ಏಕವಚನದಲ್ಲಿ ವೀರಪ್ಪಮೊಯ್ಲಿ ವಿರುದ್ಧ ಗರಂ ಆದ ಯಡಿಯೂರಪ್ಪ!

ಚಿಕ್ಕಬಳ್ಳಾಪುರ: ಮಾಜಿ ಸಿಎಂ ವೀರಪ್ಪ ಮೊಯ್ಲಿ‌ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಗರಂ ಆಗಿದ್ದು, ವೀರಪ್ಪ ಮೊಯ್ಲಿಗೆ ಅವನ ಕ್ಷೇತ್ರವನ್ನು ಸರಿಯಾಗಿ‌ ನೋಡಿಕೊಳ್ಳಲು ಆಗುತ್ತಿಲ್ಲ ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ.

ಓರ್ವ ಸಂಸದ, ಮಾಜಿ ಕೇಂದ್ರ ಮಂತ್ರಿಯಾಗಿ ತಮ್ಮ ಕ್ಷೇತ್ರವನ್ನು ಸರಿಯಾಗಿ‌ ನೋಡಿಕೊಳ್ಳುತ್ತಿಲ್ಲ. ವೀರಪ್ಪ ಮೊಯ್ಲಿ ಜವಾಬ್ದಾರಿ ಸ್ಥಾನದಲ್ಲಿದ್ದು, ಬೇಜಾವಾಬ್ದಾರಿ ಮಾತನ್ನು ಹೇಳಬಾರದು. ವೀರಪ್ಪ ಮೊಯ್ಲಿ ಸಂಸತ್ ಸದಸ್ಯರು ತಾನೇ? ಸಮಸ್ಯೆಗಳನ್ನು ಪ್ರಧಾನಿಗಾದಾರೂ ಅಥವಾ ಕೇಂದ್ರ ಸರ್ಕಾರದ ಗಮನಕ್ಕಾದರೂ ತಂದಿದ್ದಾರೆಯೇ? ಎಷ್ಟು ಬಾರಿ ಬರ ಪರಿಶೀಲನೆ ಮಾಡಿದ್ದಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರೋಪ‌ ಮಾಡುವುದು ಬಹಳ ಸುಲಭ. ಆದರೆ ವಿರೋಧ ಪಕ್ಷದ ನಾಯಕನಾಗಿ ನನ್ನ ಕರ್ತವ್ಯವನ್ನು ನಾನು ಮಾಡುತ್ತಿದ್ದೇನೆ. ಒಬ್ಬರ ಮೇಲೆ‌ ಒಬ್ಬರ ಬೆಟ್ಟು ತೋರಿಸೋಕೆ ನಾನು ಬಂದಿಲ್ಲ. ಬರಗಾಲಕ್ಕೆ ರಾಜ್ಯ ಸರ್ಕಾರ ಒಂದು ರೂಪಾಯಿ ಸಹ ಬಿಡುಗಡೆ ಮಾಡಿಲ್ಲ. ಟಾಸ್ಕ್‌ ಫೋರ್ಸ್‌ಗೆ ತಾಲೂಕುಗಳಿಗೆ ತಲಾ 50 ಲಕ್ಷ ರೂ.ಬಿಟ್ಟರೆ ನಯಾ ಪೈಸೆ ಬಿಟ್ಟಿಲ್ಲ. ಇದು ರಾಜ್ಯ ಸರ್ಕಾರಕ್ಕೆ ನನ್ನ ನೇರ ಆರೋಪ ಎಂದ‌ು ಹೇಳಿದರು.

ಕಾಂಗ್ರೆಸ್​ ಶಾಸಕರಿಗೆ ಆಫರ್​​ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಯಾರಿಗೂ ಆಫರ್ ನೀಡಿಲ್ಲ, ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ. ಬರ ಅಧ್ಯಯನ ಮಾಡುತ್ತಾ ಕಾಲ ಕಳೆಯುತ್ತಿದ್ದೇನೆ. ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ರಾಜ್ಯ ಸರ್ಕಾರ ಬರ ಪರಿಹಾರ ಕಾಮಗಾರಿ ಕೈಗೊಂಡಿಲ್ಲ. ಬರ ಪರಿಸ್ಥಿತಿ ನಿಭಾಯಿಸುವುದು ಬಿಟ್ಟು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಪಾಡಿಗೆ ನಾನು ಬರ ಪ್ರವಾಸ ಕೈಗೊಂಡಿದ್ದೇನೆ. 104 ಮಂದಿ ಜತೆಗೆ ಇಬ್ಬರು ಪಕ್ಷೇತರರು ವಿರೋಧ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಶಾಸಕರು ಬಡಿದಾಡಿಕೊಂಡರೆ, ಕಾಂಗ್ರೆಸ್‌ ಶಾಸಕರು ಮುನಿಸಿಕೊಂಡು ಹೋದರೆ ನಾನು ಜವಾಬ್ದಾರಿನಾ? ನನಗೇನು ಸಂಬಂಧ ಎಂದರು. (ದಿಗ್ವಿಜಯ ನ್ಯೂಸ್)