More

  ಕರಾವಳಿಯಲ್ಲಿ ‘ವೀಗನ್’ ಮದುವೆ

  ವೇಣುವಿನೋದ್ ಕೆ.ಎಸ್, ಮಂಗಳೂರು
  ಜಗತ್ತಿನೆಲ್ಲೆಡೆ ವೀಗನ್ ಆಹಾರ ಪದ್ಧತಿ ಪ್ರಚಲಿತವಾಗುತ್ತಿದೆ. ಸಸ್ಯಾಹಾರಕ್ಕಿಂತಲೂ ಹೆಚ್ಚು ಪರಿಸರ ಸ್ನೇಹಿ ಪದ್ಧತಿ ಎಂದೇ ಪರಿಗಣಿತವಾದ ವೀಗನಿಸಂ ಒಂದು ರೀತಿಯ ಚಳವಳಿಯೂ ಹೌದು.

  ಇದೀಗ ಕರಾವಳಿಯಲ್ಲಿ ವೀಗನ್ ಶೈಲಿಯ ವಿವಾಹವೂ ನೆರವೇರಿದೆ. ಕೇರಳ ಮೂಲದ ಕೊಲ್ಲಂನ ದಾಮೋದರ ಹೆಗ್ಡೆ ಮತ್ತು ಮಂಗಳೂರಿನ ಮಧುರಾ ಶೆಣೈ ಅಂಕೋಲಾದ ಅವರ್ಸೆ ಎಂಬಲ್ಲಿ ಫೆ.21ರಂದು ವಿವಾಹವಾಗಿದ್ದು, ಮಂಗಳೂರಿನಲ್ಲಿ 22ರಂದು ಆರತಕ್ಷತೆ ನಡೆದಿದೆ. ಲಭ್ಯ ಮಾಹಿತಿ ಪ್ರಕಾರ ಇಂತಹ ವಿವಾಹ ರಾಜ್ಯದಲ್ಲೇ ವಿರಳ, ಅದರಲ್ಲೂ ದ.ಕ ಜಿಲ್ಲೆಯಲ್ಲಿ ಮೊದಲನೆಯದು ಎಂದೇ ಹೇಳಲಾಗಿದೆ.
  ಎರಡು ಸಮಾರಂಭಗಳಲ್ಲೂ ವೀಗನ್ ಕ್ರಮಗಳನ್ನೇ ಅನುಸರಿಸಲಾಗಿದೆ. ಎರಡು ವರ್ಷಗಳಿಂದ ಮಧುರಾ, ಆರು ತಿಂಗಳಿನಿಂದ ದಾಮೋದರ್ ವೀಗನ್ ಜೀವನಶೈಲಿಯನ್ನು ಪಾಲಿಸುತ್ತಿದ್ದರು. ಹಾಗಾಗಿ ವಿವಾಹ ಪದ್ಧತಿಯಲ್ಲೂ ಕೆಲ ಬದಲಾವಣೆ ಮಾಡಿಕೊಂಡರು. ಹಾಲು ಮತ್ತು ಹಾಲಿನ ಉತ್ಪನ್ನ, ಜೇನುತುಪ್ಪ, ರೇಷ್ಮೆ, ಪ್ರಾಣಿಗಳ ಚರ್ಮ- ಕೂದಲು- ತುಪ್ಪಳ ಬಳಸಿದ ವಸ್ತುಗಳು ಇತ್ಯಾದಿ ಅನೇಕ ವಸ್ತುಗಳ ಬಳಕೆ ವೀಗನ್‌ಗಳಿಗೆ ವರ್ಜ್ಯ.

  ವಧುವಿಗೆ ರೇಷ್ಮೆ ಸೀರೆ ನೋ ನೋ..: ಭರ್ಜರಿ ವಿವಾಹವೆಂದರೆ ರೇಷ್ಮೆಯ ಸೀರೆ ಹಾಗೂ ಇತರ ವಸ್ತ್ರಗಳ ಮೆರವಣಿಗೆ ಇರಲೇಬೇಕು ಎಂದಾಗಿದೆ. ಆದರೆ ವೀಗನ್ ಆಗಿದ್ದರಿಂದ ಮಧುರಾ ಬಳಸಿದ್ದು ಕಾಟನ್, ಲಿನೆನ್, ರೇಯಾನ್, ಬಾಳೆನಾರಿನ ಸೀರೆಗಳನ್ನು! ಈ ಬಗ್ಗೆ ಮಧುರಾ ಶೆಣೈ ಹೀಳಿದ್ದಿಷ್ಟು: ಈಗ ವೀಗನ್ ಸೀರೆಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಹಾಗಾಗಿ ಆ ಬಗ್ಗೆ ಹೆಚ್ಚಿನ ಚಿಂತೆ ಇರಲಿಲ್ಲ. ಪ್ರಸಾಧನ ಸಾಮಾಗ್ರಿಯೂ ನೈಸರ್ಗಿಕ. ಚಿನ್ನದ ಮಂಗಳಸೂತ್ರದ ಬದಲು ಮಂಗಳಸೂತ್ರಕ್ಕೆ ಅರಿಸಿನ ಹಚ್ಚಿದ ದಾರ ಕಟ್ಟಿ ವರನು ವಧುವಿಗೆ ಮೂರುಗಂಟು ಹಾಕಿದ್ದು ವಿಶೇಷ. ನಾವಿಬ್ಬರೂ ಮದುವೆಗೆ ಮೊದಲೇ ವೀಗನ್ ಶೈಲಿಯನ್ನು ಅನುಸರಿಸುತ್ತಿದ್ದೆವು. ಆದರೆ ವಿವಾಹದಲ್ಲಿ ಈ ಪದ್ಧತಿಯನ್ನು ಅನುಸರಿಸಲು ಸಾಧ್ಯವೇ? ಕುಲಪುರೋಹಿತರಲ್ಲಿ ವಿಚಾರಿಸಿದಾಗ ಅವರು ವೀಗನ್ ವಿಧಾನದಲ್ಲೇ ವಿವಾಹ ನಡೆಸಲು ಒಪ್ಪಿಕೊಂಡದ್ದು ಇಬ್ಬರಿಗೂ ಖುಷಿಯಾಯಿತು. ಧಾರ್ಮಿಕ ಕಾರ್ಯದ ವೇಳೆ ಎಲ್ಲೆಲ್ಲಿ ಹಾಲಿನ ಬಳಕೆಯಾಗುತ್ತದೋ ಅಲ್ಲೆಲ್ಲ ಎಳನೀರನ್ನೇ ಬಳಕೆ ಮಾಡಲಾಗಿದೆ ಎಂದರು.

  ವೀಗನ್ ಆಹಾರ ವೈವಿಧ್ಯ: ಎರಡು ಸಮಾರಂಭದಲ್ಲೂ ಶುದ್ಧ ವೀಗನ್ ಶೈಲಿಯ ಆಹಾರಗಳನ್ನೇ ಉಣಬಡಿಸಲಾಗಿದೆ. ಮಂಗಳೂರಿನಲ್ಲಿ ಕೆಟರರ್ಸ್ ಸಂಸ್ಥೆಯೊಂದು ವೀಗನ್ ಭೋಜನ ಸಿದ್ಧಪಡಿಸಿದೆ. ಹ್ಯಾಂಗ್ಯೊದವರು ಹಾಲು, ಕೆನೆ ಉಪಯೋಗಿಸದೆ, ಕೋಕೊನಟ್ ಐಸ್‌ಕ್ರೀಮ್ ಪೂರೈಸಿದ್ದಾರೆ.

  ಪರಿಸರ ಪ್ರೇಮಿ ಜೋಡಿ: ಪರಿಸರ ರಕ್ಷಣೆಗೆ ತುಡಿಯುವ ಮನಸ್ಸು ಈ ಯುವ ಜೋಡಿಯದು. ದಾಮೋದರ್ ಮಂಗಳೂರಿನ ತಣ್ಣೀರುಬಾವಿ ಬೀಚ್ ಸ್ವಚ್ಛಗೊಳಿಸಲು ಗೆಳೆಯರೊಂದಿಗೆ ಸೇರಿ ಬೀಚ್ ರಿಜುವಿನೇಶನ್ ಎಂಬ ತಂಡದೊಂದಿಗೆ ಸ್ವಯಂಸೇವಕರಾಗಿ ದುಡಿದವರು. ಮಧುರಾ ಕೂಡ ಪರಿಸರದ ಕಾಳಜಿ ಹೊಂದಿರುವವರು. ಹಾಗಾಗಿ ತಮ್ಮ ವಿವಾಹಕ್ಕೆ ಹೂಗಳು, ತೆಂಗಿನ ಗರಿಗಳು ಬಣ್ಣದ ಬಟ್ಟೆಯ ಪರದೆಗಳು ಅಷ್ಟನ್ನೇ ಬಳಕೆ ಮಾಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts