ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಕನ್ನಡ ಕಿರುತರೆ, ಹಿರಿತೆರೆಯಲ್ಲಿ ಸತತ 12 ವರ್ಷಗಳಿಂದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ಬಾದಾಮಿ ಮೂಲದ ವೀರೇಶ್ ಬೊಮ್ಮಸಾಗರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. “ರಾಜರತ್ನಾಕರ’ ಎಂಬ ಚಿತ್ರದ ಮೂಲಕ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸುತ್ತಿದ್ದಾರೆ. “ಚಾರ್ಮಿನಾರ್’, “ಸಿದ್ಲಿಂಗು’ ಸಿನಿಮಾದಲ್ಲಿ ಬಾಲನಟನಾಗಿದ್ದ ಚಂದನ್ ರಾಜ್ ಪೂರ್ಣ ಪ್ರಮಾಣದ ನಾಯಕರಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಅಪ್ಸರಾ, ಚಂದನ್ ರಾಜ್ಗೆ ಜೋಡಿಯಾಗಿದ್ದು, ನಾಗರಾಜ್ ರಾವ್, ಯಮುನಾ ಶ್ರೀನಿಧಿ, ಚೇತನ್ ದುರ್ಗಾ, ಸಿದ್ದು, ಡಿಂಗ್ರಿ ನರೇಶ್ ಕಲಾ ಬಳಗದಲ್ಲಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯದಲ್ಲೇ ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. “ರಾಜರತ್ನಾಕರ’ ದುರಂಹಕಾರಿ, ಸೋಮಾರಿಯೊಬ್ಬನ ಕಥೆ. ಹಾಗೆಯೇ ಬೆಂಗಳೂರಿನ ಮಧ್ಯಮ ವರ್ಗದ ಜನರ ಜೀವನದ ಮೇಲೂ ಬೆಳಕು ಚೆಲ್ಲುವ, ದುರಂಹಕಾರಿ ಸೋಮಾರಿಯು ಇಲ್ಲಿ ಹೇಗೆ ಜೀವನ ಕಟ್ಟಿಕೊಳ್ಳುತ್ತಾನೆ? ಎಂಬುದನ್ನು ತೋರಿಸುವ ಪ್ರಯತ್ನ ಚಿತ್ರತಂಡದ್ದು.
ಎಲ್ಲರ ಮನೆಯಲ್ಲೂ ಇಂತಹ ವ್ಯಕ್ತಿಗಳು ಇರುವುದರಿಂದ ಇದು ಎಲ್ಲರಿಗೂ ಕನೆಕ್ಟ್ ಆಗುವ ಕಥೆ ಎನ್ನುವುದು ಚಿತ್ರತಂಡದ ಅನಿಸಿಕೆ. ಇಲ್ಲಿ ಮೂರು ಸಾಹಸ ದೃಶ್ಯಗಳು ಹಾಗೂ ಮೂರು ಹಾಡುಗಳಿವೆ. ಸಿದ್ದು ಕೆಂಚನಹಳ್ಳಿ ಛಾಯಾಗ್ರಹಣ, ಶಾಂತಕುಮಾರ್ ಸಂಕಲನ, ವಿಕ್ರಂ ಸಾಹಸ ನಿರ್ದೇಶನ, ಹರ್ಷವರ್ಧನ್ ರಾಜ್ ಸಂಗೀತ, ವಿ.ನಾಗೇಂದ್ರ ಪ್ರಸಾದ್ ಹಾಗೂ ಮಂಜುನಾಥ್ ರಾವ್ ಸಾಹಿತ್ಯ ಚಿತ್ರಕ್ಕಿದೆ.