಕ ಹೊರಗೆ ಹಾಕುತ್ತದೆ. ತನಗೆ ಬೇಕಾಗುವ ಒಳ್ಳೆಯ ಪೋಷಕಾಂಶಗಳನ್ನು ಉಳಿಸಿಕೊಳ್ಳುತ್ತದೆ. ಹಣ್ಣು, ತರಕಾರಿಗಳು ವಿಷಯುಕ್ತ ಎಂದು ಆಪಾದಿಸುವವರು ಪೂರಿ, ವಡಾ, ಸಮೋಸಾ, ಮಿರ್ಚಿ, ಬಿಸ್ಕಿಟ್, ಬ್ರೆಡ್, ಪಪ್ಸ್, ಕೋಡುಬಳೆ, ಚಕ್ಕುಲಿ, ಈರುಳ್ಳಿ ಬಜ್ಜಿ ಮುಂತಾದ ಕರಿದ, ಅತಿಯಾಗಿ ಸಂಸ್ಕರಿಸಲ್ಪಟ್ಟ ಆಹಾರವನ್ನು ಸೇವಿಸುವುದು ದೇಹಕ್ಕೆ ಎಷ್ಟು ಹಾನಿಕರ ಎಂಬುದರ ಬಗ್ಗೆ ಯೋಚಿಸುವುದೇ ಇಲ್ಲ.

ಈ ರೀತಿಯ ಆಹಾರವನ್ನೇ ಹೆಚ್ಚಾಗಿ ಸೇವಿಸಿದಾಗ ದೇಹವು ಈ ಹೆಚ್ಚಾದ ಕ್ಯಾಲೋರಿಯನ್ನು ನಾಳೆ ಅಥವಾ ಇನ್ನೊಂದು ದಿನ ದೇಹ ಉಪವಾಸ ಬಿದ್ದರೆ ಬೇಕಲ್ಲ ಎಂದು ಲಿವರ್​ನ ಸಹಾಯದಿಂದ ಶೇಖರಿಸುತ್ತಾ ಹೋಗುತ್ತದೆ. ಆದರೆ ಈ ಆಧುನಿಕ ಸಂದರ್ಭದಲ್ಲಿ ಬಹುತೇಕರಿಗೆ ಆಹಾರ ಇಲ್ಲದೆ ಉಪವಾಸ ಬೀಳುವ ಪ್ರಮೇಯ ಬರುವುದಿಲ್ಲ. ಇದರಿಂದ ಈ ಸಂಗ್ರಹಗೊಂಡ ಆಹಾರವು ರಕ್ತನಾಳಗಳ ಬ್ಲಾಕ್​ಗೆ, ಹೃದಯರೋಗಕ್ಕೆ, ಬೊಜ್ಜಿಗೆ ಕಾರಣವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಆದುದರಿಂದ ಹಣ್ಣು, ತರಕಾರಿಗಳ ಬಗೆಗೆ ಆಪಾದನೆ ಮಾಡುವುದನ್ನು ಬಿಟ್ಟು ಅತಿಯಾಗಿ ಸಂಸ್ಕರಿಸಲ್ಪಟ್ಟ ಕೃತ್ರಿಮವಾದ, ಹೆಚ್ಚು ಪ್ರಿಸರ್ವೆಟಿವ್ಸ್ ಬಳಸಿರುವ ಕರಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ ಹಣ್ಣು ತರಕಾರಿಗಳನ್ನು ಹೆಚ್ಚು ಸೇವಿಸಲು ಆರಂಭಿಸೋಣ.

ಹಸಿ ತರಕಾರಿ ಸಲಾಡ್​ಗೆ ಕೊಬ್ಬರಿ ತುರಿ, ಶೇಂಗಾ, ನೆನೆಸಿದ ಬಾದಾಮಿ, ಗೋಡಂಬಿ, ಬೆಣ್ಣೆ, ಮೊಸರು ಮುಂತಾದ ಒಳ್ಳೆಯ ಕೊಬ್ಬು ಹೊಂದಿರುವ ಪದಾರ್ಥಗಳನ್ನು, ಕಾಳುಮೆಣಸನ್ನು ಹಾಕಿ ಮನೆಯಲ್ಲಿ ತಯಾರಿಸಿ ಸೇವಿಸುವುದು ಉತ್ತಮ.

Leave a Reply

Your email address will not be published. Required fields are marked *