ವರ್ಷಪೂರ್ತಿ ತರಕಾರಿ ಫಸಲು

ಸಂದೀಪ್ ಸಾಲ್ಯಾನ್ ಬಂಟ್ವಾಳ
ಕೃಷಿ ಮಾಡಬೇಕೆಂದರೆ ಸ್ವಂತ ಜಮೀನು ಇರಬೇಕೆಂದೇನಿಲ್ಲ, ಬಾಡಿಗೆಗೆ ಜಮೀನು ಪಡೆದೂ ಭರಪೂರ ಕೃಷಿ ಮಾಡಿ ಯಶಸ್ಸು ಗಳಿಸಬಹುದು ಎಂಬುದನ್ನು ಬಂಟ್ವಾಳದ ನಾವೂರು ಗ್ರಾಮದ ಕನಪಾದೆಯ ಎಡ್ವಿನ್ ನವೀನ್ ಡಿಸೋಜ ಸಾಧಿಸಿ ತೋರಿಸಿಕೊಟ್ಟಿದ್ದಾರೆ.

ಸುಮಾರು ಏಳು ಎಕರೆ ಜಮೀನು ಬಾಡಿಗೆಗೆ ಪಡೆದು ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ತರಕಾರಿ ಕೃಷಿ ಮಾಡಿ ಯಶಸ್ಸು ಕಾಣುತ್ತಿದ್ದಾರೆ ಎಡ್ವಿನ್ ನವೀನ್ ಡಿಸೋಜ. ಎಡ್ವಿನ್ ನವೀನ್‌ಗೆ ತರಕಾರಿ ಬೆಳೆಸುವುದರಲ್ಲಿ ವಿಪರೀತ ಆಸಕ್ತಿ. ಮನೆ ಸಮೀಪ ಕನಪಾದೆ ಎಂಬಲ್ಲಿ ಈ ಹಿಂದೆ 10 ಎಕರೆ ಜಮೀನು ಬಾಡಿಗೆ ಪಡೆದು ತರಕಾರಿ ಬೆಳೆಸುತ್ತಿದ್ದರು. ಇತ್ತೀಚಿನ ಎರಡು ವರ್ಷದಿಂದ ನಾವೂರು ಬೀದಿಯ ಫೆಲಿಕ್ಸ್ ಫಾರ್ಮ್ ಅನ್ನು ಬಾಡಿಗೆ ಪಡೆದು ಅದರಲ್ಲಿ ತರಕಾರಿ ಬೆಳೆಸುತ್ತಿದ್ದಾರೆ. ಸುರಿಯುವ ಮಳೆಯೇ ಇರಲಿ, ಸುಡುವ ಬಿಸಿಲೇ ಇರಲಿ ಇವರ ತೋಟದಲ್ಲಿ ತರಕಾರಿ ಸಮೃದ್ಧವಾಗಿ ಬೆಳೆದಿರುತ್ತದೆ. ಫೆಲಿಕ್ಸ್ ಫಾರ್ಮನ್ನು ಲೀಸ್‌ಗೆ ಪಡೆದುಕೊಂಡಿರುವ ಎಡ್ವಿನ್, ದೊಡ್ಡ ಪ್ರಮಾಣದಲ್ಲಿ ತರಕಾರಿ ಕೃಷಿ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಹೀರೆಕಾಯಿ, ಪಡುವಲಕಾಯಿ, ಚೀನಿಕಾಯಿ ಬೆಳೆಯುವ ಅವರು ಬೇಸಿಗೆಯಲ್ಲಿ ಸೋರೆಕಾಯಿ, ಬದನೆ, ತೊಂಡೆಕಾಯಿ ಬೆಳೆಸುತ್ತಾರೆ. ಪ್ರಸಕ್ತ ಎರಡು ಎಕರೆ ಜಾಗದಲ್ಲಿ ಸೋರೆಕಾಯಿ ಬೆಳೆಸಿದ್ದು ಗಿಡಗಳು ಬೆಳವಣಿಗೆ ಹಂತದಲ್ಲಿವೆ. ಮುಂದಿನ ಒಂದು ತಿಂಗಳಲ್ಲಿ ಗಿಡಗಳು ಫಲ ನೀಡಲಿವೆ.

ವ್ಯವಸ್ಥಿತ ರೀತಿ ಚಪ್ಪರ ನಿರ್ಮಾಣ
ಒಟ್ಟು 77 ಸಾಲುಗಳಲ್ಲಿ 30 ಗಿಡಗಳಂತೆ ಸೋರೆ ಗಿಡ ಬೆಳೆಸಲಾಗುತ್ತಿದೆ. 5 ಅಡಿ ಅಂತರಕ್ಕೆ ಒಂದು ಗಿಡದಂತೆ 9 ಅಡಿ ಅಂತರಕ್ಕೆ ಒಂದೊಂದು ಸಾಲು ನಿರ್ಮಿಸಲಾಗಿದೆ. ಬಳ್ಳಿಗಳು ಹಬ್ಬಲು ಎರಡು ಎಕರೆ ಜಮೀನಿಗೂ ಚಪ್ಪರ ನಿರ್ಮಿಸಿದ್ದು, ಅತ್ಯಂತ ವ್ಯವಸ್ಥಿತವಾಗಿ ತರಕಾರಿ ಬೆಳೆಯಲಾಗುತ್ತಿದೆ. ಈ ಹಿಂದೆ ಪೊದೆಗಳಿದ್ದ ಸ್ಥಳದಲ್ಲಿ ತರಹೇವಾರಿ ತರಕಾರಿ ಬೆಳೆದು ಕೃಷಿ ಯೋಗ್ಯ ಭೂಮಿಯಾಗಿ ಮಾರ್ಪಟ್ಟಿದೆ. ಕಳೆದ ವರ್ಷ ಎರಡು ಸಾವಿರ ಗೋಣಿ ಬದನೆ ಬೆಳೆದಿದ್ದರು. ಹೊರ ಭಾಗದಲ್ಲಿ ಬಾಳೆಯನ್ನು ಪರ್ಯಾಯ ಬೆಳೆಯಾಗಿ ಬೆಳೆಯುತ್ತಿದ್ದಾರೆ.

ಸಾವಯವ ಗೊಬ್ಬರ ಬಳಕೆ
ತರಕಾರಿ ಬೆಳೆಗೆ ಸಾವಯವ ಗೊಬ್ಬರವನ್ನೇ ಬಳಸುತ್ತಿದ್ದಾರೆ. ಹಟ್ಟಿ ಗೊಬ್ಬರ, ಕೋಳಿ ಹಿಕ್ಕೆ ಗೊಬ್ಬರ ಜತೆಗೆ ಸೆಗಣಿ ಹಾಗೂ ನೆಲಗಡಲೆ ಹಿಂಡಿ ಮಿಶ್ರಣ ಹಾಕುವುದರಿಂದ ಗಿಡಗಳು ಚೆನ್ನಾಗಿ ಬೆಳೆಯುವುದರೊಂದಿಗೆ ಉತ್ತಮ ಇಳುವರಿಯೂ ಲಭ್ಯ ಎನ್ನುತ್ತಾರೆ ಎಡ್ವಿನ್. ಎಡ್ವಿನ್ ಡಿಸೋಜ ಬೆಳೆಯುವ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಎರಡು ಎಕರೆಯಲ್ಲಿ ಬೆಳೆದ ಅಷ್ಟೂ ತರಕಾರಿಯನ್ನು ಮಂಗಳೂರಿನ ಕೇಂದ್ರ ಮಾರುಕಟ್ಟೆಗೆ ಸಾಗಿಸಲಾಗುತ್ತದೆ. ಅಲ್ಲಿ ಎಡ್ವಿನ್ ಅವರ ತರಕಾರಿಯನ್ನು ಗ್ರಾಹಕರು ಕೇಳಿ ಪಡೆದುಕೊಳ್ಳುವಷ್ಟು ಬೇಡಿಕೆ ಇದೆ.

ಕಳೆದ 15 ವರ್ಷಗಳಿಂದ ತರಕಾರಿ ಬೆಳೆಯುತ್ತಿದ್ದೇನೆ. ಎರಡು ವರ್ಷಗಳಿಂದ ಫೆಲಿಕ್ಸ್ ಫಾರ್ಮ್ ಅನ್ನು ಬಾಡಿಗೆಗೆ ಪಡೆದು ತರಕಾರಿ ಮಾಡುತ್ತಿದ್ದೇನೆ. ಇಳುವರಿ ಹೆಚ್ಚಾದಷ್ಟು ಉತ್ತಮ ಲಾಭ ಪಡೆಯಲು ಸಾಧ್ಯವಾಗುತ್ತದೆ
ಎಡ್ವಿನ್ ನವೀನ್ ಡಿಸೋಜ, ಕನಪಾದೆ, ತರಕಾರಿ ಕೃಷಿಕ

Leave a Reply

Your email address will not be published. Required fields are marked *