ಶನಿವಾರಸಂತೆ: ವೀರಶೈವ ಸಂಘಟನಾ ವೇದಿಕೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ವೀರಭದ್ರೇಶ್ವರಸ್ವಾಮಿ ಜನ್ಮ ವಧರ್ಂತಿ ಮಹೋತ್ಸವವನ್ನು ಅ.1 ರಂದು ಆಚರಿಸಲಾಗುತ್ತಿದೆ ಎಂದು ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಜಯಂತಿ ಅಂಗವಾಗಿ ವಿವಿಧ ಕಡೆಗಳಲ್ಲಿ ಬಿಲ್ವಪತ್ರೆ ಮತ್ತು ರುದ್ರಾಕ್ಷಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭಕ್ತರಿಗೆ ವೀರಭದ್ರೇಶ್ವರಸ್ವಾಮಿಯ ಶಕ್ತಿಯನ್ನು ಪರಿಚಯಿಸುವ ಕಾರ್ಯ ಮಾಡಲಾಗುತ್ತಿದೆ. ಜಯಂತಿ ಅರ್ಥಪೂರ್ಣ ಆಚರಣೆಗೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.
ಮನೆಹಳ್ಳಿ ಮಠಾಧೀಶ ಶ್ರೀ ವಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಭಾಗದಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನಗಳಿಗೆ ವೀರಶೈವ ಸಂಘಟನಾ ವೇದಿಕೆ ಪದಾಧಿಕಾರಿಗಳು, ಹೋಬಳಿಯ ಸ್ವಾಮೀಜಿಗಳು, ಭಕ್ತರು ಜತೆಗೂಡಿ ತೆರಳಿ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ಅಂದು ಸಂಜೆ 5 ಗಂಟೆಗೆ ಶ್ರೀ ಕ್ಷೇತ್ರ ತಪೋವನ ಮನೆಹಳ್ಳಿ ಮಠದಲ್ಲಿ ಸಮಾರೋಪ ನಡೆಯಲ್ಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಕರೆ ನೀಡಿದರು.
ವೀರಶೈವ ಸಂಘಟನಾ ವೇದಿಕೆ ರಾಜ್ಯ ಕಾರ್ಯದರ್ಶಿ ಎಸ್.ಮಹೇಶ್ ಮಾತನಾಡಿ, ಅ.1 ರಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಮನೆಹಳ್ಳಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ವೀರಭದ್ರಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕಾರ್ಯ ನಡೆಯುತ್ತದೆ. ಬೆಳಗ್ಗೆ 8 ಗಂಟೆಗೆ ನೀರುಗುಂದ ವೀರಭದ್ರೇಶ್ವರ ದೇವಸ್ಥಾನಲ್ಲಿ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಬೆಳಗ್ಗೆ 10ಕ್ಕೆ ಕಿರಿಕೊಡ್ಲಿ, 11 ಗಂಟೆಗೆ ಕೊಡ್ಲಿಪೇಟೆ, ಮಧ್ಯಾಹ್ನ 12ಕ್ಕೆ ಚೌಡೇನಳ್ಳಿ, 12-45ಕ್ಕೆ ಶಿಡಿಗಳಲೆ, ಗೌಡಳ್ಳಿ, ಕೋಟೆಯೂರು, ನೇಗಳೆ ಗ್ರಾಮಗಳಲ್ಲಿರುವ ವೀರಭದ್ರೇಶ್ವರ ದೇವಸ್ಥಾನ ಮತ್ತು ಸಂಜೆ 5 ಗಂಟೆಗೆ ಶ್ಯಾನಬೊಗನಹಳ್ಳಿ ಗ್ರಾಮದ ದೇವಸ್ಥಾನಗಳಿಗೆ ಭೀಟಿ ನೀಡಿ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ಸಂಜೆ 6.30 ರಿಂದ ತಪೋವನ ಮನೆಹಳ್ಳಿ ಮಠದಲ್ಲಿ ದೇವರ ಉತ್ಸವ ನಡೆಸಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಎಚ್.ಎಂ.ದಿವಾಕರ್, ಸಿ.ವಿ.ಶಂಭುಲಿಂಗಪ್ಪ, ಸಿ.ಬಿ.ಪ್ರಸನ್ನ, ಡಿ.ಎಸ್.ಮಹೇಶ್, ದಯಾನಂದ್, ಎಂ.ಎಂ.ಪ್ರಕಾಶ್, ಡಿ.ಬಿ.ಸೋಮಪ್ಪ ಇದ್ದರು.