| ಶಿವಕುಮಾರ ಮೆಣಸಿನಕಾಯಿ,
ಬೆಂಗಳೂರು: 3 ದಶಕಗಳಿಂದ ಕೇಂದ್ರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ವಂಚಿತವಾಗಿರುವ ವೀರಶೈವ-ಲಿಂಗಾಯತ ಸಮುದಾಯಕ್ಕೆ ನರೇಂದ್ರ ಮೋದಿ ಸಂಪುಟದಲ್ಲೂ ರಾಜ್ಯ ದರ್ಜೆಗಷ್ಟೇ ತೃಪ್ತಿ ಪಡುವಂತಾಗಿದ್ದು ನಿರಾಸೆ ಮೂಡಿಸಿದೆ. ಎಂ.ಎಸ್. ಗುರುಪಾದಸ್ವಾಮಿ, ವೀರೇಂದ್ರ ಪಾಟೀಲ್ ನಂತರ ಕಾಂಗ್ರೆಸ್, ಜನತಾ ಪಕ್ಷ, ತೃತೀಯ ರಂಗ, ಎನ್ಡಿಎ, ಯುಪಿಎ ಹೀಗೆ ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೂ ರಾಜ್ಯದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸಂಪುಟ ದರ್ಜೆ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿ ಬಿಜೆಪಿ ರಾಜ್ಯದಲ್ಲಿ 25 ಸ್ಥಾನ ಗೆದ್ದಿದ್ದು, ಈ ಪೈಕಿ 9 ಮಂದಿ ವೀರಶೈವ-ಲಿಂಗಾಯತರು. ಹೀಗಾಗಿ ಸಹಜವಾಗಿ ನಿರೀಕ್ಷೆ ಹೆಚ್ಚಿತ್ತು. ಅಂತಿಮವಾಗಿ ಬೆಳಗಾವಿ ಸಂಸದ ಸುರೇಶ್ ಅಂಗಡಿಗೆ ರಾಜ್ಯ ಸಚಿವ ಸ್ಥಾನ ನೀಡಿದ್ದು, ಕನಿಷ್ಠ ಸ್ವತಂತ್ರ ರಾಜ್ಯ ಸಚಿವ ಸ್ಥಾನವೂ ದಕ್ಕಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಮುದಾಯಕ್ಕೆ ಕಷ್ಟ. ಎಸ್. ನಿಜಲಿಂಗಪ್ಪ ದಿನಗಳಿಂದ ವೀರೇಂದ್ರ ಪಾಟೀಲ್ ಸಿಎಂ ಆಗಿರುವ ತನಕ ವೀರಶೈವ-ಲಿಂಗಾಯತ ಸಮುದಾಯ ಕಾಂಗ್ರೆಸ್ನತ್ತ ಒಲವು ತೋರುತ್ತ ಬಂದಿತ್ತು. ಈ ಮಧ್ಯೆ ದೇಶದಲ್ಲಿ ಜನತಾ ಚಳವಳಿ ಜನ್ಮ ತಾಳಿದಾಗ ಜನತಾ ಪರಿವಾರದತ್ತ ತನ್ನ ನಿಷ್ಠೆ ಪ್ರದರ್ಶಿಸಿತ್ತು. 90 ದಶಕದಲ್ಲಿ ಉಂಟಾದ ರಾಜಕೀಯ ಧ್ರುವೀಕರಣದ ನಂತರ ರಾಮಕೃಷ್ಣ ಹೆಗಡೆ ನೇತೃತ್ವದ ಲೋಕಶಕ್ತಿ ಕ್ರಮೇಣ ಬಿಜೆಪಿಯಲ್ಲಿ ವಿಲೀನಗೊಂಡು ಈ ಸಮುದಾಯ ಬಿಜೆಪಿಗೆ ಆಸರೆಯಾಗಿ ತನ್ನ ರಾಜಕೀಯ ನಿಲುವು ಬದಲಿಸಿತು. ಹೀಗಾಗಿ ಕಳೆದ 2 ದಶಕಗಳಿಂದ ಈ ಸಮುದಾಯ ಬಿಜೆಪಿಯನ್ನು ಬೆಂಬಲಿಸಿ ತನ್ನ ರಾಜಕೀಯ ಪ್ರಾಬಲ್ಯ ಮೆರೆಯುತ್ತಿದೆ. ಹೀಗಾಗಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸಿಎಂ ಆಗಲು ಸಾಧ್ಯವಾಯಿತು.2ದಶಕದ ವಿಧಾನಸಭೆ ಚುನಾವಣೆ ಗಮನಿಸಿದರೆ, ಉ.ಕ. 98 ಕ್ಷೇತ್ರದಲ್ಲಿ ಈ ಸಮುದಾಯದ ಶ್ರೀರಕ್ಷೆ ಬಿಜೆಪಿಗೆ ಹೆಚ್ಚಿದೆ.
ಕೇಂದ್ರದಲ್ಲಿದ್ದ ವೀರಶೈವ-ಲಿಂಗಾಯತರು
ಎಂ.ಎಸ್.ಗುರುಪಾದಸ್ವಾಮಿ ಹಾಗೂ ವೀರೇಂದ್ರ ಪಾಟೀಲ್ ಕ್ಯಾಬಿನೆಟ್ ಸಚಿವ ಸ್ಥಾನಕ್ಕೇರಿದ ಕರ್ನಾಟಕದ ವೀರಶೈವ-ಲಿಂಗಾಯತರು. ಯುಪಿಎ ಅವಧಿಯಲ್ಲಿ ಮಹಾರಾಷ್ಟ್ರದ ಶಿವರಾಜ್ ಪಾಟೀಲ್ ದೇಶದ ಗೃಹಮಂತ್ರಿ ಆಗಿದ್ದ ಮತ್ತೊಬ್ಬ ವೀರಶೈವ-ಲಿಂಗಾಯತರು. ಉಳಿದಂತೆ ಕೊಂಡಜ್ಜಿ ಬಸಪ್ಪ, ಎಂ.ರಾಜಶೇಖರಮೂರ್ತಿ, ಬಸವ ರಾಜೇಶ್ವರಿ, ಬಸವರಾಜ ಪಾಟೀಲ್ ಅನ್ವರಿ, ಎಂ.ವಿ.ರಾಜಶೇಖರನ್, ಸಿದ್ದು ನ್ಯಾಮಗೌಡ, ಜಿ.ಎಂ.ಸಿದ್ದೇಶ್ವರ ಸೇರಿ ಇನ್ನೂ ಹಲವಾರು ಕೇಂದ್ರ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದಾರೆ. ಇನ್ನು 1974ರಲ್ಲಿ ಬಿ.ಡಿ.ಜತ್ತಿ ಉಪ ರಾಷ್ಟ್ರಪತಿಯಾಗಿದ್ದರೆ, ಎಸ್.ನಿಜಲಿಂಗಪ್ಪ ಎಐಸಿಸಿ ಅಧ್ಯಕ್ಷರಾಗಿದ್ದರು.
ದಲಿತ ಸಮುದಾಯ ಕಡೆಗಣನೆ ಆರೋಪ
ರಾಜ್ಯದ ಏಳಕ್ಕೆ ಏಳೂ ಮೀಸಲು ಕ್ಷೇತ್ರಗಳಲ್ಲಿ ಜಯಸಾಧಿಸಿರುವ ಬಿಜೆಪಿ ಅಭ್ಯರ್ಥಿಗಳಾದ ರಮೇಶ ಜಿಗಜಿಣಗಿ, ಡಾ.ಉಮೇಶ್ ಜಾಧವ್, ರಾಜಾ ಅಮರೇಶ ನಾಯಕ್, ದೇವೇಂದ್ರಪ್ಪ, ಎ.ನಾರಾಯಣಸ್ವಾಮಿ, ಮುನಿಸ್ವಾಮಿ ಹಾಗೂ ವಿ.ಶ್ರೀನಿವಾಸ ಪ್ರಸಾದ್ಗೆ ಸ್ಥಾನ ಸಿಕ್ಕಿಲ್ಲ. ಇದರಿಂದ ಬಿಜೆಪಿ ದಲಿತ ಸಮುದಾಯವನ್ನು ಕಡೆಗಣಿಸಿದೆ ಎಂಬ ಅಸಮಾಧಾನ ಕಾಣಿಸಿಕೊಂಡಿದೆ.