ವಿರಾಜಪೇಟೆ: ಕವನಗಳಲ್ಲಿ ಗಟ್ಟಿತನದ ಭಾವನೆಗಳಿರಬೇಕು. ಹಿಂದಿನ ಕಾವ್ಯ ಕವನಗಳಲ್ಲಿ ಗೇಯತೆ ಇರುವುದರಿಂದ ಅದು ಇಂದಿಗೂ ಉಳಿದುಕೊಂಡು ಮನೆಮಾತಾಗಿದೆ ಎಂದು ಹಿರಿಯ ಸಾಹಿತಿ ಗಿರೀಶ್ ಕಿಗ್ಗಾಲು ಹೇಳಿದರು.
ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್, ತೂಕ್ ಬೊಳಕ್, ಕಲೆ, ಕ್ರೀಡೆ, ಸಾಹಿತ್ಯ ಅಕಾಡಮಿ ಸಹಯೋಗದಲ್ಲಿ ಪೂಮಾಲೆ ಮಂದ್‌ನಲ್ಲಿ ಏರ್ಪಡಿಸಿದ್ದ ಸಂಕ್ರಾಂತಿ ಬಹುಭಾಷ ಕವಿಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯಕ್ಕೆ ಒಂದು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ ಇದೆ. ಉತ್ತಮ ಕಾವ್ಯ ರಚನೆಗಳು ಕೊನೆಯತನಕ ಉಳಿಯಬೇಕಾದರೆ ಗೇಯತೆ, ಅಲಂಕಾರಿಕ ಉಪಮಾಲಂಕಾರಿಕ, ರೂಪಕ ಅಲಂಕಾರಿಕ ಪದಗಳಿದ್ದರೆ ಮಾತ್ರ ಕೊನೆಯವರೆಗೆ ಉಳಿದುಕೊಳ್ಳುತ್ತದೆ. ಪ್ರಾಸಬದ್ಧ ಪದಗಳನ್ನು ಮರೆಯಲು ಸಾಧ್ಯವಿಲ್ಲ. ಕವನಗಳು ಅತ್ಯಂತ ಸರಳ ಭಾಷೆಯಲ್ಲಿರಬೇಕು. ಕನ್ನಡ ಭಾಷೆಯನ್ನು ಬಳಸುವಾಗ ಶುದ್ಧತೆಯನ್ನು ಅನುಸರಿಸಬೇಕು ಎಂದು ಹೇಳಿದರು.
ಸಾಹಿತಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕವನ, ಸಾಹಿತ್ಯಗಳನ್ನು ರಚಿಸಿ ಪುಸ್ತಕಗಳನ್ನು ಬಿಡುಗಡೆಗೊಳಿಸುವುದು ಸುಲಭದ ಮಾತಲ್ಲ. ಸಾಹಿತಿಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಹಾಗೂ ಸಹಾಯ ದೊರೆಯಬೇಕು ಎಂದು ಹೇಳಿದರು.
ಸಾಹಿತಿ ಚಿಪ್ಪಿಕಾರ್ಯಪ್ಪ ಬರೆದ ಚಿಂತನಾ ಪುಸ್ತಕವನ್ನು ಹಿರಿಯ ಸಾಹಿತಿ ಗಿರೀಶ್ ಕಿಗ್ಗಾಲು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುರಕ್ಷಾ ಶಂಕರ್ (ಅಂತಾರಾಷ್ಟ್ರೀಯ ಭರತನಾಟ್ಯ ಕಲಾವಿದೆ), ಬಿ.ಆರ್. ಸತೀಶ್ (ಚಿತ್ರಕಲೆ), ಟಿ.ಡಿ. ಮೋಹನ್, ಮಾಳೇಟಿರ ಅಜೀತ್ ಪೊನ್ನಣ್ಣ, ಬಟ್ಟಿಯಂಡ ಲಿಖಿತಾ ಪಳಂಗಪ್ಪ (ಹಾಡುಗಾರಿಕೆ) ಅವರನ್ನು ಸನ್ಮಾನಿಸಲಾಯಿತು.
ಕವಿಗೋಷ್ಠಿಯಲ್ಲಿ ಒಟ್ಟು 30 ಕವಿಗಳು ಕವನ ವಾಚಿಸಿದರು. ಅದರಲ್ಲಿ 7 ಕೊಡವ, 3 ಅರೆಭಾಷೆ ಗೌಡ, 1 ಕೊಂಕಣಿ, 19 ಕವನಗಳು ಕನ್ನಡದಲ್ಲಿದ್ದವು.
ಮಾಳೇಟಿರ ಅಜಿತ್ ಪೊನ್ನಣ್ಣ, ಬಟ್ಟಿಯಂಡ ಲಿಖಿತಾ ಪಳಂಗಪ್ಪ, ಟಿ.ಡಿ. ಮೋಹನ್ ಅವರ ಗಾಯನಕ್ಕೆ ಚಿತ್ರ ಕಲಾವಿದ ಬಿ.ಆರ್. ಸತೀಶ್ ಚಿತ್ರ ಬಿಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್, ಖಜಾಂಚಿ ಮುರುಳಿ, ತಾಲೂಕು ಅಧ್ಯಕ್ಷ ಮದೋಷ್ ಪೂವಯ್ಯ, ಸಾಹಿತಿಗಳಾದ ಪ್ರೊ.ದಂಬೆಕೋಡಿ ಸುಶೀಲಾ ಸುಬ್ರಮಣಿ, ತಾತಂಡ ರಾಣಿ ನಂಜಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಭುಕುಮಾರ್, ತೂಕ್ ಬೊಳಕ್ ಕಲೆ, ಕ್ರೀಡೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಶಂಕರಿ ಪೊನ್ನಪ್ಪ, ಕೇಶವ ಕಾಮತ್, ಬ್ರಿಗೇಡಿಯರ್ ಮತ್ತಿತರರು ಉಪಸ್ಥಿತರಿದ್ದರು.