ಅನಾವೃಷ್ಟಿ ತರಕಾರಿ ಕೃಷಿಗೆ ಬರ

ಪ್ರವೀಣ್‌ರಾಜ್ ಕೊಯಿಲ ಕಡಬ

ತರಕಾರಿ ಕೃಷಿಯಿಂದಲೇ ಹೆಚ್ಚು ಪರಿಚಯವಾಗಿರುವ ಕಡಬ ತಾಲೂಕಿನ ಚಾರ್ವಕ ಗ್ರಾಮದಲ್ಲಿ ಈ ಬಾರಿ ಮುಂಗಾರು ಮಳೆ ಕ್ಷೀಣಿಸಿದ್ದರಿಂದ ತರಕಾರಿ ಬೆಳೆಗೆ ಹಿನ್ನೆಡೆಯಾಗಿದೆ. ಜಿಲ್ಲೆಗೆ ಅತೀ ಹೆಚ್ಚು ತರಕಾರಿ ಇಲ್ಲಿಂದಲೇ ಪೂರೈಕೆಯಾಗುತ್ತಿದ್ದು, ಈ ಭಾಗದ ಹೆಚ್ಚಿನ ಕುಟುಂಬಗಳು ತರಕಾರಿ ಬೆಳೆಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿವೆ.

ಆದರೆ ಮುಂಗಾರು ಮಳೆಯ ಅಬ್ಬರವಿಲ್ಲದೆ ತರಕಾರಿ ಕೃಷಿ ಮಾಡುವ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಮಳೆ ನೀರನ್ನು ಆಶ್ರಯಿಸಿ ಬೆಳೆಯುವ ತರಕಾರಿ ಗಿಡಗಳಿಗೆ ಇತ್ತೀಚೆಗೆ ಸುರಿಯುವ ಅಲ್ಪ ಪ್ರಮಾಣದ ಮಳೆ ಸಾಕಾಗುತ್ತಿಲ್ಲ. ಹಾಗಾಗಿ ತರಕಾರಿ ಕೃಷಿಯನ್ನು ಜೀವನಾಧರವಾಗಿಸಿಕೊಂಡ ಈ ಭಾಗದ ಬಹಳಷ್ಟು ರೈತರಿಗೆ ತೊಂದರೆಯಾಗಿದೆ.

ಹೆಚ್ಚಾಗಿ ಮಳೆಗಾಲದಲ್ಲಿ ಮುಳ್ಳು ಸೌತೆ, ಹೀರೆಕಾಯಿ ಬೆಳೆಯುತ್ತಾರೆ. ಮೇ ತಿಂಗಳ ಅಂತ್ಯಕ್ಕೆ ತರಕಾರಿ ಬೀಜ ಹಾಕಿದರೆ ಜೂನ್ ತಿಂಗಳ ಮಧ್ಯದಲ್ಲಿ ಬಳ್ಳಿಗಳು ಚಪ್ಪರ ತುಂಬಿಕೊಳ್ಳುತ್ತವೆ. ಆಗಸ್ಟ್ ಆರಂಭದಲ್ಲಿ ತರಕಾರಿ ಕೊಯ್ಯುವ ಹಂತಕ್ಕೆ ತಲುಪುತ್ತದೆ. ಆದರೆ ಈ ಭಾರಿ ಇನ್ನೂ ತರಕಾರಿ ಬಳ್ಳಿಗಳು ಚಪ್ಪವೇರುವ ಹಂತಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಮಳೆಯ ಅಬ್ಬರ ಕಡಿಮೆಯಾದಲ್ಲಿ ಮತ್ತೆ ತರಕಾರಿ ಬೆಳೆಗೆ ಕುತ್ತು ಬರಲಿದೆ. ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಈ ವರ್ಷ ಮಳೆ ಅಭಾವದಿಂದ ಬೆಳೆ ಉತ್ಪನ್ನ ಕುಂಠಿತವಾಗಲಿದೆ ಎನ್ನುತ್ತಾರೆ ರೈತರು.

ಗ್ರಾಮದಲ್ಲಿ ತರಕಾರಿ ಬೆಳೆಯುವುದರಲ್ಲಿ ವಿದ್ಯಾವಂತ ಯುುವ ಸಮುದಾಯದ ಪಾಲು ಹೆಚ್ಚಾಗಿದೆ. ವೈಟ್ ಕಾಲರ್ ಜಾಬ್‌ಗೆ ಮಾರು ಹೋಗದೆ ತಮ್ಮದೆ ನೆಲದಲ್ಲಿ ಸಾಂಪ್ರದಾಯಿಕ ಕೃಷಿಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಕುಂಬಳಕಾಯಿ, ಪಡವಲಕಾಯಿ, ಅಲಸಂಡೆ, ಸೌತೆಕಾಯಿ ಮೊದಲಾದ ತರಕಾರಿಗಳನ್ನು ಬೆಳೆದು ಸಾವಿರಗಟ್ಟಲೇ ಲಾಭಗಳಿಸುತ್ತಿದ್ದಾರೆ

ಚಾರ್ವಾಕದ ಯುವಕರು ನೆರೆಯ ಕಾಣಿಯೂರು, ಬೆಳಂದೂರು, ಸವಣೂರು, ಪಾಲ್ತಾಡಿ ಮೊದಲಾದ ಗ್ರಾಮಗಳಲ್ಲಿ ಜಾಗವನ್ನು ಲೀಸ್‌ಗೆ ಪಡೆದು ತರಕಾರಿ ಕೃಷಿ ಮಾಡುತ್ತಾರೆ. ಜಿಲ್ಲೆಯ ಇನ್ನಿತರ ಕಡೆಯಲ್ಲೂ ತರಕಾರಿ ಕೃಷಿ ಮಾಡುವ ಮಂದಿಗೆ ಮಳೆ ಅಭಾವ ತೊಂದರೆ ನೀಡಿದೆ. ಕೆಲವೆಡೆ ಈಗಷ್ಟೆ ಬೀಜ ಬಿತ್ತನೆಗೆ ಆರಂಭಿಸಿದರೆ ಇನ್ನುಳಿದಂತೆ ಇನ್ನೂ ಕೃಷಿ ಕಾಯಕ ಆರಂಭವಾಗಿಲ್ಲ.

ಕಳೆದ ಹಲವು ವರ್ಷಗಳಿಂದ ತರಕಾರಿ ಕೃಷಿ ಮಾಡುತ್ತಿದ್ದೇನೆ. ಈ ಭಾಗದಲ್ಲಿ ಬೆಳೆದ ತರಕಾರಿಗಳನ್ನು ಮಂಗಳೂರು, ಸುಳ್ಯ ಭಾಗಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಬಾರಿ ಮಳೆ ಅಭಾವದಿಂದ ತರಕಾರಿ ಕೃಷಿ ತಡವಾಗಿದೆ. ಇತ್ತೀಚಿನ ಕೆಲ ದಿನಗಳಿಂದ ಸುರಿಯುವ ಅಲ್ಪ ಮಳೆಯನ್ನು ನಂಬಿ ತರಕಾರಿ ಕೃಷಿ ಪ್ರಾರಂಭ ಮಾಡಲಾಗಿದೆ. ಮಳೆ ಚೆನ್ನಾಗಿಯಾದರೆ ಹೆಚ್ಚು ಬೆಳೆ ನಿರೀಕ್ಷಿಸಬಹುದು.
ಮೋಹನ ನಾಣಿಲ, ತರಕಾರಿ ಕೃಷಿಕ

ಕಳೆದ ಇಪತ್ತು ವರ್ಷಗಳಿಂದ ಚಾರ್ವಾಕ ಭಾಗದ ರೈತರಿಂದ ತರಕಾರಿಗಳನ್ನು ಖರೀದಿಸುತ್ತೇನೆ. ಈ ಭಾರಿ ಈ ಭಾಗದ ತರಕಾರಿಗಳು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಮಳೆ ಪ್ರಮಾಣ ಕಡಿಮೆಯಾದ ಕಾರಣ ತರಕಾರಿ ಬೆಳೆ ಕಡಿಮೆಯಾಗಿ ಬೆಲೆ ಹೆಚ್ಚಾಗಬಹುದು.
ಶರೀಫ್ ಮಂಗಳೂರು, ತರಕಾರಿ ವ್ಯಾಪಾರಿ

Leave a Reply

Your email address will not be published. Required fields are marked *