ದಾವಣಗೆರೆಯಲ್ಲಿ ವಿಜೃಂಭಣೆಯಿಂದ ನೆರವೇರಿದ ಹಳೇಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ಗುಗ್ಗಳ, ಉತ್ಸವ

ದಾವಣಗೆರೆ: ನಗರದ ಹಳೇಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ಗುಗ್ಗಳ, ಅಗ್ನಿಕುಂಡ ಮತ್ತು ಉತ್ಸವ ಕಾರ್ಯಕ್ರಮ ಗುರುವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಹೂವು, ಮಾವಿನ ತೋರಣ, ಬಾಳೆ ಕಂದುಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿತ್ತು. ಸ್ವಾಮಿಯ ದರ್ಶನಕ್ಕಾಗಿ ಭಕ್ತರ ದಂಡು ಹರಿದು ಬಂದಿತು. ಮಹಿಳೆಯರು, ಮಕ್ಕಳು ಸೇರಿ ಕುಟುಂಬದ ಸದಸ್ಯರೆಲ್ಲ ದೇವಸ್ಥಾನಕ್ಕೆ ಬಂದು ಭಕ್ತಿ ಸಮರ್ಪಿಸಿದರು. ಸ್ವಾಮಿಗೆ ಹಣ್ಣು, ಕಾಯಿ, ನೈವೇದ್ಯ ಅರ್ಪಿಸಿದರು.

ಎಲ್ಲೆಲ್ಲೂ ವೀರಭದ್ರ ಸ್ವಾಮಿಯ ನಾಮಸ್ಮರಣೆ ಕೇಳಿಬಂದಿತು. ವೀರಭದ್ರೇಶ್ವರ ಮಹಾರಾಜ್ ಕೀ ಜೈ, ಹರ ಹರ ಮಹಾದೇವ ಘೋಷಣೆ ಮೊಳಗಿದವು. ಸಮಾಳದ ಸದ್ದಿಗೆ ಪುರವಂತರು ಹೆಜ್ಜೆ ಹಾಕಿದರು. ಒಡಪುಗಳನ್ನು ಹೇಳಿದರು.

ಸಂಪ್ರದಾಯದಂತೆ ಭಕ್ತರ ಸಮ್ಮುಖದಲ್ಲಿ ಗುಗ್ಗಳದ ನಿಶಾನಿ ಹರಾಜು ಮಾಡಲಾಯಿತು. ನಂತರ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಸ್ವಾಮಿಯ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ನೆರವೇರಿತು. ಹರಕೆ ಹೊತ್ತಿದ್ದ ಭಕ್ತರು ಪುರವಂತರಿಂದ ಶಸ್ತ್ರ ಹಾಕಿಸಿಕೊಂಡರು. ಸ್ವಾಮಿಯ ರಥೋತ್ಸವ ಏ. 19ರಂದು ಶುಕ್ರವಾರ ಸಂಜೆ 7 ಗಂಟೆಗೆ ಜರುಗಲಿದೆ.

ಕೆಂಡ ಹಾಯ್ದ ಎಸ್ಸೆಸ್ಸೆಂ: ದೇವಸ್ಥಾನದ ಮುಂದಿರುವ ಕುಂಡದಲ್ಲಿ ಕೆಂಡ ಹಾಯುವುದು ಈ ಉತ್ಸವದ ವಿಶೇಷ. ಪ್ರತಿ ವರ್ಷದಂತೆ ಈ ಬಾರಿಯೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕೆಂಡ ಹಾದು ಸ್ವಾಮಿಗೆ ಭಕ್ತಿ ಸಮರ್ಪಿಸಿದರು. ಅವರೊಂದಿಗೆ ಪುತ್ರಿ ಶ್ರೇಷ್ಠಾ, ಸಹೋದರ, ಉದ್ಯಮಿ ಎಸ್.ಎಸ್. ಗಣೇಶ್ ಅವರೂ ಕೆಂಡ ಹಾಯ್ದರು.

ಜತೆಗೆ ಮಹಿಳೆಯರು, ಮಕ್ಕಳು, ವೃದ್ಧರೂ ಸೇರಿದಂತೆ ಹಲವಾರು ಭಕ್ತರು ಕೆಂಡ ಹಾಯ್ದರು. ಕೆಲವರು ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಕೆಂಡ ತುಳಿದಿದ್ದು ಕಂಡುಬಂತು.

Leave a Reply

Your email address will not be published. Required fields are marked *