ಕಿಕ್ಕೇರಿ: ಗ್ರಾಮದಲ್ಲಿ ವೀರಭದ್ರೇಶ್ವರಸ್ವಾಮಿ ಹಬ್ಬವನ್ನು ಒಕ್ಕಲಿಗ ಸಮುದಾಯದವರು ಮಂಗಳವಾರ ವಿಶೇಷವಾಗಿ ಆಚರಿಸಿದರು.
ಹಬ್ಬದ ಸಲುವಾಗಿ ಶುಚಿಭ್ರೂತರಾಗಿ ಸಮುದಾಯದ ಮುಖಂಡರೊಂದಿಗೆ ಮಹಿಳೆಯರು ಗಂಗೇನಹಳ್ಳಿ ಕೆರೆಯ ತಪ್ಪಲಿನ ತೋಟಕ್ಕೆ ಸಾಗಿದರು. ಬಳಿಕ ವೀರಭದ್ರೇಶ್ವರಸ್ವಾಮಿ ಹಾಗೂ ಸ್ವಾಮಿಯ ಭಂಟರಾದ ಸೋಮ, ಚೋಮರ ಗದ್ದುಗೆ ನಿರ್ಮಿಸಿದರು. ಸೇವಂತಿಗೆ ಮತ್ತಿತರ ಪುಷ್ಪಗಳಿಂದ ಶೃಂಗರಿಸಿ ಕುಂಕುಮ, ಅರಿಶಿಣದಿಂದ ಗದ್ದುಗೆಯನ್ನು ವರ್ಣಮಯ ಮಾಡಿದರು. ಧೂಪ, ದೀಪಧಾರತಿ ಬೆಳಗಿದರು. ಬೆಲ್ಲದನ್ನ, ಅವಲಕ್ಕಿ ಹಣ್ಣುಕಾಯಿ ರಸಾಯನ, ಸಿಹಿಪೊಂಗಲುವಿನ ನೈವೇದ್ಯ ತಯಾರಿಸಿ ದೇವರಿಗೆ ಸಮರ್ಪಿಸಿದರು.
ನಂತರ ವೀರಭದ್ರಸ್ವಾಮಿಯ ಭಂಟರು ಕುರಿ, ಕೋಳಿ ಬಲಿ ನೀಡಿದರು. ಮಹಿಳೆಯರು ಹೊಸ ಉಡುಗೆ ತೊಟ್ಟು ಸಂಭ್ರಮಿಸಿದರು. ಗ್ರಾಪಂ ಅಧ್ಯಕ್ಷ ಕೆ.ಜಿ. ಪುಟ್ಟರಾಜು, ಮುಖಂಡರಾದ ಹೋಂಗಾರ್ಡ್ ಚಂದ್ರಶೇಖರಯ್ಯ, ಜಯಪಾಲ್, ಕೆ.ಜಿ. ಪಾಪಣ್ಣ, ಇಂದ್ರೇಶ್, ಅಣ್ಣಯ್ಯ, ಬೋರೆಮಂಜು, ದಿನೇಶ್, ಕೆ.ಜಿ. ತಮ್ಮಣ್ಣ, ಸುರೇಶ್ ಮತ್ತಿತರರಿದ್ದರು.